ಹುಬ್ಬಳ್ಳಿ: ಜೀವ ವೈವಿಧ್ಯ ಸಂರಕ್ಷಣಾ ಕ್ಷೇತ್ರದ ನೊಬೆಲ್ ಎಂದೇ ಪ್ರಸಿದ್ಧಿ ಪಡೆದ, ಯುಎನ್‌ಡಿಪಿ (ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ) ಕೊಡಮಾಡುವ `ಈಕ್ವೇಟರ್ ಇನಿಷಿಯೇಟಿವ್’ ಪ್ರಶಸ್ತಿಗೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ತೀರ್ಥ ಗ್ರಾಮದ ಬೀಬಿ ಫಾತಿಮಾ ಮಹಿಳಾ ಸಂಘ ಭಾಜನವಾಗಿದೆ.
ʻನಿಸರ್ಗ ಆಧಾರಿತ ತಾಪಮಾನ ನಿಯಂತ್ರಣಕ್ಕೆ ಮಹಿಳೆ ಹಾಗೂ ಯುವಜನರ ನಾಯಕತ್ವ’ ಎಂಬ ವಿಷಯ ಆಧರಿಸಿ ನಡೆದ ಈ ವರ್ಷದ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ, 103 ದೇಶಗಳ ಸುಮಾರು 700 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಅರ್ಜೈಂಟೀನಾ, ಬ್ರೆಜಿಲ್, ಪೆರು, ಇಂಡೋನೇಷ್ಯಾ, ಕೀನ್ಯಾ, ತಾಂಜಾನಿಯಾ, ಪಪು ನ್ಯೂ ಗಿನಿಯ, ಈಕ್ವೆಡಾರ್ ದೇಶಗಳ ಸಂಸ್ಥೆ ಜತೆಗೆ ಭಾರತದ `ಬೀಬಿ ಫಾತಿಮಾ ಮಹಿಳಾ ಸಂಘ’ ಈ ಮಹತ್ವದ ಪುರಸ್ಕಾರಕ್ಕೆ ಪಾತ್ರವಾಗಿದೆ. ಪ್ರಶಸ್ತಿಯು 10 ಸಾವಿರ ಅಮೆರಿಕನ್ ಡಾಲರ್ (ಸುಮಾರು 8.5 ಲಕ್ಷ ರೂ.) ನಗದು ಬಹುಮಾನವನ್ನು ಒಳಗೊಂಡಿದ್ದು, ಅಕ್ಟೋಬರ್ 9 ರಂದು ನ್ಯೂಯಾರ್ಕ್‌ನಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ.
`ಸಹಜ ಸಮೃದ್ಧ’ ಬಳಗದ ಈ ಮಹಿಳಾ ಸಂಘವು ಮಳೆಯಾಶ್ರಿತ ಜಮೀನುಗಳಲ್ಲಿ ಪರಿಸರ ಸ್ನೇಹಿ ಕೃಷಿ ವಿಧಾನ ಅಳವಡಿಕೆ, ಸಮುದಾಯ ಬೀಜ ಬ್ಯಾಂಕ್, ಆಹಾರ – ಪೋಷಕಾಂಶ ಭದ್ರತೆ, ಸಿರಿಧಾನ್ಯ ಬೇಸಾಯ, ಸಂಸ್ಕರಣಾ ಘಟಕ ನಿರ್ವಹಣೆ ಹಾಗೂ ಮೌಲ್ಯವರ್ಧನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಪರೂಪದ ಸಾಧನೆ ಮಾಡಿದೆ. ಅದರಲ್ಲೂ ಸುಮಾರು 30 ಗ್ರಾಮಗಳಲ್ಲಿ ನೈಸರ್ಗಿಕ ವಿಧಾನದಲ್ಲಿ ಸಿರಿಧಾನ್ಯ ಆಧಾರಿತ ಮಿಶ್ರ ಬೆಳೆ ಬೇಸಾಯವನ್ನು ಮರಳಿ ಚಾಲ್ತಿಗೆ ತಂದಿರುವುದು ಸಂಘದ ಹೆಗ್ಗಳಿಕೆಯಾಗಿದೆ.
ತೀರ್ಥ ಗ್ರಾಮದಲ್ಲಿ ಕೇವಲ 15 ಮಹಿಳೆಯರಿಂದ 2018 ರಲ್ಲಿ ಸ್ಥಾಪನೆಯಾದ ಬೀಬಿ ಫಾತಿಮಾ ಮಹಿಳಾ ಸಂಘವು ಸುಸ್ಥಿರ ಕೃಷಿಯ ಮೂಲಕ ಸಣ್ಣ ಮತ್ತು ಅತಿ ಸಣ್ಣ ಕೃಷಿ ಕುಟುಂಬಗಳ ಜೀವನೋಪಾಯವನ್ನು ಸುಧಾರಿಸುವ ಪ್ರಯತ್ನಗಳನ್ನು ಶುರು ಮಾಡಿತ್ತು. ಹವಾಮಾನ ವೈಪರೀತ್ಯ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯವುಳ್ಳ ದೇಸಿ ತಳಿಗಳ ಸಂರಕ್ಷಣೆಯನ್ನು ಆದ್ಯತೆ ಮೇರೆಗೆ ಕೈಗೊಂಡಿರುವ `ಬೀಬಿ ಫಾತಿಮಾ’ ಸಂಘವು ವಿವಿಧ ಸಿರಿಧಾನ್ಯಗಳ ನೂರಾರು ತಳಿಗಳನ್ನು ಸಂರಕ್ಷಿಸಿದೆ. ಇಂಥ ದೇಸಿ ತಳಿಗಳ ಬೀಜಗಳನ್ನು ಆಸಕ್ತ ರೈತರಿಗೆ ಉಚಿತವಾಗಿ ವಿತರಿಸಲು ಸಮುದಾಯ ಬೀಜ ಬ್ಯಾಂಕ್ ಸ್ಥಾಪಿಸಿದೆ.
ಈ ಕುರಿತಂತೆ ಮಾತನಾಡಿರುವ ಬೀಬಿ ಫಾತಿಮಾ ಸಂಘ ಅಧ್ಯಕ್ಷರಾದ ಬಿಬಿಜಾನ್ ಹಳೆಮನಿ ಅವರು, “ಮುಸ್ಲಿಂ ಸಮುದಾಯದವರ ಸಾಧನೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ. ನಮ್ಮಿಂದ ಪ್ರೇರಣೆಗೊಂಡು ನಮ್ಮ ತಾಲೂಕಿನಲ್ಲಿ ಅನೇಕ ಮಹಿಳೆಯರು ಆರ್ಥಿಕವಾಗಿ ಸಬಲರಾಗಿದ್ದಾರೆ. ಹಳ್ಳಿ ಮಟ್ಟದಲ್ಲಿ ಕೃಷಿಯಾಧಾರಿತ ಆರ್ಥಿಕ ಚಟುವಟಿಕೆಗಳನ್ನು ನಡೆಸುತ್ತಿರುವ ಬೀಬಿ ಫಾತಿಮಾ ಮಹಿಳಾ ಸಂಘದ ಮಾದರಿಯನ್ನು ಬೇರೆ ಕಡೆಯೂ ಅನುಸರಿಸಬಹುದು. ಇದರಿಂದ ಮಹಿಳಾ ಸಬಲೀಕರಣ ಸಾಧ್ಯ” ಎಂದು ಹೇಳಿದ್ದಾರೆ.