ಚಾಮರಾಜನಗರ: ಕನ್ನಡ ರಾಜ್ಯೋತ್ಸವ, ಗಡಿನಾಡಿನಲ್ಲಿ ತಯಾರಿ ಹೇಗಿದೆ?

0
70

ಚಾಮರಾಜನಗರದಲ್ಲಿ ಕನ್ನಡ ರಾಜ್ಯೋತ್ಸವ 2025 ಅದ್ದೂರಿ, ಅರ್ಥಪೂರ್ಣ ಆಚರಣೆಗೆ ನಿರ್ಧಾರಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲಾಡಳಿತದ ವತಿಯಿಂದ ಎಲ್ಲರ ಸಹಕಾರ ಬೆಂಬಲದೊಂದಿಗೆ ನವೆಂಬರ್ 1ರಂದು ನಗರದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಸಂಘ ಸಂಸ್ಥೆಗಳು, ಕಲಾವಿದರು, ಅಧಿಕಾರಿಗಳು, ಇನ್ನಿತರರು ಪಾಲ್ಗೊಂಡಿದ್ದ ಸಭೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಆಚರಣೆ ಮಾಡಲು ತೀರ್ಮಾನಿಸಲಾಯಿತು.

ಅಧಿಕಾರಿಗಳಿಗೆ ಸೂಚನೆಗಳು

  • ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು ಮಾತನಾಡಿ ಈ ಹಿಂದಿನಿಂದಲೂ ಜಿಲ್ಲಾಡಳಿತದ ವತಿಯಿಂದ ಆಚರಿಸಲಾಗುತ್ತಿರುವ ನಾಡು, ನುಡಿ ಕುರಿತ ಎಲ್ಲ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಾ ಬಂದಿದ್ದೇವೆ. ಜಿಲ್ಲೆಯಲ್ಲಿ ಕನ್ನಡ ರಾಜ್ಯೋತ್ಸವ ವ್ಯಾಪಕವಾಗಿ ಆಚರಣೆಯಾಗಬೇಕು. ಕಚೇರಿಗಳು, ಬ್ಯಾಂಕುಗಳು ಎಲ್ಲಾ ಗ್ರಾಮ ಪಂಚಾಯಿತಿ, ಗಡಿ ಭಾಗಗಳಲ್ಲಿ ರಾಜ್ಯೋತ್ಸವ ಅರ್ಥಪೂರ್ಣವಾಗಿ ಆಗಬೇಕು. ಶಾಲೆಗಳಲ್ಲಿ ಕನ್ನಡ ಜಾಗೃತಿ ಕರ್ಯಕ್ರಮಗಳು ಏರ್ಪಾಡು ಮಾಡಬೇಕು. ವಿವಿಧ ಕ್ಷೇತ್ರಗಳಲ್ಲಿ ದುಡಿದ ಹಾಗೂ ಜಿಲ್ಲೆಯ ಸಾಧಕರನ್ನು ಗೌರವಿಸಬೇಕು.
  • ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ಜಯ ಭಾರತ ಜನನಿಯ ತನುಜಾತೇ ನಾಡಗೀತೆಗೆ 100 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಇದರ ಅಂಗವಾಗಿ ಕನ್ನಡ ರಾಜ್ಯೋತ್ಸವ ದಿನದಂದು ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳಿಂದ ಸಾಮೂಹಿಕವಾಗಿ ನಾಡಗೀತೆ ಹಾಡಲು ಸಿದ್ದತೆ ಮಾಡಬೇಕು. ಸಂಜೆಯ ವೇಳೆ ಕನ್ನಡ ನಾಡು ನುಡಿ ಕುರಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು.
  • ಬ್ಯಾಂಕುಗಳಲ್ಲಿ ಕನ್ನಡ ಭಾಷೆಯಲ್ಲಿ ವ್ಯವಹರಿಸಬೇಕು. ಕನ್ನಡ ಬಾರದ ಅಧಿಕಾರಿ ಸಿಬ್ಬಂದಿಗೆ ಕನ್ನಡ ಭಾಷೆ ತರಬೇತಿ ನೀಡಬೇಕು. ಪ್ರಧಾನವಾಗಿ ಕನ್ನಡ ಭಾಷೆಯಲ್ಲಿ ನಾಮಫಲಕಗಳು ಇರಬೇಕು. ಗಡಿ ಭಾಗಗಳಲ್ಲಿ ವ್ಯಾಪಕವಾಗಿ ಈ ಬಗ್ಗೆ ಪರಿಶೀಲನೆ ಮಾಡಬೇಕು ಎಂಬೂದು ಸೇರಿದಂತೆ ಇನ್ನಿತರ ಸಲಹೆಗಳನ್ನು ಮುಖಂಡರು ನೀಡಿದರು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ, “ಜಿಲ್ಲಾಡಳಿತದ ವತಿಯಿಂದ ಎಲ್ಲ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜಿಸುತ್ತಾ ಬರಲಾಗಿದೆ. ಈ ಬಾರಿಯೂ ಯಶಸ್ವಿಯಾಗಿ ಕನ್ನಡ ರಾಜ್ಯೋತ್ಸವ ಅಚರಣೆಗೆ ಎಲ್ಲ ಸಿದ್ದತೆಗಳನ್ನು ಮಾಡಲಿದ್ದೇವೆ. ವಿವಿಧ ಸಮಿತಿಗಳಿಗೆ ಜವಾಬ್ದಾರಿ ನೀಡಿ ಕಾರ್ಯಕ್ರಮ ನಡೆಸಲಾಗುವುದು. ಎಲ್ಲರ ಸಹಕಾರ ಈ ಹಿಂದಿನಂತೆ ಮುಂದುವರೆಯಲಿ” ಎಂದರು.

“ನಗರದ ಡಾ.ಬಿ.ಅರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ರಾಜ್ಯೋತ್ಸವ ಆಚರಣೆಗೆ ಸಿದ್ದತೆ ಕೈಗೊಳ್ಳಲಾಗುವುದು. ಕನ್ನಡ ನಾಡು, ನುಡಿ ಕುರಿತ ಅಭಿಮಾನದ ಕಾರ್ಯಕ್ರಮಗಳನ್ನು ಶಾಲಾ ಮಕ್ಕಳಿಂದ ಏರ್ಪಾಡು ಮಾಡಲಾಗುವುದು. ಶಿಷ್ಟಾಚಾರ ಅನುಸಾರ ಎಲ್ಲವನ್ನು ಪಾಲನೆ ಮಾಡಲಾಗುತ್ತದೆ. ಕನಿಷ್ಠ 250 ವಿದ್ಯಾರ್ಥಿಗಳಿಂದ ಸಾಮೂಹಿಕವಾಗಿ ನಾಡಗೀತೆ ಹಾಡಿಸಲು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಈಗಿನಿಂದಲೇ ತಾಲೀಮು ನಡೆಸಲು ಕ್ರಮವಹಿಸಬೇಕು” ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

“ನವೆಂಬರ್ ತಿಂಗಳ ಯಾವುದಾದರೂ ಒಂದು ದಿನ ಗಡಿ ಭಾಗದ ಗ್ರಾಮದಲ್ಲಿಯೂ ಕನ್ನಡ ರಾಜ್ಯೋತ್ಸವ ಆಚರಣೆಗೆ ತಹಶೀಲ್ದಾರರು, ತಾಲೂಕು ಪಂಚಾಯಿತಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ಜಿಲ್ಲೆಯ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸವನ್ನೂ ಸಹ ಮಾಡಲಾಗುವುದು. ಬ್ಯಾಂಕುಗಳು, ಗ್ರಾಮ ಪಂಚಾಯಿತಿಗಳು, ಕೇಂದ್ರ ಕಚೇರಿ, ವಿಮ ಸಂಸ್ಥೆ ಇನ್ನಿತರ ಸಂಸ್ಥೆಗಳಲ್ಲಿಯೂ ಕನ್ನಡ ರಾಜ್ಯೋತ್ಸವ ಆಚರಿಸಲು ಸೂಚನೆ ನೀಡಲಾಗುವುದು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಭಾಷೆಯಲ್ಲಿಯೇ ಪ್ರಧಾನವಾಗಿ ನಾಮಫಲಕ ಅಳವಡಿಸಿರುವ ಬಗ್ಗೆ ಹಾಗೂ ಕಟ್ಟುನಿಟ್ಟಿನ ಪರಿಶೀಲನೆಗಾಗಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು” ಎಂದರು.

ಬ್ಯಾಂಕುಗಳಲ್ಲಿ ಕನ್ನಡೇತರ ಅಧಿಕಾರಿ ಸಿಬ್ಬಂದಿಗೆ ಇದೇ ಅಕ್ಟೋಬರ್ 18ರಂದು ತರಬೇತಿ ನೀಡಲು ಜಿಲ್ಲಾಧಿಕಾರಿಯವರು ಸಭೆಯಲ್ಲಿಯೇ ಸೂಚನೆ ನೀಡಿದರಲ್ಲದೇ ಈ ನಿಗದಿತ ಕರ್ಯಕ್ರಮದ ಬಳಿಕವು ಅನ್ ಲೈನ್ ಮೂಲಕ ತರಬೇತಿ ಮುಂದುವರೆಸುವಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

Previous articleರಾಜ್ಯದಲ್ಲಿ ನವೆಂಬರ್ ಕ್ರಾಂತಿ: ಸಚಿವರ ರಹಸ್ಯ ಸಭೆ, ಸಂಪುಟ ವಿಸ್ತರಣೆಯ ಕನವರಿಕೆ!
Next articleಭೂ ವಿವಾದ: ಕುಮಾರಸ್ವಾಮಿ ವಿರುದ್ಧದ ಆರೋಪ, ಹೈಕೋರ್ಟ್‌ನಿಂದ ನಿರ್ದೇಶನ!

LEAVE A REPLY

Please enter your comment!
Please enter your name here