ಬೆಂಗಳೂರು: ಕರ್ನಾಟಕದಲ್ಲಿ ಕ್ಯಾಂಪಾಕೋಲಾ ಸಂಸ್ಥೆಯು ತಂಪು ಪಾನೀಯಗಳು ಮತ್ತು ಬಾಟಲ್ ಮಾಡುವ ಘಟಕವನ್ನು ಸ್ಥಾಪಿಸಲು ಉದ್ದೇಶಿಸಿದೆ. 1,622 ಕೋಟಿ ರೂ.ಗಳ ಹೂಡಿಕೆ ಮಾಡುವ ರಿಲಯನ್ಸ್ ಗ್ರೂಪ್‌ನ ಕ್ಯಾಂಪಾ ಕೋಲಾ ಪ್ರಸ್ತಾವನೆಯನ್ನು ಕರ್ನಾಟಕ ಸರ್ಕಾರ ಅನುಮೋದಿಸಿದೆ. ಈ ಹೂಡಿಕೆಯಿಂದಾಗಿ 1,200 ಜನರಿಗೆ ನೇರ ಉದ್ಯೋಗ ಸಿಗಲಿದೆ.
ವಿಜಯಪುರ ಜಲ್ಲೆಯು ಉತ್ತರ ಕರ್ನಾಟಕದ ಆರ್ಥಿಕ ಚಟುವಟಿಕೆಯ ಚೈತನ್ಯಶೀಲ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಸಂಕಲ್ಪದೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಸೋಮವಾರ ನಡೆದ ನಿರ್ಣಾಯಕ ಸಭೆಯ ನಂತರ ವಿವರಗಳನ್ನು ಹಂಚಿಕೊಂಡು, ವಿಜಯಪುರ ಜಿಲ್ಲೆಯ ಮುಳವಾಡ ಕೈಗಾರಿಕಾ ಪ್ರದೇಶ ಹಂತ 2 ರಲ್ಲಿ 100 ಎಕರೆ ಭೂಮಿಯನ್ನು ನೀಡಲಾಗುತ್ತಿದ್ದು, ತಂಪು ಪಾನೀಯ, ಕುಡಿಯುವ ನೀರು ಮತ್ತು ಬಾಟ್ಲಿಂಗ್ ಚಟುವಟಿಕೆಗಳಿಗೆ ಕ್ಯಾಂಪಾಕೋಲಾ ಹೂಡಿಕೆಯಿಂದಾಗಿ ಸಾವಿರಾರು ಜನರಿಗೆ ನೇರ ಉದ್ಯೋಗ ಸಿಗಲಿದೆ ಎಂದರು.
ವಿಜಯಪುರ ಜಿಲ್ಲೆಗೆ ಒಟ್ಟು 17 ಸಾವಿರ ಕೋಟಿಗಿಂತ ಹೆಚ್ಚು ಬಂಡವಾಳ: ತಂಪು ಪಾನೀಯ, ಧಾನ್ಯ ಸಂಸ್ಕರಣೆ, ಪವನ ವಿದ್ಯುತ್ ಬ್ಲೇಡ್, ಸಿವಿಸಿ/ ಪಿವಿಸಿ ಪೈಪ್, ಸೋಲಾರ್ ವೇಫರ್, ಬಣ್ಣ ಮತ್ತು ರಾಸಾಯನಿಕಗಳು ಹಾಗೂ ಮರುಬಳಕೆ ಇಂಧನ ತಯಾರಿಕೆ ವಲಯದ ವಿವಿಧ ಉದ್ಯಮ ಸಮೂಹಗಳು ವಿಜಯಪುರ ಜಿಲ್ಲೆಯಲ್ಲಿ ಒಟ್ಟು 17 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಬಂಡವಾಳ ತೊಡಗಿಸಲು ಮುಂದೆ ಬಂದಿವೆ.
ಸಿವಿಸಿ ಮತ್ತು ಪಿವಿಸಿ ಪೈಪುಗಳ ಉತ್ಪಾದಿಸೋ ಪೊದ್ದಾರ್ ಪ್ಲಂಬಿಂಗ್ ಸಿಸ್ಟಂ ಪ್ರೈವೇಟ್ ಲಿಮಿಟೆಡ್ ರಾಜ್ಯದಲ್ಲಿ 758 ಕೋಟಿ ರೂ. ಹೂಡಿಕೆ ಮಾಡಲು ತೀರ್ಮಾನಿಸಿದೆ. ಈಗಾಗಲೇ ಸರ್ಕಾರ ಕಂಪನಿಗೆ ಕೋಲಾರ ಜಿಲ್ಲೆಯ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ 33 ಎಕರೆ ಜಮೀನು ನೀಡಿದೆ. ಮುಂದಿನ ವರ್ಷ 2026ರ ಆಗಸ್ಟ್ ಹೊತ್ತಿಗೆ ಇದು ತನ್ನ ತಯಾರಿಕಾ ಚಟುವಟಿಕೆ ಆರಂಭಿಸಲಿದೆ.
ಪವನ ವಿದ್ಯುತ್ ವಲಯಕ್ಕೆ ದೊಡ್ಡ ಬ್ಲೇಡ್‌ಗಳ ತಯಾರಿಕೆಯಲ್ಲಿ ಪ್ರವರ್ತಕವಾಗಿರುವ ಸುಜ್ಲಾನ್, ಜಿಲ್ಲೆಯಲ್ಲಿ 360 ಕೋಟಿ ರೂ. ಹೂಡಿಕೆ ಮಾಡಲು ಯೋಜಿಸಿದ್ದು. 350 ಕೋಟಿ ರೂ. ಹೂಡಿಕೆ ಮಾಡಲು ಪ್ರಸ್ತಾಪಿಸಿದೆ.
ಇನ್ನು ವಿಜಯಪುರ ವಿಮಾನ ನಿಲ್ದಾಣದ ಮುಂಬರುವ ಕಾರ್ಯಾಚರಣೆಯನ್ನು ಗಮನದಲ್ಲಿಟ್ಟುಕೊಂಡು ಮೆಲ್‌ಸ್ಟಾರ್ ವಿಮಾನ ಹಾರಾಟ ತರಬೇತಿ ಶಾಲೆಯನ್ನು ಸ್ಥಾಪಿಸಲು ಉತ್ಸುಕವಾಗಿದೆ. ರಿಲಯನ್ಸ್ ಸಮೂಹದ ಭಾಗವಾಗಿರುವ ಕ್ಯಾಂಪಾ ಕೋಲಾದ ತಂಪು ಪಾನೀಯ ಮತ್ತು ಬಾಟ್ಲಿಂಗ್ ಘಟಕದ ಸ್ಥಾಪನೆಗಾಗಿ 1,622 ಕೋಟಿ ರೂ. ಮೊತ್ತದ ಹೂಡಿಕೆಗೆ ಸಜ್ಜಾಗಿದೆ.
ರಿನ್ಯೂ ಪವರ್, ಆರ್ಸೋಲೆಕ್ ಮತ್ತು ಹೆಕ್ಲಾ ಕ್ಲೈಮೇಟ್ ಕ್ರಮವಾಗಿ 4,700 ಕೋಟಿ, 4,000 ಕೋಟಿ ಮತ್ತು 8,000 ಕೋಟಿ ರೂ. ಹೂಡಿಕೆಗಳನ್ನು ಪ್ರಸ್ತಾಪಿಸಿದ್ದು. ಈ ಯೋಜನೆಗಳು ಕಾರ್ಯರೂಪಕ್ಕೆ ಬಂದರೆ, ಜಿಲ್ಲೆಗೆ ಸುಮಾರು 16,700 ಕೋಟಿ ರೂ. ಮೌಲ್ಯದ ಹೂಡಿಕೆಗಳನ್ನು ತರಬಹುದು. ಬಣ್ಣಗಳು ಮತ್ತು ರಾಸಾಯನಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಸಿಮ್ ಸಹ ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿದೆ ಎಂದು ಸಚಿವರು ತಿಳಿಸಿದ್ದಾರೆ.