ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ‘ಕಾಂತಾರ ಚಾಪ್ಟರ್-1’ ತಂಡ ಪ್ರಮುಖ ಅಪ್ಡೇಟ್ ನೀಡಿದೆ. ‘ಕನಕವತಿ’ ಪಾತ್ರವನ್ನು ತಂಡ ಪರಿಚಯ ಮಾಡಿಸಿದೆ. ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂಲಕ ಕಾಂತಾರ ಚಾಪ್ಟರ್-1 ಚಿತ್ರದ ನಾಯಕಿ ಯಾರು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ನಟಿ ರುಕ್ಮಿಣಿ ವಸಂತ ‘ಕನಕವತಿ’ಯ ಪರಿಚಯ ನಿಮ್ಮ ಮುಂದೆ ಎಂದು ಚಿತ್ರದ ಪೋಸ್ಟರ್ ಶೇರ್ ಮಾಡಿದ್ದಾರೆ. ಅಭಿಮಾನಿಗಳು ನೆಚ್ಚಿನ ನಾಯಕಿಯನ್ನು ನೋಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ‘ಕಾಂತಾರ’ ಚಿತ್ರದಲ್ಲಿ ಸಪ್ತಮಿ ಗೌಡ ನಾಯಕಿಯಾಗಿದ್ದರು. ಆದರೆ ಕಾಂತಾರ ಚಾಪ್ಟರ್-1 ಚಿತ್ರಕ್ಕೆ ನಟಿ ರುಕ್ಮಿಣಿ ವಸಂತ ನಾಯಕಿಯಾಗಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ರುಕ್ಮಿಣಿ ವಸಂತ ಶೇರ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 11ಕೆ ಲೈಕ್, 1.5ಕೆ ರಿಟ್ವೀಟ್, 165 ಕಮೆಂಟ್ಗಳು ಪೋಸ್ಟ್ಗೆ ಬಂದಿವೆ. ಕಾಂತಾರ ಚಾಪ್ಟರ್-1 ಚಿತ್ರ ಬಿಡುಗಡೆಯ ಪ್ರಚಾರಕ್ಕೆ ಈಗಾಗಲೇ ಚಿತ್ರತಂಡ ಚಾಲನೆ ನೀಡಿದೆ. ಅದರ ಭಾಗವಾಗಿಯೇ ಶುಕ್ರವಾರ ನಾಯಕಿ ಪರಿಚಯದ ಪೋಸ್ಟರ್ ಬಿಡುಗಡೆಯಾಗಿದೆ.
ಕಾಂತಾರ ಚಾಪ್ಟರ್-1 ಸಿನಿಮಾದ ಬಿಡುಗಡೆ ದಿನಾಂಕ ಈಗಾಗಲೇ ಘೋಷಣೆಯಾಗಿದೆ. ಅಕ್ಟೋಬರ್ 2, 2025 ರಂದು ಚಿತ್ರ ಬಿಡುಗಡೆಯಾಗಲಿದೆ. ಇಂದಿನ ಪೋಸ್ಟ್ನಲ್ಲಿ ಈ ದಿನಾಂಕವನ್ನು ಸಹ ಮತ್ತೊಮ್ಮೆ ಹಂಚಿಕೆ ಮಾಡಿಕೊಳ್ಳಲಾಗಿದೆ. ‘ಕನಕವತಿ’ಯಾಗಿ ಕಾಣಿಸಿಕೊಂಡಿರುವ ರುಕ್ಮಿಣಿ ವಸಂತ ಯುವರಾಣಿಯಾಗಿ ಕಂಗೊಳಿಸಿದ್ದಾರೆ.
ಪೋಸ್ಟರ್ ಹಿಂಭಾಗದಲ್ಲಿ ರಾಜರ ಆಸ್ಥಾನದ ಮಾದರಿ ಕಾಣಿಸುತ್ತದೆ. ಇದು ಕದಂಬರ ಕಾಲದ ಕಥೆ ಆಗಿದ್ದು, ನಟಿ ರುಕ್ಮಿಣಿ ವಸಂತ ರಾಣಿ ಅಥವಾ ಯುವ ರಾಣಿ ಇರಬಹುದು ಎಂದು ಅಂದಾಜಿಸಲಾಗಿದೆ. ಕಾಂತಾರ ಚಾಪ್ಟರ್-1 ಚಿತ್ರದಲ್ಲಿ ನಟಿಸುವ ಮೂಲಕ ನಟಿ ರುಕ್ಮಿಣಿ ವಸಂತ ರಿಷಬ್ ಶೆಟ್ಟಿಗೆ ಜೋಡಿಯಾಗಿದ್ದಾರೆ. ಈ ಮೂಲಕ ‘ಕಾಂತಾರ’ದ ನಾಯಕಿ ಈ ಚಿತ್ರದಲ್ಲಿ ಬದಲಾಗಿದ್ದಾರೆ.
2025ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಕಾಂತಾರ ಚಾಪ್ಟರ್-1 ಸಹ ಒಂದು. ಹೊಂಬಾಳೆ ಫಿಲ್ಮ್ಸ್ ಸಹ ಕಾಂತಾರ ಚಾಪ್ಟರ್-1 ಚಿತ್ರದ ಕುರಿತು ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಅಪ್ಡೇಟ್ ನೀಡಿದೆ. ‘ಕನಕವತಿ’ ಪಾತ್ರ ಹೇಗಿರಬಹುದು? ಎಂದು ಅಭಿಮಾನಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ.
‘ಕಾಂತಾರ’ ಚಿತ್ರ ವಿಶ್ವದಾದ್ಯಂತ ಸಂಚಲನ ಮೂಡಿಸಿತ್ತು. ಆದ್ದರಿಂದ ಕಾಂತಾರ ಚಾಪ್ಟರ್-1 ಬಗ್ಗೆ ಭಾರೀ ನಿರೀಕ್ಷೆ ಇದೆ. ಅದರಲ್ಲೂ ರಿಷಬ್ ಶೆಟ್ಟಿ ಯಾವ ಮಾದರಿ ಕಥೆಯನ್ನು ಹೇಳಿದ್ದಾರೆ ಎಂದು ಜನರು ಕುತೂಹಲದಿಂದ ಕಾಯುತ್ತಿದ್ದಾರೆ. ಕಾಂತಾರ ಚಾಪ್ಟರ್-1 ಚಿತ್ರಕ್ಕಾಗಿಯೇ ಒಂದು ವಿಶೇಷ ಸೆಟ್ ನಿರ್ಮಾಣ ಮಾಡಿ ಚಿತ್ರೀಕರಣ ಮಾಡಲಾಗಿದೆ. ಕಾಂತಾರ ಚಾಪ್ಟರ್-1 ಹೆಸರು ಘೋಷಣೆ ದಿನದಿಂದಲೇ ಚಿತ್ರದ ಬಗ್ಗೆ ಅಪಾರವಾದ ನಿರೀಕ್ಷೆ ಇದೆ.
ಕಾಂತಾರ ಚಾಪ್ಟರ್-1 ತಂಡದಲ್ಲಿ ಛಾಯಾಗ್ರಾಹಕ ಅರವಿಂದ್ ಕಶ್ಯಪ್, ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಇದ್ದಾರೆ. ವರಮಹಾಲಕ್ಷ್ಮಿ ಹಬ್ಬದ ದಿನ ಚಿತ್ರತಂಡದ ಹೊಸ ಅಪ್ಡೇಟ್ ಸಿಗಬಹುದು ಎಂದು ನಿರೀಕ್ಷೆ ಮಾಡುತ್ತಿದ್ದ ಅಭಿಮಾನಿಗಳಿಗೆ ನಟಿ ರುಕ್ಮಿಣಿ ವಸಂತ ‘ಕನಕವತಿ’ಯಾಗಿ ಕಣ್ಣ ಮುಂದೆ ಬಂದಿದ್ದಾರೆ.