ಉಡುಪಿ: ಬ್ರಹ್ಮಾವರ ಸಮೀಪದ ಕುಂಜಾಲು ರಸ್ತೆಯಲ್ಲಿ ದನದ ರುಂಡ ಮತ್ತು ಅವಶೇಷಗಳ ಪತ್ತೆ ಪ್ರಕರಣ ಸಂಬಂಧ 6 ಮಂದಿಯನ್ನು ಬ್ರಹ್ಮಾವರ ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಆಹಾರವಾಗಿ ಬಳಕೆ ಮಾಡುವ ಉದ್ದೇಶದಿಂದ ದನದ ಮಾಂಸ ಸಾಗಿಸುತ್ತಿರುವಾಗ ದನದ ರುಂಡ ಮತ್ತು ಇತರ ಅವಶೇಷಗಳು ಮಾರ್ಗ ಮಧ್ಯೆ ಬಿದ್ದಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಟಿಯಲ್ಲಿ ಪ್ರಕರಣದ ವಿವರ ನೀಡಿದ ಅವರು, ಜೂ.28ರಂದು ರಾತ್ರಿ ಸುಮಾರು 11.30 ಗಂಟೆಗೆ ಕುಂಜಾಲು ರಿಕ್ಷಾ ನಿಲ್ದಾಣದ ಎದುರು ರಸ್ತೆಯ ಮಧ್ಯದಲ್ಲಿ ದನದ ರುಂಡ ಮತ್ತು ಇತರ ಅವಶೇಷಗಳು ಪತ್ತೆಯಾಗಿತ್ತು. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಪತ್ತೆಗಾಗಿ ಬ್ರಹ್ಮಾವರ ಪೊಲೀಸ್ ವೃತ್ತನಿರೀಕ್ಷಕರ ನೇತೃತ್ವದಲ್ಲಿ 4 ತಂಡಗಳನ್ನು ರಚಿಸಿ, ವಿವಿಧ ಅಯಾಮಗಳಲ್ಲಿ ತನಿಖೆ ನಡೆಸಲಾಯಿತು.
ಸಿಸಿ ಟಿವಿ ಹಾಗೂ ವಾಹನಗಳ ಚಲನೆಯ ಆಧಾರದ ಮೇಲೆ ತನಿಖೆ ನಡೆಸಿ, ಒಟ್ಟು 6 ಮಂದಿಯನ್ನು ಗುರುತಿಸಲಾಗಿದೆ. ರಾಮ ಕುಂಜಾಲು (49), ಪ್ರಸಾದ್ ಕುಂಜಾಲು (21), ನವೀನ್ ಮಟಪಾಡಿ (35) ಕೇಶವ ನಾಯ್ಕ್ ಕುಂಜಾಲು (50), ಸಂದೇಶ ಕುಂಜಾಲು (35) ಮತ್ತು ರಾಜೇಶ್ ಕುಂಜಾಲು (28) ಅವರನ್ನು ದಸ್ತಗಿರಿ ಮಾಡಲಾಗಿದ್ದು, 7ನೇ ಆರೋಪಿ ತಲೆಮರೆಸಿಕೊಂಡಿದ್ದಾನೆ.
ವ್ಯಕ್ತಿಯೋರ್ವರು ಉಚಿತವಾಗಿ ನೀಡಿದ ದನವನ್ನು ಆಹಾರವಾಗಿ ಬಳಸುವ ಉದ್ದೇಶದಿಂದ ಸಾಗಿಸುತ್ತಿರುವಾಗ ದನದ ಕೆಲವು ಅವಶೇಷಗಳು ರಸ್ತೆಯಲ್ಲಿ ಬಿದ್ದು ಹೋಗಿದ್ದು, ದನದ ಮಾಂಸ ಮಾರಾಟ ಯಾ ಅನ್ಯ ಉದ್ದೇಶ ಇರಲಿಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದರು.
ಪ್ರಕರಣದಲ್ಲಿ ಬಳಸಲಾದ ಹೋಂಡ ಆ್ಯಕ್ಟಿವಾ ದ್ವಿಚಕ್ರ ವಾಹನ ಹಾಗೂ ಸ್ವಿಫ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದರು.