ಮನೋಜ ಪಾಟೀಲ
ಮಹಾತ್ಮ ಗಾಂಧೀಜಿ ಇಪ್ಪತ್ತನೇ ಶತಮಾನದ ದಾರ್ಶನಿಕ, ಸಂತ. ಸತ್ಯವಾದಿ ಕೂಡ. ಸತ್ಯ ಹರಿಶ್ಚಂದ್ರ ನಾಟಕವನ್ನು ನೋಡಿ ಸತ್ಯದ ಪಾಠ ಕಲಿತಿದ್ದ ಅವರು ಸತ್ಯವನ್ನೇ ಉಸಿರಾಡಿದವರು. ಅವರ ನಡೆ-ನುಡಿ-ನಡತೆಗಳಲ್ಲಿ ಸತ್ಯ ಮತ್ತು ವಚನಪಾಲನೆಯ ಧರ್ಮ ಸಮ್ಮಿಳಿತಗೊಂಡಿದ್ದವು. ಹದಿಹರೆಯದ ವಯದಲ್ಲಿ ಚಿತ್ತಚಾಂಚಲ್ಯಕ್ಕೆ ಕಾರಣವಾಗಬಹುದಾದ ಮಾಂಸಾಹಾರ, ಧೂಮ್ರಪಾನ ಮುಂತಾದ ವಿಷಯಗಳನ್ನು ತಮ್ಮ ಆತ್ಮಚರಿತ್ರೆಯಲ್ಲಿ ನಿರ್ಭಿಡೆಯಿಂದ ಬರೆದುಕೊಂಡಿದ್ದಾರೆ. ತಂದೆಯವರು ಮರಣಸನ್ನಿಹಿತರಾಗಿದ್ದಾಗ ಪತ್ನಿಯೊಂದಿಗೆ ಸುಖಿಸಿದ್ದನ್ನೂ ಲಜ್ಜೆಪಡುತ್ತಲೇ ವಿವರಿಸಿದ್ದಾರೆ.
ಮದುವೆಯಾದಾಗ ಇಬ್ಬರಿಗೂ ಒಂದೇ ವಯಸ್ಸು. ಗಾಂಧಿಯವರು ಬ್ಯಾರಿಸ್ಟರ್ ಪದವಿಯ ಕನಸಿನೊಂದಿಗೆ ಅಧ್ಯಯನ ನಡೆಸಲು ಲಂಡನ್ನಿಗೆ ಹೊರಟುನಿಂತಿದ್ದರು. ಆಗ ಅವರಿಂದ – ತಾಯಿ ಪುತಳೀಬಾಯಿ ಹಾಗೂ ಓದು-ಬರಹ ಗೊತ್ತಿಲ್ಲದ ಪತ್ನಿ ಕಸ್ತೂರಬಾ ಎರಡು ಪ್ರಮುಖ ಶಪಥಗಳನ್ನು ಮಾಡಿಸಿಕೊಂಡಿದ್ದರು. ಒಂದು – ಸಂಪೂರ್ಣ ಸಸ್ಯಾಹಾರ. ಇನ್ನೊಂದು ಸ್ತ್ರೀಸಂಗದಿಂದ ದೂರವಿರುವುದು. ಅದಕ್ಕೆ ಗಾಂಧಿ ನಿರ್ವಂಚನೆಯಿಂದಲೇ ಒಪ್ಪಿದ್ದರು.
ಪೌರ್ವಾತ್ಯ ಪದ್ಧತಿಯ ಸಂಸ್ಕಾರಯುತ ಗಾಂಧೀಜಿ ಮುಕ್ತಸಮಾಜದ ಪಾಶ್ಚಾತ್ಯ ಪ್ರದೇಶವಾದ ಲಂಡನ್ನಿಗೆ ಬಂದಾಗ ಅವರ ಹದಿವಯಸ್ಸಿನ್ನೂ ಮುಗಿದಿರಲಿಲ್ಲ. ಅಲ್ಲಿದ್ದಾಗ ಸಸ್ಯಾಹಾರಕ್ಕಾಗಿ ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ. ಅವಮಾನ, ಭಾರತೀಯ ಸ್ನೇಹಿತರ ಕೀಟಲೆ, ತಿರಸ್ಕಾರ ಇವನ್ನೆಲ್ಲ ತಾಳಿಕೊಂಡು ಹಲವು ಬಾರಿ ಅರೆಹೊಟ್ಟೆ ಉಂಡು ದಿನ ಕಳೆದರು ಗಾಂಧೀಜಿ. ಅವರು ಸ್ವದೇಶದಲ್ಲಿದ್ದಾಗ ಚೆನ್ನಾಗಿ ಊಟ ಮಾಡುತ್ತಿದ್ದರು. ಲಂಡನ್ನಿನಲ್ಲಿದ್ದಾಗ ಆ ನೆನಪು ಬಾಧಿಸುತ್ತಿತ್ತು. ಮತ್ತೆ ಮತ್ತೆ ನೀರು ಕುಡಿದು ತೇಗಿ ತೃಪ್ತಿಪಡುತ್ತಿದ್ದರು.
ಗಾಂಧೀಜಿ ಪೋರ್ಟ್ಸ್‌ಮೌತ್‌ನ ಸಸ್ಯಾಹಾರಿ ಸಮ್ಮೇಳನದಲ್ಲಿ ಪ್ರಬಂಧವನ್ನು ಮಂಡಿಸಬೇಕಿತ್ತು. ಅವರು ಸ್ನೇಹಿತರೊಡನೆ ಕಡಿಮೆ ವೆಚ್ಚದ ಖಾನಾವಳಿಯಲ್ಲಿ ಉಳಿದುಕೊಂಡಿದ್ದರು. ರಾತ್ರಿ ಊಟದ ನಂತರ ಇಸ್ಪೀಟ್ ಆಟ ಪ್ರಾರಂಭವಾಯಿತು. ಇದರಲ್ಲಿ ಮನೆಯ ಒಡತಿಯೂ ಪಾಲ್ಗೊಂಡಿದ್ದಳು. ಆಟ ರಂಗೇರಿ ಮುಂದುವರೆದಂತೆ ತಮಾಷೆ, ಅಶ್ಲೀಲತೆ ಸೇರಿದವು. ಆ ಆತಿಥೇಯಳು ಮತ್ತು ಗಾಂಧೀಜಿಯ ಸ್ನೇಹಿತರು ಸೇರಿ ತಮಾಷೆಯ ಅಸಭ್ಯ ಮಾತುಗಳನ್ನು ಆಡಲಾರಂಭಿಸಿದರು. ಇದರಲ್ಲಿ ಗಾಂಧಿಯವರೂ ಪಾಲ್ಗೊಂಡರು. ಈ ಲಹರಿ ಹೆಚ್ಚಾದಂತೆ ಗಾಂಧೀಜಿ ಆಟ ಬಿಟ್ಟು ಇಸ್ಪೀಟ್ ಎಲೆಗಳನ್ನು ಕೆಳಗೆಸೆದು ಮಿತಿಮೀರಿ ಮುಂದುವರೆಯುವ ಲಹರಿಯಲ್ಲಿದ್ದರು.
ಆಗ ಜೊತೆಗಿದ್ದ ಸ್ನೇಹಿತ ಎಚ್ಚರಿಸುತ್ತ, ‘ಏಯ್ ಹುಡುಗ, ಈ ಸೈತಾನ ನಿನ್ನ ಆವರಿಸಿಕೊಂಡಿದೆ. ಬೇಗ ಬೇಗ ಇಲ್ಲಿಂದ ಎದ್ದು ಹೋಗು’ ಎಂದಿದ್ದನ್ನು ಗಾಂಧಿಯವರು ಆತ್ಮಕಥೆಯಲ್ಲಿ ದಾಖಲಿಸಿದ್ದಾರೆ. ಈ ಮಾತು ಕೇಳಿಸಿಕೊಂಡು ಢವಗುಟ್ಟುವ ಎದೆಯಲ್ಲಿ ನಡುಗುತ್ತ ಓಡಿ ರೂಮು ಸೇರಿಕೊಂಡರು. ‘ಬೇಟೆಗಾರನಿಂದ ತಪ್ಪಿಸಿಕೊಂಡ ಶಿಕಾರಿಯಂತೆ ಓಡಿ ರೂಮು ಸೇರಿದ್ದೆ’ ಎಂದು ಅವರು ನೆನಪಿಸಿಕೊಂಡಿದ್ದಾರೆ. ಆ ಇಡೀ ರಾತ್ರಿ ಅವರಿಗೆ ನಿದ್ದೆ ಬರಲಿಲ್ಲ. ತಾಯಿ ಮತ್ತು ಪತ್ನಿಯ ನೆನಪಾಯಿತು. ಅವರಿಗೆ ಕೊಟ್ಟ ಪ್ರತಿಜ್ಞೆಯೂ ನೆನಪಾಯಿತು. ‘ಪತ್ನಿಯ ಹೊರತಾಗಿ ಪರಸ್ತ್ರೀಯೊಬ್ಬಳಿಂದ ಕಾಮಪ್ರಚೋದನೆಗೆ ಒಳಗಾಗಿದ್ದು ಅದೇ ಮೊದಲು’ ಎಂದು ಪ್ರಸ್ತಾಪಿಸಿದ್ದಾರೆ. ಸಜ್ಜನ ಸಂಗಾತಿಯ ಎಚ್ಚರಿಕೆಯನ್ನು ‘ವರ’ ಎಂದು ಕರೆದಿರುವ ಅವರು, ದೇವರೇ ತನಗೆ ಅನುಗ್ರಹಿಸಿದ ವರವೆಂದು ಸ್ಮರಿಸಿಕೊಂಡಿದ್ದಾರೆ. ಮೂರು ವರ್ಷಗಳ ಲಂಡನ್ ವಾಸ, ಸಸ್ಯಾಹಾರ ಪಾಲನೆ ಮತ್ತು ಸ್ತ್ರೀವ್ಯಾಮೋಹದಿಂದ ದೂರವಿದ್ದುಕೊಂಡೇ ವಚನ ಪಾಲಿಸಿದ್ದು ಈ ಶ್ರೇಷ್ಠ ವ್ಯಕ್ತಿಯ ಉನ್ನತ ಮೌಲ್ಯಗಳಿಗೆ ಸಾಕ್ಷಿ.
ದಕ್ಷಿಣ ಆಫ್ರಿಕೆಯಲ್ಲಿದ್ದಾಗಿನ ಒಂದು ಘಟನೆಯನ್ನು ಇಲ್ಲಿ ಸ್ಮರಿಸಬಹುದು. ಗಾಂಧೀಜಿ ಮತ್ತು ಕಸ್ತೂರಬಾ ಅವರ ದಾಂಪತ್ಯ ಆದರ್ಶಮಯವಾದದ್ದು. ಜನ ಅವರನ್ನು ‘ಬಾಪು’ ಮತ್ತು ‘ಬಾ’ ಎಂದೇ ಸಂಬೋಧಿಸುತ್ತಿದ್ದರು. ದಕ್ಷಿಣ ಆಫ್ರಿಕಾದಲ್ಲಿಯ ಫೋನಿಕ್ಸ್ ರೈಲ್ವೆ ಸ್ಟೇಷನ್ ಬಳಿಯ ನಿವೇಶನದಲ್ಲಿದ್ದ ಗಾಂಧೀಜಿ ತಮ್ಮ ಮನೆಯನ್ನೇ ಆಶ್ರಮದಂತೆ ಮಾಡಿದ್ದರು. ಅಲ್ಲಿ ಎಲ್ಲ ತರಹದ ಜನ ಬರುತ್ತಿದ್ದರು, ಇರುತ್ತಿದ್ದರು. ಅಲ್ಲಿಗೆ ಬಂದವರು ಶೌಚಗೃಹಗಳನ್ನು ಸ್ವಚ್ಛ ಮಾಡಬೇಕಿತ್ತು. ಒಂದುವೇಳೆ ಅದನ್ನು ಮರೆತರೆ ‘ಬಾ’ ಮತ್ತು ‘ಬಾಪೂಜಿ’ ಇಬ್ಬರಿಗೂ ಸರದಿ ಬರುತ್ತಿತ್ತು.
ಒಂದು ದಿನ ಅತಿ ಕೆಳಗಿನ ಜಾತಿಯ ವ್ಯಕ್ತಿಯೊಬ್ಬ ಬಂದಿದ್ದರು. ಆಗ ಶೌಚಗೃಹ ತೊಳೆಯುವ ಕೆಲಸ ಕಸ್ತೂರಬಾಗೆ ಬಂದಿತ್ತು. ಇದು ಧರ್ಮಭ್ರಷ್ಟವಾಗುವ ಕೆಲಸ ಎನಿಸಿ, ‘ನಾನು ಇದನ್ನು ಮಾಡುವುದಿಲ್ಲ’ ಎಂದರು. ಶಾಂತಮೂರ್ತಿಯಾಗಿದ್ದ ಗಾಂಧೀಜಿ ಕೋಪೋದ್ರಿಕ್ತರಾದರು. ಬಾ ಅವರನ್ನು ಹಿಡಿದೆಳೆದು ರಾತ್ರಿಯಾಗಿದ್ದ ಆ ಅವೇಳೆಯಲ್ಲಿ ಮನೆಯಿಂದ ಹೊರಹಾಕಿ, ‘ಎಲ್ಲಿಗೆ ಬೇಕಲ್ಲಿಗೆ ಹೋಗು, ಇಲ್ಲಿ ಇರಬೇಡ’ ಎಂದು ಹೇಳಿ ಬಾಗಿಲು ಹಾಕಿದರು. ಕೋಪ ಶಾಂತವಾದ ಮೇಲೆ ಬಾಗಿಲು ತೆಗೆದಾಗ ಬಾ ಕಣ್ಣೀರು ಸುರಿಸುತ್ತ ಕುಳಿತಿದ್ದರು. ಆ ಬಾ ಪ್ರಶ್ನಿಸಿದರು, ‘ಈ ಪರದೇಶದಲ್ಲಿ ರಾತ್ರಿ ಎಲ್ಲಿ ಹೋಗಲಿ?’ ಎಂದು. ಇದನ್ನು ಕೇಳಿಸಿಕೊಂಡರೂ ಗಾಂಧೀಜಿ ಉತ್ತರಿಸಲಿಲ್ಲ. ಬಾ ಅವರನ್ನು ಒಳಗೆ ಬಿಟ್ಟುಕೊಂಡು ಬಾಗಿಲು ಹಾಕಿಕೊಂಡರು. ನಂತರ ಪಶ್ಚಾತ್ತಾಪಪಟ್ಟರು. ಇದರೊಡನೆ ಕಸ್ತೂರಬಾ ಅವರ ವರ್ತನೆಯಲ್ಲೂ ಬದಲಾವಣೆಯಾಗಿತ್ತು. ಗಾಂಧೀಜಿಯವರ ಈ ಎಲ್ಲ ತುಮುಲಗಳನ್ನು ಅವರ ಮೊಮ್ಮಗ ರಾಜಮೋಹನ ಗಾಂಧಿ ತಮ್ಮ ಕೃತಿಯೊಂದರಲ್ಲಿ ವಸ್ತುನಿಷ್ಠವಾಗಿ ಬಣ್ಣಿಸಿದ್ದಾರೆ.