ಕನಸಿಗೆ ಬಣ್ಣ ಹಚ್ಚುವ ಶರೀಫಾ

Advertisement

ಕಳೆದ ಎಂಟು ವರ್ಷಗಳಿಂದ ಸಂಘಟನೆಯಲ್ಲಿ ತೊಡಗಿಕೊಂಡು ಹೊಸತನದೊಂದಿಗೆ ಹೆಂಗಳೆಯರ ಕನಸುಗಳಿಗೆ ಬಣ್ಣ ಹಚ್ಚುವ ಹೆಣ್ಣುಮಗಳೊಬ್ಬಳ ಯಶೋಗಾಥೆ ಇದು. ಉತ್ತರ ಕನ್ನಡದ ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿಯ ಶರೀಫಾಬಿ ಮುಲ್ಲಾ ತಮ್ಮ ವಿಧಾಯಕ ಕೆಲಸಗಳ ಮೂಲಕ ಸಮಾಜಮುಖಿಯಾಗಿ ಗುರುತಿಸಿಕೊಂಡಿದ್ದಾರೆ.

ಕುಟುಂಬದ ನಿತ್ಯ ಕಾಯಕದ ಜೊತೆಗೆ ಬಿಡುವಿನ ವೇಳೆಯಲ್ಲಿ ಕ್ರಿಯಾಶೀಲರಾಗಿ ಹತ್ತು ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಶರೀಫಾಬಿ ಮುಲ್ಲಾ, ಮಹಿಳೆಯೊಬ್ಬಳು ತನ್ನ ಪರಿಸರದಲ್ಲೇ ಏನೆಲ್ಲ ಸಾಧಿಸಬಲ್ಲಳು ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗಿದ್ದಾರೆ.
ಉತ್ತರ ಕನ್ನಡದ ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿಯ ಶರೀಫಾಬಿ ಭಾಗ್ಯಶ್ರೀ ಸಂಜೀವಿನಿ ಸ್ವಸಹಾಯ ಸಂಘಗಳ ಒಕ್ಕೂಟದ ಮಾದರಿ ಕರ‍್ಯಗಳನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಬಿಎಸ್‌ಸಿ ಪದವೀಧರೆಯಾಗಿರುವ ಈಕೆ ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು ಭಾಷೆಯನ್ನು ಕರಗತ ಮಾಡಿಕೊಂಡು ವರ್ತಮಾನದಲ್ಲಿ ಮಹಿಳೆಯರ ಜೀವನಮಟ್ಟದ ಸ್ಥಿತಿಗತಿಯ ಕುರಿತಾಗಿ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಸ್ವತಃ ಸ್ವ ಉದ್ಯೋಗದಲ್ಲಿ ಯಶಸ್ವಿಯಾಗಿರುವುದಲ್ಲದೇ ಇತರರಿಗೆ ನೆರವಾಗುವಲ್ಲಿ ವಿಶೇಷ ಕಾಳಜಿವಹಿಸಿದ್ದಾರೆ.

ಅಡಿಕೆ ಸಿಪ್ಪೆ, ಅಡಿಕೆ ಹಾಳೆ, ತೆಂಗಿನ ಗರಿ, ಗೊರಟೆ ಹೀಗೆ ನಿರುಪಯುಕ್ತ ವಸ್ತುಗಳನ್ನೇ ಮನೆಯ ಗೋಡೆಯ ಅಲಂಕಾರಿಕ ವಸ್ತುಗಳನ್ನಾಗಿ, ಕರ‍್ಯಕ್ರಮದ ಸ್ವಾಗತದ ಹೂಗುಚ್ಛಗಳನ್ನು ಆಕರ್ಷಕವಾಗಿ ತಯಾರಿಸಿದ್ದಾರೆ. ಸೀರೆಗಳಿಗೆ ಕಸೂತಿ ಬಿಡಿಸುವ ಜೊತೆಗೆ, ಮದುವೆಯ ಪ್ರಸಾದನದ ನಿರ್ವಹಣೆಯನ್ನು ನೆರವೇರಿಸುತ್ತಾರೆ ಶರೀಫಾ. ಮೆಹಂದಿ ಬಿಡಿಸುವುದರಲ್ಲೂ ಅವರದು ಎತ್ತಿದ ಕೈ. ವಿವಿಧ ಗಾತ್ರದ, ಬಗೆ ಬಗೆಯ ರುಚಿಯ ಚಾಕಲೇಟ್‌ಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಜನಪ್ರಿಯರಾಗಿದ್ದಾರೆ. ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಫಿನಾಯಿಲ್, ಸೋಪು ವಿವಿಧ ಗೃಹ ಉತ್ಪನ್ನಗಳನ್ನು ಸಿದ್ಧ ಪಡಿಸಿ ಜನ ಸೇರುವ ಉತ್ಸವ, ಮೇಳ -ಜಾತ್ರೆಗಳಲ್ಲಿ ಮಳಿಗೆಗಳನ್ನು ತೆರೆದು ಗ್ರಾಹಕರನ್ನು ಆಕರ್ಷಿಸುವಲ್ಲಿ ಗೆದ್ದಿದ್ದಾರೆ.
ಗ್ರಾಮೀಣ ಭಾಗದಲ್ಲಿ ಹದಿನೈದಕ್ಕೂ ಹೆಚ್ಚು ಸ್ತ್ರೀಶಕ್ತಿ ಸಂಘಗಳನ್ನು ರಚಿಸಿಕೊಂಡಿದ್ದಾರೆ. ಸ್ಥಳೀಯ ಬ್ಯಾಂಕ್‌ಗಳಲ್ಲಿ ಮಹಿಳೆಯರ ಬದುಕಿಗೆ ಅಧಾರವಾಗಬಲ್ಲ ಆರ್ಥಿಕ ಸಹಾಯವನ್ನು ಪಡೆದು ಅಭಿವೃದ್ಧಿಯ ಜೊತೆಗೆ ಉಳಿತಾಯ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಸಂಪನ್ಮೂಲಗಳ ಬಗೆಗೆ ಲಕ್ಷವಹಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅಬಲರನ್ನೂ ಸಬಲರನ್ನಾಗಿ ಮಾಡಲು ವಾರ್ಷಿಕ ಯೋಜನೆಗಳನ್ನು ಹಾಕಿಕೊಂಡು ಕೌಶಲ್ಯಾಭಿವೃದ್ಧಿಯ ತರಬೇತಿ ಮತ್ತು ಪ್ರಾತ್ಯಕ್ಷಿಕೆಗಳನ್ನು ವಿವಿಧ ಹಂತದಲ್ಲಿ ಕೈಗೊಂಡು ಮಹಿಳೆಯರ ಬಲವರ್ಧನೆ ಮಾಡುವಲ್ಲಿ ಶ್ರಮವಹಿಸುತ್ತಿದ್ದಾರೆ. ಗ್ರಾಮೀಣ ಭಾಗದ ಕೌಶಲ್ಯವನ್ನು ಗುರುತಿಸಿ ಪ್ರೋತ್ಸಾಹಿಸುವ ಇವರ ಅಂತರಂಗದ ಕಾಳಜಿಯ ಹಿಂದೆ ಮಹಿಳೆಯರ ಸಬಲೀಕರಣದ ಉದ್ದೇಶ ಅಡಗಿದೆ.
ಜೀವನದಲ್ಲಿ ಏನಾದರೂ ಸಾಧಿಸುವ ಹಂಬಲ ಇಟ್ಟುಕೊಂಡು ಇದೀಗ ತನ್ನ ಗುರಿ ತಲುಪಿದ ಸಂತೃಪ್ತ ಭಾವ ಶರೀಫಾರ ಮುಖದಲ್ಲಿ ನಗುವರಳಿಸಿದೆ.

– ದತ್ತಾತ್ರಯ ಭಟ್ಟ, ಕಣ್ಣಿಪಾಲ