ಬೆಂಗಳೂರು: ನಟಿ ರಮ್ಯಾ ಹಾಗೂ ದರ್ಶನ್ ಅಭಿಮಾನಿಗಳ ನಡುವಿನ ಜಟಾಪಟಿ ಸದ್ಯ ರಾಜ್ಯದಲ್ಲಿ ಚರ್ಚೆಯ ವಿಚಾರ. ಈ ಜಟಾಪಟಿ ಈಗ ಸೈಬರ್ ಕ್ರೈಂ ಪೊಲೀಸ್ ಠಾಣೆ ಮೆಟ್ಟಿಲೇರಲಿದೆ. ರಮ್ಯಾ ಇತ್ತಿಚೆಗೆ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಒಂದು ಪೋಸ್ಟ್‌ನಿಂದಾಗಿ ದರ್ಶನ್ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಅಶ್ಲೀಲ್ ಸಂದೇಶಗಳ ವಿರುದ್ಧ ಕಾನೂನು ಸಮರಕ್ಕೆ ರಮ್ಯಾ ಸಿದ್ದವಾಗಿದ್ದು ದೂರು ನೀಡಲು ಮುಂದಾಗಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಹೆಸರು ಕೇಳಿ ಬಂದಾಗ, ಅಂದು ಕೂಡ ರಮ್ಯಾ ಮಾತಾಡಿದ್ದರು. ದರ್ಶನ್‌ರಿಂದ ತಪ್ಪಾಗಿದ್ದರೆ ಕಠಿಣ ಶಿಕ್ಷೆಯೇ ಆಗಬೇಕು ಅಂತ ಪ್ರತಿಕ್ರಿಯೆ ನೀಡಿದ್ದರು. ಜಾಮೀನು ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪನ್ನು ಕಾಯ್ದಿರಿಸಿದಾಗಲೂ ದರ್ಶನ್ ವಿರುದ್ಧವೇ ಪೋಸ್ಟ್ ಮಾಡಿದ್ದರು.
ಹಾಗಾಗಿ ದರ್ಶನ್ ಫ್ಯಾನ್ಸ್ ರಮ್ಯಾ ವಿರುದ್ಧ ತಿರುಗಿಬಿದ್ದಿದ್ದರು. ಆದರೆ ಕಳೆದ ಎರಡು ದಿನದಿಂದ ನಟಿ ರಮ್ಯ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಕುರಿತಂತೆ ಜಟಾಪಟಿ ನಡೆಯುತ್ತಿದೆ. ಭಾನುವಾರ ಸಂಜೆ ತನ್ನ ಇನ್‌ಸ್ಟಾಗ್ರಾಮ್ ಅಧಿಕೃತ ಪುಟದಲ್ಲಿ ಅವರ ಇನ್‌ಬಾಕ್ಸ್‌ಗೆ ಬಂದ ಮೆಸೇಜ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ತೆಗೆದು ರಮ್ಯಾ ಸ್ಟೇಟಸ್ ಹಾಕಿಕೊಂಡಿದ್ದಾರೆ.
ನಟಿ ರಮ್ಯಾ ದೂರು ನೀಡುವ ನಿರ್ಧಾರಕ್ಕೂ ಬಂದಿದ್ದು, ದರ್ಶನ್ ಗೆಳತಿ ಪವಿತ್ರಾ ಗೌಡ ಅವರಿಗೆ ಕೊಲೆಯಾದ ರೇಣುಕಾಸ್ವಾಮಿ ಕಳಿಸುತ್ತಿದ್ದ ಟೆಕ್ಸ್ಟ್ ಸಂದೇಶಗಳು ಮತ್ತು ದರ್ಶನ್ ಅಭಿಮಾನಿಗಳು ತನಗೆ ಕಳಿಸುತ್ತಿರುವ ಸಂದೇಶಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ, ಮಹಿಳೆಯರ ಬಗ್ಗೆ ಇಂಥ ಕೀಳು ಮನಸ್ಥಿತಿ ಹೊಂದಿರುವುದರಿಂದಲೇ ಅವರ ಮೇಲೆ, ದೌರ್ಜನ್ಯ, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಹೆಚ್ಚುತ್ತಿವೆ ಎಂದಿದ್ದಾರೆ.
ದೂರು ಕೊಟ್ಟರೆ ಕ್ರಮ: ರಮ್ಯಾ ಅವರು ಸೈಬರ್ ಕ್ರೈಂಗೆ ದೂರು ನೀಡುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಪರಮೇಶ್ವರ, “ರಮ್ಯಾ ದೂರು ಕೊಡಲಿ ಆಮೇಲೆ ಕ್ರಮ ಕೈಗೊಳ್ಳುತ್ತೇವೆ, ದೂರು ಕೊಟ್ಟರೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ. ಸೊಮೊಟೊ ಕೇಸ್ ದಾಖಲಿಸಲು ಅವಕಾಶ ಇದ್ದರೆ ಪರಿಶೀಲನೆ ಮಾಡುತ್ತಾರೆ. ಆದರೆ ಮೊದಲು ರಮ್ಯಾ ದೂರು ಕೊಡಲಿ” ಎಂದು ಹೇಳಿದ್ದಾರೆ.
ಈ ನಡುವೆ ಕನ್ನಡ ಚಿತ್ರರಂಗದ ಕ್ರೇಜಿ ಕ್ವೀನ್ ರಕ್ಷಿತಾ ದರ್ಶನ್ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶದ ಮೂಲಕ ಕಿವಿಮಾತು ಹೇಳಿದ್ದು, ‘ನೀವು ಜನರ ಮಾನಸಿಕ ಸ್ಥಿತಿಗತಿಯನ್ನು ನೋಡೋಕೆ ಸಾಧ್ಯವಿಲ್ಲ, ದಯವಿಟ್ಟು ದಯೆಯಿಂದಿರಿ (ಸಹನೆಯಿಂದಿರಿ)’ ಎಂದು ಪೋಸ್ಟ್ ಹಾಕಿದ್ದಾರೆ.