ವಿಶೇಷ ವರದಿ: ಕೆ.ಎಸ್.ಚಂದ್ರು ಕಾಡುಮೆಣಸ ಕೆ.ಆರ್.ಪೇಟೆ
ಕೆಶಿಪ್ ನಿರ್ಮಾಣ ಮಾಡುತ್ತಿರುವ ಬೆಂಗಳೂರು-ಜಲಸೂರು ರಾಜ್ಯ ಹೆದ್ದಾರಿಯು ಕೆ.ಆರ್.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಯಿಂದ ಹಿಡಿದು ಅಕ್ಕಿಹೆಬ್ಬಾಳು ಬಾರ್ಡ್‍ರ್ ವರೆಗೆ ಹಾದು ಹೋಗುತ್ತಿದೆ. ಪಟ್ಟಣದ ಹೊರಹೊಲಯದ ಚೌಡೇಶ್ವರಿ ದೇವಾಲಯದ ಸಮೀಪ ಹೆದ್ದಾರಿಯಲ್ಲಿ ನಿರ್ಮಿಸಿರುವ ಅಂಡರ್ ಪಾಸ್ ಸರಿಯಾಗಿ ನಿರ್ಮಾಣ ಮಾಡಿಲ್ಲ ಪರಿಣಾಮ ಮಳೆಗಾಲದಲ್ಲಿ ಅಂಡರ್ ಪಾಸ್‍ಗಳಲ್ಲಿ ನೀರು ನಿಲ್ಲುತ್ತಿದ್ದು ಜನಸಾಮಾನ್ಯರು ಹಾಗೂ ವಾಹನ ಸವಾರರು ಸಂಚರಿಸಲು ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಹೇಮಾವತಿ ವಿತರಣಾ ನಾಲಾ ಏರಿಯ ಮೂಲಕ ಕೆ.ಆರ್.ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಹಿಂಭಾಗದವರೆಗೂ ಸಂಪರ್ಕ ಕಲ್ಪಿಸುತ್ತದೆ. ಈ ಭಾಗದ ನೂರಾರು ಎಕರೆ ಪ್ರದೇಶದಲ್ಲಿ ಕೃಷಿ ಮಾಡುತ್ತಿರುವ ರೈತಾಪಿ ವರ್ಗ ಮತ್ತು ಪಾಲಿಟೆಕ್ನಿಕ್ ಹಿಂಭಾಗದ ಮೂಲಕ ಪಟ್ಟಣವನ್ನು ಸಂರ್ಕಿಸುವ ಜನರಿಗೆ ಇರುವ ಏಕೈಕ ಅಂಡರ್ ಪಾಸ್ ಇದು.
ಚೌಡೇಶ್ವರಿ ದೇವಾಲಯದ ಮೂಲಕ ಈ ರಸ್ತೆಯಲ್ಲಿ ಸಂಚರಿಸುವವರಿಗಾಗಿ ಕೆಶಿಪ್ ಎಂಜಿನಿಯರ್‌ಗಳು ಅಂಡರ್‌ಪಾಸ್ ಎರಡೂ ಬದಿಯಲ್ಲೂ ಸರ್ವೀಸ್ ರಸ್ತೆ ನಿರ್ಮಿಸಿದ್ದಾರೆ. ಆದರೆ ಸರ್ವೀಸ್ ರಸ್ತೆ ಅವೈಜ್ಞಾನಿಕವಾಗಿದ್ದು ಜನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಜೊತೆಗೆ ಅಂಡರ್ ಪಾಸ್ ನಲ್ಲಿ ಮಳೆ ಬಂದರೆ ನೀರು ತುಂಬಿಕೊಳ್ಳುತ್ತಿದೆ.
ಅಂಡರ್ ಪಾಸ್ ಮೂಲಕ ನೀರು ಸುಲಲಿತವಾಗಿ ಹರಿದು ಹೋಗುವ ವ್ಯವಸ್ಥೆಯಿಲ್ಲ. ಇದರ ಪರಿಣಾಮ ಸದರಿ ಅಂಡರ್ ಪಾಸ್ ಜನರ ಬಳಕೆಗೆ ನಿಷ್ಪ್ರಯೋಜಕವಾಗಿದೆ. ಇದೇ ರೀತಿ ಪಟ್ಟಣದ ಹೊರವಲಯದ ಚಿಕ್ಕೋನಹಳ್ಳಿ ಬಳಿಯೂ ಒಂದು ಅಂಡರ್ ಪಾಸ್ ಇದೆ. ಇದೂ ಕೂಡ ಮಳೆ ಬಂದರೆ ನೀರು ತುಂಬಿಕೊಂಡು ಜನ ನೀರಿನೊಳಗೆ ಸಂಚರಿಸಬೇಕಾದ ಸ್ಥಿತಿಯಿದೆ.
ಚಿಕ್ಕೋನಹಳ್ಳಿ ಅಂಡರ್ ಪಾಸ್‍ನಲ್ಲಿ ಬರುವ ಕೆಶಿಪ್ ರಸ್ತೆಯಲ್ಲಿ ಕಾಲುವೆ ನೀರು ಮತ್ತು ಮಳೆಯ ನೀರಿನೊಂದಿಗೆ ಶಾಲಾ ಮಕ್ಕಳು ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರು ತಿರುಗಾಡಲು ಸಾಧ್ಯವಾಗುತ್ತಿಲ್ಲ. ಹೆದ್ದಾರಿಯ ಅಂಡರ್ ಪಾಸ್ ಮತ್ತು ಸರ್ವೀಸ್ ರಸ್ತೆಗಳು ಜನರ ಬಳಕೆಗೆ ಯೋಗ್ಯವಾಗಿಲ್ಲದ ಕಾರಣ ರೈತಾಪಿ ವರ್ಗ ಹೆದ್ದಾರಿಯ ಅಕ್ಕಪಕ್ಕದಲ್ಲಿರುವ ತಮ್ಮ ಜಮೀನುಗಳಿಗೆ ಹೋಗಲು ಪ್ರಯಾಸ ಪಡಬೇಕಾಗಿದೆ.
ಕೆಶಿಪ್ ಅಧಿಕಾರಿಗಳು ಹೆದ್ದಾರಿಯ ಅಕ್ಕಪಕ್ಕದಲ್ಲಿರುವ ಹಳ್ಳಿಯ ಜನರ ಸಂಚಾರಕ್ಕೂ ಕೆಲವು ಕಡೆ ಸರ್ವೀಸ್ ರಸ್ತೆಗಳನ್ನು ನಿರ್ಮಿಸಿಲ್ಲ. ಗ್ರಾಮದೊಳಗೆ ಹೆದ್ದಾರಿ ಹಾದುಹೋಗಿರುವುದರಿಂದ ತಾಲ್ಲೂಕು ವ್ಯಾಪ್ತಿಯಲ್ಲಿ ಒಂದಲ್ಲ ಒಂದು ಕಡೆ ಅಮಾಯಕರು ಅಪರಿಚಿತ ವಾಹನಗಳಿಗೆ ಬಲಿಯಾಗುತ್ತಿದ್ದಾರೆ.
ತಾಲ್ಲೂಕಿನ ಅಕ್ಕಿಹೆಬ್ಬಾಳು ಬಳಿಯ ದಡದಹಳ್ಳಿ ಗ್ರಾಮದಲ್ಲಿ ಚನ್ನೇಗೌಡ ಎನ್ನುವ 62 ವರ್ಷ ವಯಸ್ಸಿನ ವೃದ್ದ ಸೈಕಲ್ಲಿನಲ್ಲಿ ಹೋಗುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿರುತ್ತಾರೆ. ಇದೇ ರೀತಿ ಹೆದ್ದಾರಿ ಬದಿಯ ಕೈಗೋನಹಳ್ಳಿ, ಬೊಮ್ಮೇನಹಳ್ಳಿ, ಹರಿಹರಪುರ, ಹೇಮಾವತಿ ನದಿ ಸೇತುವೆ ಮುಂತಾದ ಕಡೆ ಹಲವಾರು ಜನ ಅಪರಿಚಿತ ವಾಹನಗಳಿಗೆ ಬಲಿಯಾಗುತ್ತಿರುವುದು ವಿಪರ್ಯಾಸವೇ ಸರಿ.
ಸಾರ್ವಜನಿಕರಿಗೆ ಅನುಕೂಲವಾಗಬೇಕಾದ ಈ ಬೆಂಗಳೂರು-ಜಲಸೂರು ರಾಜ್ಯ ಹೆದ್ದಾರಿ ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಅದೆಷ್ಟು ಜನ ಬಲಿಯಾಗಬೇಕೋ ಗೊತ್ತಿಲ್ಲ. ಸಾರ್ವಜನಿಕ ದೂರಿನ ಮೇರೆಗೆ ಈ ಹಿಂದೆ ಕ್ಷೇತ್ರ ಶಾಸಕ ಹೆಚ್.ಟಿ.ಮಂಜು ಕೆಶಿಪ್ ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಹೆದ್ದಾರಿಯಲ್ಲಿ ಸಂಚರಿಸಿ ಜನರ ಸಮಸ್ಯೆಗಳನ್ನು ಮನವರಿಕೆ ಮಾಡಿದ್ದರು. ಈ ಸಂದರ್ಭದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿದ ಕೆಶಿಪ್ ಎಂಜಿನಿಯರುಗಳು ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದರು. ಅಧಿಕಾರಿಗಳು ಸಮಸ್ಯೆ ಬಗೆಹರಿಸುವಲ್ಲಿ ಬದ್ದತೆ ತೋರುತ್ತಿಲ್ಲ.
ರಾಜ್ಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈಗಲಾದರೂ ಜನರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕಾಗಿದೆ. ತಾಲೂಕಿನ ಉದ್ದಗಲಕ್ಕೂ ಇರುವ ಅಂಡರ್ ಪಾಸ್‍ಗಳಲ್ಲಿ ನೀರು ನಿಲ್ಲದಂತೆ ಮಾಡಬೇಕು. ಇದೇ ರೀತಿ ಅಗ್ರಹಾರಬಾಚಹಳ್ಳಿ ಬಳಿ ಅಡ್ಡಲಾಗಿ ಹಾದು ಹೋಗುವ ಸಂತಾಬಾಚಹಳ್ಳಿ-ಕೆ.ಆರ್.ಪೇಟೆ ರಸ್ತೆ, ಚಿಕ್ಕೋಸಹಳ್ಳಿ ಬಳಿ ಅಡ್ಡಲಾಗಿ ಹಾದು ಹೋಗುವ ಕೆ.ಆರ್.ಪೇಟೆ-ಶ್ರವಣಬೆಳಗೊಳ ರಸ್ತೆ, ಕನಕ ಭವನ ನಿರ್ಮಾಣವಾಗುತ್ತಿರುವ ಪಕ್ಕದ ಮೈಸೂರು- ಅರಸೀಕೆರೆ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಹಾದು ಹೋಗುವ ಸರ್ಕಲ್ ಬಳಿ, ಚೌಡೇಶ್ವರಿ ದೇವಸ್ಥಾನದ ಬಳಿ ಹಾದು ಹೋಗುವ ಹೇಮಗಿರಿ- ಕೆ.ಆರ್.ಪೇಟೆ ರಸ್ತೆ ಹೀಗೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಫ್ಲೈ ಓವರ್ ಅಥವಾ ಅಂಡರ್ ಪಾಸ್ ರಸ್ತೆಗಳನ್ನು ನಿರ್ಮಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ನಿತ್ಯ ಸರಣಿ ಅಪಘಾತಗಳು ನಡೆಯುತ್ತವೆ. ರಸ್ತೆ ಕಾಮಗಾರಿಯು ಪೂರ್ಣ ಪ್ರಮಾಣದಲ್ಲಿ ಮುಗಿದಿಲ್ಲ ಆಗಿದ್ದರೂ ಅಲ್ಲಲ್ಲಿ ಅಪಘಾತಗಳು ನಡೆಯುತ್ತಿರುವುದು ವರದಿಯಾಗುತ್ತಿದೆ.
ಉದ್ಘಾಟನೆಗೆ ಮುಂಚೆ ಬೆಂಗಳೂರು-ಜಲಸೂರು ರಸ್ತೆಗೆ ಅಡ್ಡಲಾಗಿ ಹಾದು ಹೋಗುವ ರಸ್ತೆಗಳಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರ ಒತ್ತಾಸೆಯಾಗಿದೆ. ರಾಜ್ಯ ಹೆದ್ದಾರಿ ಹಾದುಹೋಗಿರುವ ಕಡೆ ಅಪಘಾತಗಳನ್ನು ನಿಯಂತ್ರಿಸಲು ಅಗತ್ಯ ಕ್ರಮ ವಹಿಸಬೇಕಾಗಿದೆ.