ವಿಶೇಷ ವರದಿ: ಪಿ. ವೈ ರವಿಂದ್ರ ಹೇರ್ಳೆ
ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಬರುವ 4 ತಾಲ್ಲೂಕುಗಳಲ್ಲಿ ನುಂಗಲಾರದ ಬಿಸಿ ತುಪ್ಪವಾಗಿರುವ ಆನೆ ದಾಳಿ ಸಮಸ್ಯೆ ನಿಯಂತ್ರಣಾ ಸಂಬಂಧ ಸರ್ಕಾರ ನಿಯೋಸಿರುವ ಆನೆ ಕಾರ್ಯಪಡೆ ತಂಡಕ್ಕೆ ತರಬೇತಿಯೇ ನೀಡಿಲ್ಲ. ಆಶ್ಚರ್ಯವಾದರು ಇದು ಸತ್ಯ.
ಆನೆ ದಾಳಿ ತಡೆ ಹಾಗೂ ನಿಯಂತ್ರಣ ಸಂಬಂಧ ಸರ್ಕಾರ 2023ರಲ್ಲಿ ಜಿಲ್ಲೆಯಲ್ಲಿ ಆನೆ ಕಾರ್ಯಪಡೆಯನ್ನು ಸ್ಥಾಪಿಸಿತು. ಈ ತಂಡದ ಮುಖಾಂತರ ಜಿಲ್ಲೆಯಲ್ಲಿ ಆನೆ ಹಾವಳಿಯನ್ನು ನಿಯಂತ್ರಿಸಲು ಮುಂದಾಗಿತ್ತು. ಆದರೆ, ಈ ಕಾರ್ಯಪಡೆಗೆ ಈ ತನಕ ಸಂಪೂರ್ಣ ತರಬೇತಿಯೇ ನೀಡಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿದೆ.
ಏನಾಗಿದೆ: ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯು ಆನೆ ಉಪಟಳಕ್ಕೆ ಹೆಚ್ಚು ಕುಖ್ಯಾತಿ ಪಡೆದುಕೊಂಡಿದೆ. ಇದರ ನಿಯಂತ್ರಣ ಸಂಬಂಧ ಸರ್ಕಾರ ಕಳೆದ ಎರಡು ವರ್ಷದ ಹಿಂದೆ ಜಿಲ್ಲೆಯಲ್ಲಿ ಆನೆ ಕಾರ್ಯಪಡೆಯನ್ನು ಸ್ಥಾಪಿಸಿ, ದಾಳಿ ನಿಯಂತ್ರಣ ಹಾಗೂ ನಾಡಿನಿಂದ ಕಾಡಿಗೆ ಅಟ್ಟುವ ಕೆಲಸ ಮಾಡುತ್ತಿತ್ತು.
ಆದರೆ, ಸರಿಯಾದ ತರಬೇತಿ ನೀಡದ ಪರಿಣಾಮ ಕಳೆದ ತಿಂಗಳು ಕಾರ್ಯಪಡೆಯ ಸಿಬ್ಬಂದಿ ಆನೆ ತುಳಿತಕ್ಕೆ ಸಾವನ್ನಪ್ಪಿದ್ದ. ಈ ಘಟನೆಯ ಬಳಿಕ ಅರಣ್ಯ ಇಲಾಖೆ ಕಾರ್ಯದ ಕುರಿತು ಸಾಕಷ್ಟು ಅಪಸ್ವರಗಳು ಕೇಳಿ ಬರುತ್ತಿವೆ. ಆನೆ ಕಾರ್ಯಪಡೆಯಲ್ಲಿ ಒಟ್ಟು 70 ಮಂದಿ ಕೆಲಸ ಮಾಡುತ್ತಿದ್ದಾರೆ. ವಿಪರ್ಯಾಸವೆಂದರೆ ಅಷ್ಟು ಮಂದಿಯು ಹೊರ ಗುತ್ತಿಗೆ ಆಧಾರದ ಮೇಲೆ ನೇಮಕವಾಗಿರುವ ಸಿಬ್ಬಂದಿ.
ಇದರಲ್ಲಿ ಇಟಿಎಫ್(ಆನೆ ಕಾರ್ಯಪಡೆ), ಎಡಿಸಿ(ಆನೆ ಓಡಿಸುವ ತಂಡ) ಹಾಗೂ ಎಪಿಸಿ(ಕಳ್ಳಬೇಟೆ ತಡೆ ಶಿಬಿರ) ಎಂಬುದಾಗಿ 70 ಮಂದಿಯನ್ನು ವಿಂಗಡಿಸಿ ಕಾರ್ಯನಿರ್ವಹಿಸುತ್ತಿದೆ. ಈ ಎಲ್ಲಾ ಸಿಬ್ಬಂದಿಯು ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ತೆಗೆದುಕೊಳ್ಳಲಾಗಿದೆ. ಬಾಕಿ ಉಳಿದಿರುವ ಕಾರ್ಯಪಡೆದ ಉಪ ವಲಯ ಅರಣ್ಯಾಧಿಕಾರಿ, ಗಸ್ತು ಅರಣ್ಯ ಪಾಲಕ ಕಾಯಂ ಹುದ್ದೆ ಈ ತನಕ ಭರ್ತಿಯಾಗಿಲ್ಲ. ತರಬೇತಿ ಹಾಗೂ ಅನುಭವ ಇಲ್ಲದ ಸಿಬ್ಬಂದಿ ಬಳಸಿಕೊಂಡು ಕೆಲಸ ಮಾಡಬೇಕಾದ ಅನಿವಾರ್ಯತೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಇದ್ದಾರೆ.
ಡ್ರೋನ್ ರಿಪೇರಿ: ಆನೆ ಇರುವಿಕೆಯನ್ನು ಪತ್ತೆ ಹೆಚ್ಚುವ ಸಂಬಂಧ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಥರ್ಮಲ್ ಡ್ರೋಣ್ ಸಹ ರಿಪೇರಿಯಾಗಿದ್ದು ಸಿಬ್ಬಂದಿಗೆ ಸಾಕಷ್ಟು ತಲೆಬಿಸಿಯನ್ನುಂಟು ಮಾಡಿದೆ. ಡ್ರೋಣ್ ಬಳಕೆಯಲ್ಲಿ ಇದಿದ್ದರೆ ಆನೆ ತುಳಿತಕ್ಕೆ ಸಿಬ್ಬಂದಿ ಸಾವನ್ನಪ್ಪುತ್ತಿರಲಿಲ್ಲ ಎಂಬ ಮಾತು ಸಹ ಅಧಿಕಾರಿಗಳ ವಲಯದಲ್ಲಿ ಕೇಳಿ ಬರುತ್ತಿದೆ.
ಕಾರ್ಯಪಡೆಯ ಸಿಬ್ಬಂದಿ ಆನೆ ಇರುವಿಕೆಯನ್ನು ಪತ್ತೆ ಹಚ್ಚುವುದು. ಅದನ್ನು ಸ್ಥಳದಿಂದ ಓಡಿಸುವುದು. ಆನೆ ಮತ್ತೆ ಬಾರದಂತೆ ನೋಡಿಕೊಳ್ಳುವ ಕೆಲಸವನ್ನು ಮಾಡುತ್ತಿದ್ದರು. ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಸಾತನೂರು ಹಾಗೂ ಕನಕಪುರ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಆನೆ ಕಾರ್ಯಪಡೆಯ ಸ್ಥಾಪನೆ: ಇನ್ನೂ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಆನೆ ದಾಳಿಯು ಸಾಮನ್ಯವಾಗಿ ಬಿಟ್ಟದೆ. ಇದರ ನಿಯಂತ್ರಣ ಸಂಬಂಧ ಸರ್ಕಾರ ಈ ಹಿಂದೆ ಇಪಿಟಿ (ಆನೆ ನಿರೋಧಕ ಕಂದಕ) ಸೋಆರ್ ಫೆನ್ಸ್, ರೈತರಿಗೆ ಪರಿಹಾರ ನೀಡುವಂತಹ ಕೆಲಸವನ್ನು ಈ ಹಿಂದೆ ಮಾಡಲಾಗುತ್ತಿತ್ತು. ಆದರೆ, ಈ ಯಾವ ಕೆಲಸವೂ ಆನೆದಾಳಿಗೆ ಕಡಿವಾಣ ಹಾಕದ ಹಿನ್ನೆಲೆಯಲ್ಲಿ 2023ರಲ್ಲಿ ಆನೆ ಕಾರ್ಯಪಡೆಯನ್ನು ಸ್ಥಾಪಿಸಲಾಗಿತ್ತು.
ಆನೆ ದಾಳಿ ನಿಯಂತ್ರಣ ಸಂಬಂಧ ರಾಜ್ಯ ಸರ್ಕಾರ ಶಾಶ್ವತವಾದ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿ ಬರುತ್ತಿದೆ. ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಕೆಲಸ, ಸೋಲಾರ್ ತಂತಿ ಬೇಲಿ ಹಾಕುವುದರ ಜೊತೆಗೆ, ಆನೆ ದಾಳಿಯನ್ನು ಶಾಶ್ವತವಾಗಿ ನಿಯಂತ್ರಣ ಮಾಡುವ ಸಂಬಂಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂಬ ಒತ್ತಡ ಕೇಳಿ ಬರುತ್ತಿದೆ.
“ಕಳೆದ ವರ್ಷ ಆನೆ ಕಾರ್ಯ ಪಡೆಯ ತಂಡಕ್ಕೆ ತರಬೇತಿ ನೀಡಲಾಗಿದೆ. ಜೊತೆಗೆ ಸಿಬ್ಬಂದಿ ಹೊರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿರುವುದು. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಆನೆ ಕಾರ್ಯಪಡೆಯ ಸಿಬ್ಬಂದಿ ಮೃತಪಟ್ಟಿರುವುದು” ಎಂದು ರಾಮಕೃಷ್ಣಪ್ಪ, ಡಿಸಿಎಫ್, ಅರಣ್ಯ ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲೆ ಹೇಳಿದ್ದಾರೆ.