“ಚಾಮುಂಡಿ ಬೆಟ್ಟ ಕೇವಲ ಹಿಂದೂಗಳ ಆಸ್ತಿಯಲ್ಲ, ಅಲ್ಲಿಗೆ ಎಲ್ಲಾ ಧರ್ಮೀಯರು ಹೋಗುತ್ತಾರೆ” ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದರು. ಈ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ವಿಚಾರದಲ್ಲಿ ರಾಜವಂಶಸ್ಥ, ಸಂಸದ ಯದುವೀರ್ ಒಡೆಯರ್ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಸಾಮಾಜಿಕ ಜಾಲತಾಣದಲ್ಲಿ ಜಟಾಪಟಿ ನಡೆಯುತ್ತಿದೆ.
ಯದುವೀರ್ ಒಡೆಯರ್ ಟ್ಯಾಗ್ ಮಾಡಿ ಡಿ.ಕೆ.ಶಿವಕುಮಾರ್, ‘ನಮ್ಮ ನಾಡ ಹಬ್ಬ – ದಸರಾ, ನಮ್ಮ ನಾಡ ದೇವತೆ – ಚಾಮುಂಡೇಶ್ವರಿ’ ಎಂದು ಪೋಸ್ಟ್ ಹಾಕಿದ್ದರು.
‘ಚಾಮುಂಡೇಶ್ವರಿ ತಾಯಿ ನಮ್ಮ ನಾಡಿನ ಅಧಿದೇವತೆ. ಈ ತಾಯಿಯನ್ನು ಆರಾಧಿಸುವವರು, ನಂಬುವವರು, ಗೌರವಿಸುವವರು ಎಲ್ಲ ಜಾತಿ, ಧರ್ಮಗಳಲ್ಲೂ ಇದ್ದಾರೆ. ಆಕೆಯ ದರ್ಶನ ಎಲ್ಲರ ಹಕ್ಕು. ತಾಯಿ ಎಲ್ಲ ಭಕ್ತರ, ನಾಡಿನ ಎಲ್ಲ ಮಕ್ಕಳ ಆಸ್ತಿ, ಯಾರೊಬ್ಬರಿಗೂ ಸೀಮಿತ ಅಲ್ಲ. ತಾಯಿಯನ್ನು ಪೂಜಿಸಿದರೆ ಯಾರೂ ಬೇಡ ಅನ್ನಲು ಆಗುವುದಿಲ್ಲ. ಇದೇ ನನ್ನ ಮಾತಿನ ಸತ್ವ. ವಿವಾದ ಮಾಡೋದು ಬಿಜೆಪಿ ತತ್ವ!’ ಎಂದು ಡಿಕೆಶಿ ಟೀಕಿಸಿದ್ದರು.
‘ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮ, ಸಮಾಜದವರಿಗೂ ಪ್ರವೇಶವಿದೆ. ಎಲ್ಲರೂ ಬೆಟ್ಟಕ್ಕೆ ಹೋಗುತ್ತಾರೆ. ದೇವಿಯ ಪ್ರಾರ್ಥನೆ ಮಾಡುತ್ತಾರೆ. ಎಲ್ಲರ ನೋವನ್ನು ದೂರ ಮಾಡುವಳು ನಮ್ಮ ದುರ್ಗಾ ದೇವಿ’ ಎಂದು ಹೇಳಿದ್ದರು.
‘ನಾಡ ಹಬ್ಬ ದಸರಾವನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶಗಳಿಂದ ಜನ ಬರುತ್ತಾರೆ. ಇದಕ್ಕೆ ನಮ್ಮ ರಾಜ ವಂಶಸ್ಥರೇ ಅನುಮತಿ ನೀಡಿ ಸಾಕ್ಷಿಯಾಗಿದ್ದಾರೆ. ನಾಡ ಹಬ್ಬ ದಸರಾ ಎಲ್ಲ ಧರ್ಮದವರಿಗೂ ಸೇರಿದ್ದು. ಧರ್ಮದಲ್ಲಿ ರಾಜಕಾರಣ ಮಾಡುವುದು ಬೇಡ, ಅದನ್ನು ಆ ತಾಯಿಯೂ ಮೆಚ್ಚುವುದಿಲ್ಲ!’ ಎಂದು ತಿಳಿಸಿದ್ದರು.
ಯದುವೀರ್ ಪೋಸ್ಟ್: ಇದಕ್ಕೆ ಪ್ರತಿಯಾಗಿ ಸಂಸದ ಯದುವೀರ್ ಒಡೆಯರ್ ಪೋಸ್ಟ್ ಹಾಕಿದ್ದು, ‘ಚಾಮುಂಡಿ ಬೆಟ್ಟ ಎಲ್ಲ ಧರ್ಮ–ಸಮುದಾಯದವರಿಗೂ ಮುಕ್ತವಾಗಿ ತೆರೆದಿದೆ. ತಾಯಿಯನ್ನು ಆರಾಧಿಸುವವರು, ನಂಬುವವರು, ಗೌರವಿಸುವವರು ಎಲ್ಲ ಜಾತಿ-ಧರ್ಮಗಳಲ್ಲಿದ್ದಾರೆ’ ಎಂದು ಹೇಳಿದ್ದಾರೆ.
‘ಆದರೆ, ಚಾಮುಂಡಿ ಬೆಟ್ಟ ಒಂದು ಶಕ್ತಿಪೀಠ. ತಾಯಿ ಚಾಮುಂಡೇಶ್ವರಿ ಹಿಂದೂ ದೇವಿ – ಆಕೆಯ ಉಲ್ಲೇಖ ಹಿಂದೂ ಗ್ರಂಥವಾದ ಮಾರ್ಕಂಡೇಯ ಪುರಾಣದ ದೇವಿ ಮಹಾತ್ಮ್ಯದಲ್ಲಿದೆ; ಬೇರೆ ಧರ್ಮಗಳ ಗ್ರಂಥಗಳಲ್ಲಿ ಇಲ್ಲ. ಪ್ರತಿದಿನವೂ ಹಿಂದೂ ಶಾಸ್ತ್ರಾನುಸಾರವೇ ಪೂಜೆ–ಪರಂಪರೆ ನಡೆಯುತ್ತಿವೆ. ಇಲ್ಲಿಗೆ ಬರುವ ಎಲ್ಲರೂ ಆಕೆಯನ್ನು ಹಿಂದೂ ದೇವಿಯಾಗಿಯೇ ಆರಾಧಿಸುತ್ತಾರೆ’ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
‘ದಸರಾ ನಮ್ಮ ನಾಡಿನ ಅತಿದೊಡ್ಡ ಸಾಂಸ್ಕೃತಿಕ ಸಂಭ್ರಮ. ಎಲ್ಲ ಧರ್ಮದವರು ಪಾಲ್ಗೊಳ್ಳಬಹುದು, ಆದರೆ ಮೂಲತಃ ಅದು ಹಿಂದೂ ಹಬ್ಬ. ಅದರ ದಿನಾಂಕವನ್ನು ನಿಗದಿಪಡಿಸುವುದು ಹಿಂದೂ ಪಂಚಾಂಗ. ಯಾರದೋ ಇಚ್ಛೆ-ಮನೋಭಾವಕ್ಕೆ ಅನುಗುಣವಾಗಿ ಬದಲಾಯಿಸುವ ಹಬ್ಬವಲ್ಲ’ ಎಂದಿದ್ದಾರೆ.
‘ನೀವು ಒಂದು ಕುಟುಂಬವನ್ನೇ ನಿಮ್ಮ ದೇವರನ್ನಾಗಿ ಮಾಡಿಕೊಂಡಿದ್ದೀರಿ. ಹೀಗಿರುವಾಗ, ದೇವಿಯ ಹಿಂದೂ ಸ್ವರೂಪವನ್ನೂ, ದಸರೆಯ ಧಾರ್ಮಿಕ ಪರಂಪರೆಯನ್ನೂ ನಿರಾಕರಿಸುವ ದುಸ್ಸಾಹಸ ಮಾಡಬೇಡಿ. ನಾವು ರಾಜಕೀಯ ಮಾಡುತ್ತಿಲ್ಲ. ನೀವು ಓಲೈಕೆ ರಾಜಕೀಯಕ್ಕಾಗಿ ನಮ್ಮ ಧರ್ಮದ ಮೇಲೆ ದಾಳಿ ಮಾಡಿದಾಗ, ಅದನ್ನು ರಕ್ಷಿಸಲು ನಾವು ಎದ್ದು ನಿಂತಿದ್ದೇವೆ’ ಎಂದು ತಿಳಿಸಿದ್ದಾರೆ.