ತಾಳಿ ಕಟ್ಟಿಸಿಕೊಂಡ ತಕ್ಷಣ ಪರೀಕ್ಷೆಗೆ ಹಾಜರಾದ ವಧು

ಚಾಮರಾಜನಗರ: ಮದುವೆ, ಜೀವನದ ಪ್ರಮುಖ ಕ್ಷಣ. ಅದೇ ರೀತಿ ಪರೀಕ್ಷೆಯೂ ಕೂಡ ಜೀವನದ ಪ್ರಮುಖ ಘಟ್ಟ. ಇವೆರಡನ್ನೂ ಸಂಭಾಳಿಸಿದ ವಧುವೊಬ್ಬರು ತಾಳಿ ಕಟ್ಟಿದ ತಕ್ಷಣ ಪರೀಕ್ಷೆಗೆ ಹಾಜರಾದ ವಿಶೇಷ ಘಟನೆ ಕೊಳ್ಳೇಗಾಲದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಕೊಳ್ಳೇಗಾಲದ ವಾಸವಿ ಕಾಲೇಜಿನ ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿನಿಯಾಗಿರುವ ಆರ್. ಸಂಗೀತಾ ಅವರು ನಂಜನಗೂಡು ತಾಲೂಕಿನ ಸಿಂಧುವಳ್ಳಿ ಗ್ರಾಮದ ಯುವಕನ ಜೊತೆ ಇಂದು (ಮೇ ೨೨) ಸಪ್ತಪದಿ ತುಳಿದರು. ಕೊಳ್ಳೇಗಾಲ ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ವಿವಾಹ ಮಹೋತ್ಸವ ಜರುಗಿದ್ದು, ತಾಳಿ ಕಟ್ಟಿಸಿಕೊಳ್ಳುತ್ತಿದ್ದಂತೆ ಸಂಗೀತಾ ವಧುವಿನ ಧಿರಿಸಿನಲ್ಲೇ ಪರೀಕ್ಷಾ ಕೇಂದ್ರಕ್ಕೆ ತೆರಳಿ, ಪರೀಕ್ಷೆ ಬರೆದು ನಂತರ ಕಲ್ಯಾಣ ಮಂಟಪಕ್ಕೆ ತೆರಳಿ, ಮದುವೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ.