ಯಶವಂತ ಹೋದಾ… ಮುಂದ?

0
172

ಭಾನುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸಾಪ್ತಾಹಿಕ ಸೌರಭದಲ್ಲಿ ಪ್ರಕಟವಾದ ನುಡಿನಮನ

– ಪ್ರಶಾಂತ ಆಡೂರ

‘ಏ, ಬರೋ ಸಂಡೆ ಏನ ಪ್ರೋಗ್ರಾಮ್ ಅದ ನಿಂದ’ ಅಂತ ಒಂದ ಸರತೆ ಫೋನ್ ಮಾಡಿದಾ. ನಾ ಹಿಂದ ಮುಂದ ವಿಚಾರ ಮಾಡಲಾರದ, ‘ಏ, ಫ್ರೀ ಇದ್ದೇನಿ, ಹೇಳಲಾ’ ಅಂತ ಅಂದಬಿಟ್ಟೆ.

‘ಹೌದ, ಛಲೋ ಆತ. ನಮ್ಮ ಆದಿರಂಗ ಥೇಟರ್ ಒಳಗ ಸಂಡೇ ನನ್ನ ಹೊಸಾ ನಾಟಕದ್ದ ರಿಹರ್ಸಲ್ ಇಟ್ಗೊಂಡೇನಿ, ಗಂಡಾ ಹೆಂಡ್ತಿ ಮಕ್ಕಳು ಎಲ್ಲಾರೂ ಬರ್ರಿ’ ಅಂತ ಅಂದ.

ಯಪ್ಪಾ, ಯಾಕರ ನಾ ಇವಂಗ ಫ್ರೀ ಇದ್ದೇನಿ ಅಂದೆ ಅಂತ ಅನಸಲಿಕತ್ತ. ನಮಗ ಇರೋದ ಒಂದ ಸಂಡೇ, ಇನ್ನ ಹಂತಾದರಾಗ ಎರೆಡ ತಾಸ ನಾಟಕ ನೋಡ್ಲಿಕ್ಕೆ ಹೋದರ ಹೆಂಗ ಅಂತ ವಿಚಾರ ಮಾಡಿ, ‘ದೋಸ್ತ, ಎರೆಡೆರಡ ತಾಸಗಟ್ಟಲೇ ನಾಟಕ ನೋಡ್ಲಿಕ್ಕೆ ಬರಲಿಕ್ಕೆ ಆಗಂಗಿಲ್ಲಪಾ. ನನ್ನವು ಬ್ಯಾರೆ ಕೆಲಸ ಅವ’ ಅಂತ ನಾ ಉಲ್ಟಾ ಹೊಡದೆ.

‘ಈಗರ ಫ್ರೀ ಇದ್ದೇನಿ ಅಂತ ಅಂದ, ಈಗ ನನ್ನ ನಾಟಕದ್ದ ರಿಹರ್ಸಲ್ ನೋಡ್ಲಿಕ್ಕೆ ಬಾ ಅಂದರ ಬ್ಯೂಸಿ ಇದ್ದೇನಿ ಅಂತ ನಾಟಕ ಮಾಡಬ್ಯಾಡಾ. ಸುಮ್ಮನ ಬಾಯಿ ಮುಚಗೊಂಡ ಬಾ. ಆಮ್ಯಾಲೆ ಅಲ್ಲೆ ಊಟದ್ದ ವ್ಯವಸ್ಥಾನೂ ಮಾಡೇನಿ’ ಅಂತ ಅಂದ, ಮುಂದ ನಾ ‘ಇಲ್ಲೋ, ಖರೇನ ನನ್ನವು ಭಾಳ ಕೆಲಸವ. ನೀ ಸುಳ್ಳ ನನ್ನ ಜೀವಾ ತಿನ್ನಬ್ಯಾಡಾ’ ಅಂತ ನಂಗ ಹೇಳಲಿಕ್ಕೂ ಅವಕಾಶ ಕೊಡಲಾರದ ಫೋನ್ ಕಟ್ ಮಾಡಿಬಿಟ್ಟ.

ಮುಂದ? ಮುಂದೇನ… ಅಂವಾ ಪಾಪ ಇಷ್ಟ ಪ್ರೀತಿಯಿಂದ ಕರದಾನ, ಮ್ಯಾಲೆ ಊಟದ ವ್ಯವಸ್ಥಾನೂ ಮಾಡ್ಯಾನ ಅಂದ ಮ್ಯಾಲೆ ಹೋಗಲಿಲ್ಲಾ ಅಂದರ ಹೆಂಗ ನಡಿತದ? ಅದು ಅಗದಿ ಮನಿ ಹತ್ತರ. ನನ್ನ ಹೆಂಡ್ತಿಗೆ ಹಿಂಗ ಯಶವಂತ ಕರದಾನ ಅನ್ನೋದ ತಡಾ, ಅಕಿ ಒಂದ ಹೊಡ್ತಕ್ಕ ‘ಛಲೋ ಆತ ನಡೀರಿ. ನಾನೂ ನಾಟಕ ನೋಡಲಾರದ ಭಾಳ ವರ್ಷ ಆತ’ ಅಂತ ರೆಡಿ ಆದ್ಲು. ಮುಂದ…? ಮುಂದ ಗಂಡಾ ಹೆಂಡ್ತಿ ದಂಪತ್ ನಾಟಕದ ರಿಹರ್ಸಲ್ ನೋಡಿ ಹೊಟ್ಟಿ ತುಂಬ ನಕ್ಕನಕ್ಕ ಬಂದ್ವಿ.

ಹಂಗ ನಂಗ ಈ ನಾಟಕ, ರಂಗಭೂಮಿ, ರಂಗ ಕಲಾವಿದರು ಅಷ್ಟ ಪರಿಚಯ ಇದ್ದಿದ್ದಿಲ್ಲ. ಯಶವಂತ ನನಗ ಮೊದ್ಲಿಂದ ದೋಸ್ತನೂ ಅಲ್ಲ. ಯಶವಂತ ಸರದೇಶಪಾಂಡೆ ಹೆಸರ ಕೇಳಿದ್ದೆ, ಅವನ ಆಲ್ ದಿ ಬೆಸ್ಟ್ , ರಾಶಿ ಚಕ್ರ ನಾಟಕ ನೋಡಿದ್ದೆ. ಅಂವಾ ಹಾಸ್ಯ ಕಲಾವಿದ, ನಾಟಕಕಾರ, ನಿರ್ದೇಶಕ, ರಂಗಕರ್ಮಿ ಅಂತೆಲ್ಲ ಫೇಮಸ್ ಇದ್ದದ್ದ ಗೊತ್ತಿತ್ತ.

ನಂದೂ ಅವಂದು ಗೋತ್ರ ಕೂಡಿದ್ದ ಒಂದು – ಇಬ್ಬರೂ ಹುಬ್ಬಳ್ಳಿಯವರು ಅಂತ. ಇನ್ನೊಂದು – ಇಬ್ಬರದು ಮಾತೃಭಾಷೆ… ಆಡಭಾಷೆ. ಅದರಾಗೂ ಚೊಕ್ಕ ನಮ್ಮ ಹುಬ್ಬಳ್ಳಿ ಆಡಭಾಷೆ. ನಾ ಆಡಭಾಷೆ ಒಳಗ ಬರೇ ಬರದರ ಅಂವಾ ನಮ್ಮ ಆಡಭಾಷಾನ್ನ ಮಾತಾಡಿ ತೋರಿಸಿದ, ಆಡಿ ತೋರಿಸಿದ, ನಟಿಸಿ ತೋರಸಿದ. ಚಿತ್ರರಂಗದೊಳಗ, ರಂಗಭೂಮಿ ಒಳಗ ನಮ್ಮ ಹುಬ್ಬಳ್ಳಿ ಭಾಷಾದ ಸೊಗಡನ್ನ ಬಳ್ಳಿ ಹಂಗ ಹಬ್ಬಿಸಿದ ಕೀರ್ತಿ ಅವಂದ.

ಅಂವಾ ಯಾವಾಗ ನಮ್ಮ ಹುಬ್ಬಳ್ಳಿ ಒಳಗ ಆದಿರಂಗಾ ಕಟ್ಟಲಿಕ್ಕೆ ಶುರು ಮಾಡಿದಾ ಆವಾಗಿಂದ ನಂದ ಅವಂದ ದೋಸ್ತಿ ಜೋರ ಆತ. ಮುಂಜಾನೆ ವಾಕಿಂಗ್ ಹೋದಾಗ ಭೆಟ್ಟಿ ಆಗ್ತಿದ್ದ. ಅವನ ಜೊತಿ ಪೂಣಾ, ಮುಂಬಯಿ, ಬೆಂಗಳೂರಿಂದ ಬಂದ ರಂಗ ಕಲಾವಿದರನ ವಾಕಿಂಗ್‌ಗೆ ಕರಕೊಂಡ ಬಂದಾಗ ನನ್ನ ಪರಿಚಯ ಮಾಡಸ್ತಿದ್ದ. ಮರಾಠಿ ಕಲಾವಿದರಿಗೆ ಮರಾಠಿ ಒಳಗ ನನ್ನ ಬಗ್ಗೆ ಹೇಳ್ತಿದ್ದ. ಅವರ ನಕ್ಕ, ‘ನೈಸ್ ಟು ಮೀಟ್ ಯೂ ಸರ್’ ಅಂತ ಕೈ ಕೊಟ್ಟಾಗ, ನಾ ಇವಂಗ ‘ನನ್ನ ಬಗ್ಗೆ ಹಂತಾದ ಏನ ಹೇಳಿದಿಪಾ’ ಅಂತ ನಕ್ಕೋತ ಕೇಳ್ತಿದ್ದೆ. ನನ್ನ ಹಾಸ್ಯ ಪ್ರಹಸನ, ಅಂಕಣ, ಪುಸ್ತಕ ಇಂವಾ ಓದ್ತಾನ ಅಂತ ನಂಗ ಹೆಮ್ಮೆ ಆಗ್ತಿತ್ತ.

ನನಗ ‘ದೋಸ್ತ ನಮ್ಮ ಹುಬ್ಬಳ್ಳಿ ಆಡಭಾಷೆ ಒಳಗ ಅಗದಿ ಛಂದ ಬರೀತಿ. ನೀ ನಾಟಕದ್ದ ಸ್ಕ್ರಿಪ್ಟ ಬರಿಲಿಕ್ಕೆ ಶುರು ಮಾಡ’ ಅಂತ ಒಂದ ಹತ್ತ ಸರತೆ ಹೇಳಿದ್ದ. ನಾ ಆರ್ಟಿಕಲ್ ವೀಡಿಯೊ ಮಾಡ್ಬೇಕಾರ ನನ್ನ ಜೊತಿ ಬಂದ ನಿಂತ, ‘ಏ… ವೀಡಿಯೋ ಒಳಗ ನೀ ಆರ್ಟಿಕಲ್ ಓದಿದಂಗ ಅನಸಬಾರದೋ… ನೋಡೊರ ಜೊತಿ ಮಾತಾಡಿದಂಗ ಅನಸಬೇಕ’ ಅಂತ ಒಂದ ಹತ್ತ ಸರತೆ ಕಟ್… ಕಟ್… ಅಂತ ನನಗ ತಿದ್ದಿ ತೀಡಿಸಿ ಹೇಳಿ ಹೇಳಿ ಕಡಿಕೆ ತಲಿ ಕೆಟ್ಟ ಯಾವಾಗ ನಾ ಏನ ಸುದಾರಸಂಗಿಲ್ಲಾ ಅಂತ ಖಾತ್ರಿ ಆತ ಆವಾಗ, ‘ಇವತ್ತ ಇಷ್ಟಕ್ಕ ಮುಗಸ… ಹೊತ್ತಾತ ನಡಿ. ನಿನ್ನ ಹೆಂಡ್ತಿಗೆ ತಾಟ ಹಾಕಂತ ಹೇಳ’ ಅಂತ ಇಬ್ಬರು ಕೂಡಿ ಊಟಕ್ಕ ಕೂಡ್ತಿದ್ವಿ. ಅಂವಾ ಊಟಾ ಮಾಡಬೇಕಾರು ಭಾಳ ಬೆವರತಿದ್ದ.

ನಾ ಒಂದ ಸರತೆ ಅಂವಾ ಬೆವರೋದ ನೋಡಿ ಗಾಬರಿ ಆಗಿ ‘ಯಾಕೋ ಭಾಳ ಬೆವರಲಿಕತ್ತಿ ಅಲಾ… ನನ್ನ ಹೆಂಡ್ತಿ ಮಾಡಿದ್ದ ಹುಳಿ ಭಾಳ ಖಾರ ಆಗೇದೇನ?’ ಅಂತ ಕೇಳಿದರ, ‘ಏ… ಹುಳಿ ಭಾರಿ ಮಸ್ತ ಆಗೇದ ದೋಸ್ತ… ಎಲ್ಲಾರು ಬೆವರ ಸುರಿಸಿ ದುಡದ ಉಂಡರ ನಾ ಊಟಾ ಮಾಡ್ಲಿಕ್ಕೂ ಬೆವರ ಸುರಸ್ತೇನಿ’ ಅಂತ ಚಾಷ್ಟಿ ಮಾಡಿದ್ದ. ಮುಂದ ಪ್ರತಿ ಸರತೆ ಆದಿರಂಗದೊಳಗ ನಾಟಕದ ರಿಹರ್ಸಲ್ ಇದ್ದಾಗೊಮ್ಮೆ ನನಗ ಕರಿಯೋಂವ. ನಾ ಬ್ಯೂಸಿ ಇದ್ದೇನಿ, ನಾ ಊರಾಗ ಇರಂಗಿಲ್ಲಾ ಅದು ಇದು ಅಂತ ನೆವಾ ಹೇಳಿದರ, ನಿನ್ನ ಹೆಂಡ್ತಿ ಮಕ್ಕಳನ್ನ ಕಳಸ ಅನ್ನೋವಾ. ಓಣ್ಯಾಗಿನ ಮಂದಿನ್ನ ಕರದ ಕರದ ಮುಂದ ಕೂಡಿಸಿಸಿ ನಾಟಕ ಮಾಡೊಂವಾ.

ಒಂದ ಕಾಲದಾಗ ನಾಟಕ್ಕ ಕಂಪನಿ ಇದ್ದಲ್ಲೇ, ನಾಟಕ ನಡೆಯೊ ಕಡೆ ಜನಾ ಹೋಗ್ತಿದ್ದರು. ಆದರ ಇತ್ತೀಚಿಗೆ, ಯಾವಾಗ ಟಿ.ವಿ. ಒಳಗ ನೂರಾರ ಚಾನೆಲ್, ಸಾವಿರಾರ ಧಾರಾವಾಹಿ, ವೆಬ್ ಸೀರಿಸ್ ಎಲ್ಲಾ ಬರಲಿಕತ್ತವು ಜನರಿಗೆ ನಾಟಕದ್ದ ಹುಚ್ಚು ಕಡಮಿ ಆಗಲಿಕತ್ತ. ಇಂವಾ ಹಂತಾದರಾಗ ಆದಿರಂಗ ಕಟ್ಟಿ ಅದನ್ನ ಒಂದ ಕಲಾಕ್ಷೇತ್ರ ಮಾಡಬೇಕ, ಇಲ್ಲೆ ಎಲ್ಲಾ ನಮೂನಿ ಕಲೆಗೆ ತರಬೇತಿ ಕೊಡಬೇಕು ಅಂತ ಕನಸ ಕಟಗೊಂಡ ಕೆಲಸಾ ಮಾಡ್ಲಿಕತ್ತಾ. ಜನಾ ನಾಟಕಕ್ಕ ಬರಂಗಿಲ್ಲಾ ಅಂದರ ಏನಾತ, ನಾಟಕಾನ ಜನರ ಕಡೆ ಒಯ್ಯೋಣ ನಡಿ ಅಂತ ಸತತ ಪ್ರಯತ್ನಪಡಲಿಕತ್ತಾ.

‘ನಾ ಭಾಳ ಛಂದ ನಾಟಕ ಮಾಡ್ತೇನಿ’ ಅಂತ ಎಂದು ನಾಟಕ ಮಾಡಲಾರದ, ನಾಟಕಕ್ಕ ತನ್ನ ಜೀವಾ ಕೊಟ್ಟ ನಾಟಕದ ಒಳಗ ಜೀವಾ ತುಂಬಿ ಎದರಿಗೆ ಇನ್ನೂ ಸಾವಿರಾರು ಪ್ರೇಕ್ಷಕರ ನಾಟಕ ನೋಡ್ಲಿಕ್ಕೆ ಅಗದಿ ಇಂಟರೆಸ್ಟಲೇ ಕೂತಾಗ ನಡಬರಕ ಹೇಳದ ಕೇಳದ ನಾಟಕಕ್ಕ ಪರದೆ ಎಳದ ಹೋಗಿಬಿಟ್ಟ. ಪ್ರೇಕ್ಷಕರು, ಮುಂದ? ಅಂತ ಅನ್ನೊ ಹಂಗ ನಮಗೆಲ್ಲಾ ಕೈಕೊಟ್ಟ ಹೋದ. ಇವತ್ತ ಯಶವಂತ ಇಲ್ಲಾ… ಮುಂದ? ಅನ್ನೋ ಯಕ್ಷಪ್ರಶ್ನೆ ಹುಟ್ಟೇದ. ಇದಕ್ಕ ಉತ್ತರಾ ಹುಡ್ಕೋದ ನಮ್ಮನಿಮ್ಮಂಥಾ ರಂಗಾಭಿಮಾನಿಗಳದ್ದ.

ಇವತ್ತ ಯಶವಂತ ಇಲ್ಲದ ನಾಟಕ ರಂಗಭೂಮಿ ಭಣಾಭಣಾ ಆಗೇದ. ಹಂಗ ಈ ಜೀವನಾನ ಒಂದ ರಂಗಮಂಚ, ನಾವೆಲ್ಲಾ ಪಾತ್ರಧಾರಿಗಳು, ಅಂದರ ನಾಟಕ ಮಾಡೋರಿಷ್ಟ ಅಂತ ಅಂದ ಮ್ಯಾಲೆ ಈ ನಾಟಕಗಳು ಯಾವತ್ತೂ ನಿಲ್ಲಬಾರದು. ಪಾತ್ರಧಾರಿ ಬದಲಾಗಬಹುದು, ಪ್ರೇಕ್ಷಕರ ಬದಲಾಗಬಹುದು, ಆದರ ರಂಗಮಂಚ ಖಾಲಿಖಾಲಿ ಅನಸಬಾರದು. ‘ಜಗ್ ಕೊ ಹಸಾನೆ ಬಹರೂಪಿಯಾ… ರೂಪ ಬದಲ ಫಿರ್ ಆಯೇಗಾ’ ಅಂತ ಈ ರಂಗಭೂಮಿಗೆ ಮತ್ತ ಯಶವಂತ ಬ್ಯಾರೆ ರೂಪದಾಗ ಬರಲಿ, ರಂಗಭೂಮಿ ಸದಾ ರಂಗಾಗಿರಲಿ, ನಾಟಕದ ಸಂಭ್ರಮ, ಹಾಸ್ಯದ ಹೊನಲು ಸದಾ ಹರಿತಾ ಇರಲಿ ಅನ್ನೋದ ನಮ್ಮ ನಿಮ್ಮ ಆಶೆ. ಅದನ್ನ ಸಾಕಾರ ಮಾಡೋದ ನಾವೆಲ್ಲಾ ಯಶವಂತಗ ಕೊಡೊ ಶ್ರದ್ಧಾಂಜಲಿ.

‘ಕಲ್ ಖೇಲ್ ಮೇ ಹಮ್ ಹೋ ನ ಹೋ… ಗರ್ದೀಶ್ ಮೇ ತಾರೆ ರಹೇಂಗೆ ಸದಾ’ ಇದ ಜೀವನದ ಅಂತಿಮ ಸತ್ಯ. ಆ ಆಗಸದ ನಕ್ಷತ್ರದೊಳಗ… ನಮ್ಮ ಯಶವಂತ ಒಂದ ನಾಟಕದ ನಕ್ಷತ್ರ.

(ಲೇಖಕರು ಖ್ಯಾತ ಬರಹಗಾರರು)

Previous articleBihar Assembly Election 2025: ಬಿಹಾರ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಘೋಷಣೆ
Next articleಸಿತಾರ್ ತಂತಿಗಳು ಮೌನ… ಸಂಗೀತ ಕ್ಷೇತ್ರ ಮ್ಲಾನ

LEAVE A REPLY

Please enter your comment!
Please enter your name here