ನವದೆಹಲಿ: ರಷ್ಯಾದಿಂದ ತೈಲ ಖರೀದಿಸದಂತೆ ಅಮೆರಿಕ ಬೆದರಿಕೆ ಒಡ್ಡಿ ಭಾರತದಿಂದ ಅಮೆರಿಕ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇ 25ರಷ್ಟು ಸುಂಕ ವಿಧಿಸಿತ್ತು. ಬುಧವಾರ ಭಾರತದ ಮೇಲೆ ಮತ್ತಷ್ಟು ಸುಂಕವನ್ನು ಹೇರಿ ಶೇ 50ಕ್ಕೆ ಏರಿಸಲಾಗಿತ್ತು.
ಭಾರತ ಈ ಕುರಿತು ಪ್ರತಿಕ್ರಿಯೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ “ದೇಶದ ರೈತರು, ಮೀನುಗಾರರು ಹಾಗೂ ಹೈನುಗಾರರ ಹಿತಾಸಕ್ತಿಯೊಂದಿಗೆ ಎಂದಿಗೂ, ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ” ಎಂದು ತಿರುಗೇಟು ನೀಡಿದ್ದಾರೆ.
ಗುರುವಾರ ದೆಹಲಿಯಲ್ಲಿ ನಡೆದ ಹಸಿರು ಕ್ರಾಂತಿಯ ಹರಿಕಾರ, ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್ ಜನ್ಮ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಮೂರು ದಿನಗಳ ಜಾಗತಿಕ ಸಮ್ಮೇಳನವನ್ನು ನರೇಂದ್ರ ಮೋದಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿ ಅವರು, “ಭಾರತವು ಅಮೆರಿಕಕ್ಕೆ ವಿವಿಧ ರೀತಿಯ ಕೃಷಿ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ಟ್ರಂಪ್ ವಿಧಿಸಿದ ಸುಂಕಗಳ ಹೊರೆ ಅನುಭವಿಸುವ ಕ್ಷೇತ್ರಗಳಲ್ಲಿ ಕೃಷಿಯೂ ಒಂದಾಗಿದೆ. ನಮಗೆ ರೈತರ ಹಿತಾಸಕ್ತಿ ಪ್ರಥಮ ಆದ್ಯತೆಯಾಗಿದೆ. ಅದಕ್ಕಾಗಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ” ಎಂದರು.
“ಸರ್ಕಾರದ ನಿರ್ಧಾರದಿಂದ ಭಾರೀ ಬೆಲೆ ತೆರಬೇಕಾಗುತ್ತದೆ ಎನ್ನುವುದು ನನಗೆ ತಿಳಿದಿದೆ. ಇದಕ್ಕೆ ನಾನು ಸಿದ್ಧನಿದ್ದೇನೆ. ದೇಶದ ರೈತರು, ಮೀನುಗಾರರು ಮತ್ತು ಜಾನುವಾರು ಮಾಲೀಕರ ಹಿತದೃಷ್ಟಿಯಿಂದ ಭಾರತ ಎಲ್ಲದ್ದಕ್ಕೂ ಸಿದ್ಧವಾಗಿದೆ” ಎಂದು ಮೋದಿ ತಿಳಿಸಿದರು.
“ರೈತರ ಆದಾಯವನ್ನು ದ್ವಿಗುಣ ಗೊಳಿಸುವ ನಿಟ್ಟಿನಲ್ಲಿ ಸರ್ಕಾರದ ಸಹಕಾರವಿದ್ದು ಕೃಷಿ ವೆಚ್ಚವನ್ನು ಕಡಿಮೆ ಮಾಡುವುತ್ತ ಚಿಂತನೆಗಳನ್ನು ಮಾಡಲಾಗುತ್ತಿದೆ. ಹೊಸ ಆದಾಯದ ಮೂಲಗಳನ್ನು ಸೃಷ್ಟಿಸುವ ಗುರಿಗಳ ಮೇಲೆ ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ” ಎಂದು ಮೋದಿ ವಿವರಣೆ ನೀಡಿದರು.
“ನಮ್ಮ ಸರ್ಕಾರವು ರೈತರ ಬಲವನ್ನು ದೇಶದ ಪ್ರಗತಿಯ ಆಧಾರವೆಂದು ನಾವು ಪರಿಗಣಿಸಿದ್ದೇವೆ. ಸರಕಾರವು ರೈತರಿಗಾಗಿ ಹಲವು ಯೋಜನೆಗಳನ್ನು ನೀಡುತ್ತಲೇ ಬಂದಿದೆ. ಪ್ರಧಾನಮಂತ್ರಿ ಸಮ್ಮಾನ್ ನಿಧಿ, ಪ್ರಧಾನಮಂತ್ರಿ ಬೆಳೆ ವಿಮಾ ಯೋಜನೆ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಂತಹ ಹಲವು ಯೋಜನೆಗಳ ಮೂಲಕ ರೈತರಲ್ಲಿ ಆರ್ಥಿಕ ಸ್ವಾಲಂಬನೆಗೆ ಒತ್ತು ನೀಡಲಾಗುತ್ತಿದೆ” ಎಂದರು.
“ರೈತರ ಹಿತಾ ಕಾಪಾಡುವುದು ನಮ್ಮ ಪ್ರಮುಖ ಆದ್ಯತೆ ಆಗಿದೆ. ರೈತರು, ಮೀನುಗಾರರು ಮತ್ತು ಹೈನುಗಾರರ ಹಿತಾಸಕ್ತಿಗಳ ಬಗ್ಗೆ ಭಾರತ ಸರಕಾರ ಎಂದಿಗೂ ಯಾರೊಂದಿಗೂ ರಾಜಿಗೆ ಸಿದ್ದವಿಲ್ಲ” ಎಂದು ಮೋದಿ ದೇಶದ ರೈತರ ಪರವಾಗಿ ಮಹತ್ವದ ಹೇಳಿಕೆ ನೀಡಿದರು.
ಜುಲೈ 20ರಂದು ಅಮೆರಿಕ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಶೇ 25ರಷ್ಟು ಸುಂಕವನ್ನು ವಿಧಿಸುವ ಕಾರ್ಯಾದೇಶಕ್ಕೆ ಡೊನಾಲ್ಡ್ ಟ್ರಂಪ್ ಸಹಿ ಮಾಡಿದ್ದರು. ಇದೀಗ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಮತ್ತೆ ಶೇ 25ರಷ್ಟು ಸುಂಕವನ್ನು ಟ್ರಂಪ್ ವಿಧಿಸಿದ್ದಾರೆ.
ಅಮೆರಿಕ ಭಾರತದ ಮೇಲೆ ಹೆಚ್ಚಿನ ಸುಂಕ ವಿಧಿಸುವುದು ಎರಡೂ ರಾಷ್ಟ್ರಗಳ ನಡುವಿನ ಸ್ನೇಹ, ವ್ಯಾಪಾರ ಒಪ್ಪಂದದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಆದರೆ ಪ್ರತಿಪಕ್ಷಗಳು ಟ್ರಂಪ್ ಶುಲ್ಕ ವಿಧಿಸುತ್ತಿರುವುದನ್ನು ಟೀಕಿಸುತ್ತಿವೆ.