ಬಿಹಾರದಲ್ಲಿ ಬಿರುಸುಗೊಂಡ ಚುನಾವಣಾ ತಯಾರಿ

0
61

ಬಿಹಾರ ವಿಧಾನಸಭೆ ಚುನಾವಣೆ-2025ರ ತಯಾರಿ ಜೋರಾಗಿದೆ. ನವೆಂಬರ್ 2ರೊಳಗೆ ಚುನಾವಣಾ ಪ್ರಕ್ರಿಯೆ ಮುಗಿಸುವುದಾಗಿ ಆಯುಕ್ತ ಜ್ಞಾನೇಶ್ ಕುಮಾರ್ ಪ್ರಕಟಿಸುವುದರ ಬೆನ್ನ ಹಿಂದೆಯೇ ಎನ್‌ಡಿಎ ಪಕ್ಷಗಳಲ್ಲಿ ಸೀಟು ಹಂಚಿಕೆಯ ಸಿದ್ಧತೆ ಆರಂಭವಾಗಿದೆ.

ಇನ್ನೊಂದು ಕಡೆ ಆಡಳಿತಾರೂಢ ಎನ್‌ಡಿಎ ಮತ್ತು ಪ್ರತಿಪಕ್ಷ ಮಹಾಘಟಬಂಧನದ ನಡುವೆ ವಾಕ್ಸಮರ ತೀವ್ರಗೊಂಡಿದೆ. ಬಿಜೆಪಿಯಿಂದ ಮತಗಳವು ನಡೆಯುತ್ತಿದೆ ಎನ್ನುವ ಗಂಭೀರ ಆರೋಪವನ್ನು ರಾಹುಲ್ ಗಾಂಧಿ ಮಾಡಿದ ನಂತರ ಎದುರಾಗುತ್ತಿರುವ ಚುನಾವಣೆಯ ಫಲಿತಾಂಶದ ಕುರಿತು ಕುತೂಹಲ ಹೆಚ್ಚಿದೆ.

ಬಿಜೆಪಿ ನಾಯಕರಾದ ಧರ್ಮೇಂದ್ರ ಪ್ರಧಾನ್, ಬಿಹಾರ ಉಸ್ತುವಾರಿ ವಿನೋದ್ ತಾವಡೆ ಪ್ರತ್ಯೇಕವಾಗಿ ಎಚ್‌‌ಎಎಂನ ಜಿತನ್ ರಾಮ್ ಮಾಂಝಿ ಮತ್ತು ರಾಷ್ಟ್ರೀಯ ಲೋಕ ಮೋರ್ಚಾದ ಉಪೇಂದ್ರ ಕುಶ್ವಾಹಾ ಭೇಟಿ ಮಾಡಿ ಸಭೆ ನಡೆಸಿದರು. ಈ ಸಭೆಗಳಲ್ಲಿ ಸೀಟು ಹಂಚಿಕೆ ಸೂತ್ರದ ಕುರಿತು ಚರ್ಚಿಸಲಾಯಿತು ಎಂದು ಮೂಲಗಳು ಹೇಳಿವೆ.

ಬಿಜೆಪಿಯಿಂದ ಸಂಪರ್ಕ ಅಭಿಯಾನ: ಚುನಾವಣಾ ಪ್ರಣಾಳಿಕೆ ಸಿದ್ದಪಡಿಸಲು ಬಿಜೆಪಿ ಒಂದು ಕೋಟಿ ಜನರ ಮಹಾಸಂಪರ್ಕ ಅಭಿಯಾನವನ್ನು ಕೈಗೊಂಡಿದೆ. ಅಕ್ಟೋಬರ್ 5ರಿಂದ 15 ದಿನಗಳ ಕಾಲ ಈ ಅಭಿಯಾನ ನಡೆಯಲಿದೆ. ಜನರನ್ನು ನೇರವಾಗಿ ಸಂಪರ್ಕಿಸಿ ಅವರಿಂದ ಅಭಿಪ್ರಾಯವನ್ನು ಸಂಗ್ರಹಿಸಲಿದೆ.

ಮುಂದಿನ 5 ವರ್ಷಗಳಲ್ಲಿ ಯಾವ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು, ಜನರ ಅಗತ್ಯ ಏನು ಎನ್ನುವುದನ್ನು ಈ ಸಂದರ್ಭದಲ್ಲಿ ಕಂಡುಕೊಂಡು ಪ್ರಣಾಳಿಕೆ ಅದನ್ನು ಸೇರ್ಪಡೆ ಮಾಡಲಾಗುತ್ತದೆ. ಎಲ್ಲ ಕ್ಷೇತ್ರಗಳಲ್ಲಿ 3000 ಸಲಹಾ ಪೆಟ್ಟಿಗೆಗಳನ್ನು ಇದಕ್ಕಾಗಿ ಇಡಲಾಗಿದೆ.

ಜೊತೆಗೆ ವಾಟ್ಸಪ್, ಇ-ಮೇಲ್ ಮೂಲಕವೂ ಜನ ತಮ್ಮ ಅನಿಸಿಕೆಯನ್ನು ನೀಡುವಂತೆ ಸೂಚಿಸಿದೆ. ಈ ಅಭಿಯಾನಕ್ಕಾಗಿಯೇ ವೆಬ್‌ ಸೈಟನ್ನೂ ಕೂಡ ತೆರೆಯಲಾಗಿದೆ. ಬಿಹಾರ ಇಂಡಸ್ಟ್ರೀಸ್ ಅಸೋಸಿಯೇಷನ್, ಆಟೋ ಡ್ರೈವರ್‌ಗಳ ಅಸೋಸಿಯೇಷನ್‌ ಮುಂತಾದ ಸಂಸ್ಥೆಗಳನ್ನು ಭೇಟಿ ಮಾಡಿ ಸಲಹೆ ಸ್ವೀಕರಿಸಲಿದೆ.

ಈ ನಡುವೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾತನಾಡಿ, “ಮಹಾರಾಷ್ಟ್ರದಂತೆ ಬಿಹಾರದಲ್ಲೂ ಒಂದೇ ಹಂತದಲ್ಲಿ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ನಕ್ಸಲೀಯರ ಹಾವಳಿಯನ್ನು ನಿಯಂತ್ರಿಸಲಾಗಿದೆ. ಚುನಾವಣೆ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಭಾಯಿಸುತ್ತೇವೆ. ಹೀಗಾಗಿ ಒಂದೇ ಹಂತದಲ್ಲಿ ಮತದಾನ ನಡೆಯಲಿ” ಎಂದಿದ್ದಾರೆ.

ಘಟಬಂಧನದ ಸಭೆ ಕರೆದ ತೇಜಸ್ವಿ: ಈ ಚುನಾವಣೆಯಲ್ಲಿ ರಣನೀತಿಯನ್ನು ಅಂತಿಮಗೊಳಿಸಲು ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌ ನೇತೃತ್ವದಲ್ಲಿ ಮಹಾಮೈತ್ರಿಕೂಟದ ಸಭೆ ನಡೆಯಿತು. ಯಾವ ಪಕ್ಷ ಎಷ್ಟು ಸ್ಥಾನಗಳನ್ನು ಗೆಲ್ಲಲಿದೆ? ಎನ್ನುವುದರ ಚರ್ಚೆ ನಡೆಸಿ, ಗೆಲ್ಲಲು ರಣತಂತ್ರವನ್ನು ರೂಪಿಸುವುದು ಇದರ ಉದ್ದೇಶ.

ಕಾಂಗ್ರೆಸ್, ಎಡಪಕ್ಷಗಳು, ವಿಕಾಸಶೀಲ ಇನ್ಸಾನ್ ಪಕ್ಷದ ನಾಯಕರು ಸೇರಿದ್ದು ಒಕ್ಕೂಟಕ್ಕೆ ಕಾರ್ಯಸೂಚಿಯನ್ನು ರೂಪಿಸುವತ್ತ ಗಮನ ಕೇಂದ್ರೀಕರಿಸಿದ್ದಾರೆ. ಆರ್‌ಜೆಡಿ ಶೇ.40ರಿಂದ 50ರಷ್ಟು ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಲು ಉದ್ದೇಶಿಸಿದೆ.

ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದ್ದು, ಪ್ರಚಾರಕ್ಕೆ ಅವರಿಗೆ ಸಮ್ಮತಿ ನೀಡಲಾಗಿದೆ. ಕಾಂಗ್ರೆಸ್ ಕೂಡ ಪ್ರಸ್ತುತ ತನ್ನ ಶಾಸಕರಿಗೆ ಸಿದ್ಧರಾಗಲು ಸೂಚಿಸಿದ್ದು, ಇನ್ನೂ ಕೆಲವು ಸ್ಥಾನಗಳು ಹೆಚ್ಚುವರಿಯಾಗಿ ಅದಕ್ಕೆ ದೊರೆಯಲಿದೆ.

Previous articleಜೈಪುರ: ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ: ಎಂಟು ರೋಗಿಗಳ ಸಾವು
Next articleಭದ್ರಾವತಿಯಲ್ಲಿ ಎಎಸ್ಐ ಮೇಲೆ ಯುವಕರ ಹಲ್ಲೆ

LEAVE A REPLY

Please enter your comment!
Please enter your name here