ಸಚಿವ ಸಂಪುಟ ಸಭೆಗೆ ಕ್ಷಣಗಣನೆ

ಸಂ.ಕ.ಸಮಾಚಾರ ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಶ್ರೀಮಲೆ ಮಹದೇಶ್ವರ ಬೆಟ್ಟದಲ್ಲಿ ರಾಜ್ಯ ಸರ್ಕಾರದ 2025ನೇ ಸಾಲಿನ 9ನೇ ಸಚಿವ ಸಂಪುಟ ಸಭೆ ನಡೆಸಲು ಕ್ಷಣಗಣನೆ ಶುರುವಾಗಿದೆ.
ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದೆ.
ಮಹದೇಶ್ವರ ಬೆಟ್ಟದ ಜೇನುಮಲೆ ಭವನದ ಸಮೀಪದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ಜರ್ಮನ್ ಟೆಂಟ್‌ನಲ್ಲಿ ಮಧ್ಯಾಹ್ನ ೧೨ ಗಂಟೆಗೆ ಸಚಿವ ಸಂಪುಟ ಸಭೆ ನಿಗಧಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಸಚಿವರು ಮಾತ್ರ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸಭೆಯ ಬಳಿಕ ಹಿರಿಯ ಸಚಿವರು ಸುದ್ದಿಗೋಷ್ಠಿಯನ್ನು ನಡೆಸಿ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳನ್ನು ತಿಳಿಸಲಿದ್ದಾರೆ.
ಈಗಾಗಲೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಸಚಿವರು ಬುಧವಾರ ರಾತ್ರಿಯೇ ಬೆಟ್ಟಕ್ಕೆ ಆಗಮಿಸಿ ವಾಸ್ತವ್ಯ ಹೂಡಿದ್ದಾರೆ. ಮತ್ತೆ ಕೆಲವು ಸಚಿವರು ಗುರುವಾರ ಬೆಳಗ್ಗೆ ಬೆಟ್ಟಕ್ಕೆ ಆಗಮಿಸಿದ್ದು, ಮುಖ್ಯಮಂತ್ರಿಗಳು ಬೆಟ್ಟದತ್ತ ಬರುತ್ತಿದ್ದಾರೆ.

ಬಿಗಿ ಭದ್ರತೆ: ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಮಾದಪ್ಪನ ಬೆಟ್ಟದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಡಿಐಜಿ ನೇತೃತ್ವದಲ್ಲಿ ಇಬ್ಬರು ಎಸ್‌ಪಿ, ನಾಲ್ವರು ಎಎಸ್‌ಪಿ, 15 ಮಂದಿ ಡಿವೈಎಸ್‌ಪಿ ಸೇರಿದಂತೆ 1500ಕ್ಕೂ ಹೆಚ್ಚು ಮಂದಿ ಪೊಲೀಸರುನ್ನು ಬಿಗಿ ಭದ್ರತೆಯಲ್ಲಿ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ. ಕವಿತಾ ತಿಳಿಸಿದರು.