ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ನಡೆದಿರುವ ಬಹುದೊಡ್ಡ ವಂಚನೆ ಪ್ರಕರಣ ಬೆಳಗಾವಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯ ಇದು ರಾಜಕೀಯ ವಲಯದಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಪೊಲೀಸರು ಸಹ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಸಾಮಾಜಿಕ ಹೋರಾಟಗಾರ ಜಯಂತ ತಿನೇಕರ ಮಾಡಿದ ಆರೋಪ ಗಮನಿಸಿದರೆ ಇಲ್ಲಿ ಸಚಿವೆ ಹೆಬ್ಬಾಳ್ಕರ ಹೆಸರು ದುರ್ಬಳಕೆ ಮಾಡಿಕೊಂಡಿರುವುದು ಸ್ಪಷ್ಟ.
ತಿನೇಕರ ಹೇಳಿದ್ದು ಏನು?: ಜಯಂತ ತಿನೇಕರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಡಿದ ಆರೋಪಗಳ ಪ್ರಕಾರ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತ ಸಹಾಯಕ ಮಂಜುನಾಥ ಮಲಸರ್ಜ್ ಎಂಬಾತ, ರಾಜ್ಯಪಾಲರ ಆದೇಶ ಪತ್ರ ಹಾಗೂ ಸಚಿವರ ಸಹಿಯನ್ನು ನಕಲಿ ಮಾಡಿ, ಬೈಲಹೊಂಗಲ, ಖಾನಾಪುರ, ಬೆಳಗಾವಿ ಸೇರಿ ಒಟ್ಟು 16 ಮಂದಿಗೆ ಉದ್ಯೋಗ ಭರವಸೆ ನೀಡಿ 34 ಲಕ್ಷಕ್ಕೂ ಅಧಿಕ ಹಣ ವಸೂಲಿ ಮಾಡಿದ್ದಾರೆ.
ಮಂಜುನಾಥ ಮಲಸರ್ಜ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕಂಪ್ಯೂಟರ್ ಆಪರೇಟರ್ ಹುದ್ದೆ ಕೊಡಿಸುತ್ತೇನೆ ಎಂದು ಹೇಳಿ, ಕರ್ನಾಟಕ ಸರ್ಕಾರದ ಲೋಗೋ, ರಾಜ್ಯಪಾಲರ ನಕಲಿ ಸಹಿ, ಹಾಗೂ ಸಚಿವರ ಸಹಿ ಹೊಂದಿದ ನಕಲಿ ಆದೇಶ ಪತ್ರಗಳನ್ನು ವಿತರಿಸಿದ್ದಾನೆ. ಅಲ್ಲದೇ ಪೋನ್ ಪೇ, ಬ್ಯಾಂಕ್ ಅಕೌಂಟ್ ಮೂಲಕ 34 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚನೆ ಎಸಗಲಾಗಿದೆ.
ಖಾಸಗಿ ಪಿಎ ಹೆಸರು ತಳುಕು: ಈ ವಂಚನೆ ಪ್ರಕ್ರಿಯೆಯಲ್ಲಿ ಸಚಿವರ ಖಾಸಗಿ ಪಿಎ ಸಂಗನಗೌಡ ಹೆಸರೂ ಸಹ ಇದೆ ಎಂದು ತಿನೇಕರ್ ಆರೋಪಿಸಿದ್ದಾರೆ. ಪ್ರಕರಣದಲ್ಲಿ ವಂಚನೆಗೊಳಗಾದ ಖಾನಾಪುರ ತಾಲೂಕಿನ ಗಂದಿಗವಾಡದ ಯುವತಿ ಕಾವ್ಯಾ ಯಳ್ಳೂರ 15ಕ್ಕೂ ಹೆಚ್ಚು ಬಾರಿ ಕಿತ್ತೂರು ಪೊಲೀಸ್ ಠಾಣೆಗೆ ಹೋದರೂ ದೂರು ಸ್ವೀಕರಿಸಲಿಲ್ಲ ಎಂದು ತಿನೇಕರ ಆಕ್ರೋಶ ವ್ಯಕ್ತಪಡಿಸಿದರು. ಘಟನೆ ಕಿತ್ತೂರು ಠಾಣಾ ವ್ಯಾಪ್ತಿಯಲ್ಲಿ ಆಗಿಲ್ಲ ಎಂಬ ನೆಪ ಹೇಳಿ ಪೊಲೀಸರು ದೂರು ದಾಖಲು ಮಾಡಿಕೊಳ್ಳದೇ ವಾಪಸ್ಸು ಕಳಿಸಿದ್ದಾರೆ, ಠಾಣೆಯಿಂದಲೇ ನಿರಂತರ ಕಿರುಕುಳ ನೀಡಲಾಗುತ್ತಿದೆ.
ಈ ಬಗ್ಗೆ ರಾಜ್ಯಪಾಲರು, ಮುಖ್ಯಮಂತ್ರಿ, ಗೃಹ ಸಚಿವರಿಗೆ ಪತ್ರ ಬರೆದು ದೂರು ನೀಡಿದ್ದೇವೆ. ಕರ್ನಾಟಕ ಸರ್ಕಾರದ ಲೋಗೋ, ರಾಜ್ಯಪಾಲರ ನಕಲಿ ಸಹಿ ಇರುವ ದಾಖಲೆಗಳಿದ್ದರೂ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಲ್ಲ. ಆದ್ದರಿಂದ ನಾವು ಕೋರ್ಟ್ ಬಾಗಿಲು ತಟ್ಟಿದ್ದೇವೆ ಎಂದು ಹೋರಾಟಗಾರ ಸ್ಪಷ್ಟಪಡಿಸಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು.