ರಾಜ್ಯದ 10 ಮಹಾನಗರ ಪಾಲಿಕೆಗಳ 25 ಸಾವಿರಕ್ಕೂ ಹೆಚ್ಚು ನೌಕರರು ಸಾಮೂಹಿಕ ರಜೆ ಪಡೆದು ತಮ್ಮ ಬೇಡಿಕೆಗಳಿಗೆ ಒತ್ತಾಯಿಸುತ್ತಿರುವುದು ನ್ಯಾಯಯುತ. ಸರ್ಕಾರ ಕೂಡಲೇ ಇದಕ್ಕೆ ಸ್ಪಂದಿಸುವುದು ಅಗತ್ಯ. ಬಿಬಿಎಂಪಿ ರೀತಿಯಲ್ಲೇ 10 ಪ್ರಮುಖ ನಗರಗಳಲ್ಲಿ ಮಹಾನಗರ ಪಾಲಿಕೆಗಳು ಅಗತ್ಯ ಸೇವೆಗಳನ್ನು ಕೈಗೊಳ್ಳುತ್ತಿವೆ. ಇಲ್ಲಿಯ ನೌಕರರ ಸೇವೆಯಲ್ಲಿ ವ್ಯತ್ಯಾಸವೇನೂ ಕಂಡು ಬರುತ್ತಿಲ್ಲ. ಸರ್ಕಾರಿ ನೌಕರರಿಗೆ ನೀಡುವ ಸವಲತ್ತುಗಳನ್ನು ವಿಸ್ತರಿಸುವುದು ಸರ್ಕಾರದ ಕರ್ತವ್ಯ. ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದಂತೆ ಸಂಬಳ ಸಾರಿಗೆ ನೀಡಲಾಗಿದೆ. ಮಹಾನಗರ ಪಾಲಿಕೆ ನೌಕರರಿಗೆ ಶೇ. 20ರಷ್ಟು ಕಡಿತಗೊಳಿಸಿ ನೀಡಲಾಗಿದೆ. ಇದಕ್ಕೆ ಯಾವುದೇ ಸಕಾರಣವಿಲ್ಲ. ಮಹಾನಗರ ಪಾಲಿಕೆ ನೌಕರರ ಸೇವಾ ನಿಯಮಗಳಿಗೆ ತಿದ್ದುಪಡಿ ತರಲು ಕರಡು ಸಿದ್ಧಪಡಿಸಲಾಗಿದೆ. ಅದನ್ನು ಪ್ರಕಟಿಸುವ ಕೆಲಸ ನಡೆದಿಲ್ಲ. ಸೇವಾ ನಿಯಮ ರಚನೆಯಾಗದೆ ಪಾಲಿಕೆ ನೌಕರರಿಗೆ ಮುಂಬಡ್ತಿ, ಸಂಬಳ ಮತ್ತು ಭತ್ಯೆ ಸೇರಿದಂತೆ ಯಾವುದೇ ಆರ್ಥಿಕ ಲಾಭ ಸಿಗುತ್ತಿಲ್ಲ. ಕೆಲವರು ಕಳೆದ 10 ವರ್ಷಗಳಿಂದ ಒಂದೇ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ನೌಕರರಿಗೆ ಕೆಜಿಐಡಿ, ಜಿಪಿಎಫ್, ಆರೋಗ್ಯ ಸಂಜೀವಿನಿ ಯೋಜನೆಗಳು ಅನ್ವಯವಾಗುತ್ತದೆ. ಇದೇ ಮಹಾನಗರ ಪಾಲಿಕೆಗೆ ಎರವಲು ಸೇವೆ ಎಂದು ಬರುವ ಸರ್ಕಾರಿ ನೌಕರರು ಹೆಚ್ಚಿನ ಸವಲತ್ತು ಲಭಿಸುತ್ತದೆ. ಆದರೆ ಮಹಾನಗರ ಪಾಲಿಕೆ ನೌಕರರಿಗೆ ಲಭ್ಯವಿಲ್ಲ. ಬೆಂಗಳೂರು ನಗರದಲ್ಲಿ ಕೆಲಸ ಮಾಡುವ ಎಲ್ಲ ಸರ್ಕಾರಿ ನೌಕರರಿಗೆ ಹೆಚ್ಚಿನ ಸವಲತ್ತು ಲಭಿಸುತ್ತದೆ. ಅದರಲ್ಲೂ ವಿಧಾನಸೌಧದಲ್ಲಿ ಕೆಲಸ ಮಾಡುವವರು ಸುಖ ಪುರುಷರು. ಅವರಿಗೆ ಸಂಬಳ ಮತ್ತು ಇತರೇ ಭತ್ಯೆಗಳು ಸಕಾಲಕ್ಕೆ ಸಿಗುತ್ತದೆ. ವರ್ಗಾವಣೆ ಎಂದರೆ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಒಂದು ಕೋಣೆಯಿಂದ ಮತ್ತೊಂದು ಕೋಣೆಗೆ ಮಾತ್ರ. ಅಧಿಕಾರದ ಕುರ್ಚಿಗೆ ಸಮೀಪ ಇರುವುದರಿಂದ ಯಾವುದೇ ಸವಲತ್ತಿಗೆ ಚ್ಯುತಿ ಬರುವುದಿಲ್ಲ. ಸಮಾಜವಾದದ ಪ್ರಕಾರ ಕಟ್ಟಕಡೆಯ ಮನುಷ್ಯನಿಗೆ ಮೊತ್ತ ಮೊದಲ ಅವಕಾಶ ಸಿಗಬೇಕು. ಸರ್ಕಾರಿ ಸೇವೆಯಲ್ಲಿ ಎಲ್ಲವೂ ತದ್ವಿರುದ್ಧ. ಅಧಿಕಾರದ ಸಮೀಪ ಇದ್ದಲ್ಲಿ ಮಾತ್ರ ಎಲ್ಲ ಲಭ್ಯ.
ಈ ತಾರತಮ್ಯ ಹೋಗಲಾಡಿಸಿ ಎಂದು ಮಹಾನಗರ ಪಾಲಿಕೆ ನೌಕರರು ಒತ್ತಾಯಿಸುತ್ತಿರುವುದರಲ್ಲಿ ಅರ್ಥವಿದೆ. ಸರ್ಕಾರ ಹಿಂದಿನಿಂದಲೂ ತನ್ನದೇ ವ್ಯವಸ್ಥೆಯಲ್ಲಿ ಕೆಲವು ತಾರತಮ್ಯವನ್ನು ಮುಂದುವರಿಸಿಕೊಂಡು ಬಂದಿದೆ. ಇದಕ್ಕೆ ಹಣಕಾಸು ಸಮಸ್ಯೆಗಳು ಕಾರಣವಿರಬಹುದು. ಆದರೆ ಒಂದೇ ಕೆಲಸಕ್ಕೆ ಎರಡು ವೇತನ ಇರುವುದು ಸರಿಯಲ್ಲ. ಮೊದಲಿನಿಂದಲೂ ನಮ್ಮಲ್ಲಿ ಪಂಚಾಯ್ತಿ ವ್ಯವಸ್ಥೆ ಮುಂದುವರಿದಿದೆ. ಸ್ಥಳೀಯ ಸಂಸ್ಥೆಗಳು ಹೆಚ್ಚು ಮುಕ್ತವಾಗಿ ಕೆಲಸ ಮಾಡಬೇಕೆಂಬುದು ಇವುಗಳ ಮೂಲ ಉದ್ದೇಶ. ಗಾಂಧೀಜಿಯವರ ಸ್ವರಾಜ್ಯ ಕಲ್ಪನೆಯ ತಳಹದಿಯ ಮೇಲೆ ಸ್ಥಳೀಯ ಸಂಸ್ಥೆಗಳು ತಲೆ ಎತ್ತಿದವು. ಇದರಿಂದ ಅಧಿಕಾರ ವಿಕೇಂದ್ರೀಕರಣ ಸಾಧ್ಯವಾಯಿತು. ಸ್ವಾತಂತ್ರ್ಯ ಬಂದ ಮೇಲೆ ಎಲ್ಲವೂ ತಲೆಕೆಳಗಾಯಿತು. ಅಧಿಕಾರ ದೆಹಲಿ ಮತ್ತು ಬೆಂಗಳೂರಿನಲ್ಲಿ ಕೇಂದ್ರೀಕೃತಗೊಂಡಿತು. ನಜೀರ್ಸಾಬ್ ಹೊಸ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದರು. ಆದರೂ ಶಾಸಕರು ಮತ್ತು ಸಂಸದರು ತಮ್ಮ ಅಧಿಕಾರ ಮೊಟಕುಗೊಳ್ಳುವುದನ್ನು ಸಹಿಸಲಿಲ್ಲ. ಅದರಿಂದ ಮಹಾನಗರ ಪಾಲಿಕೆಗಳು, ಜಿಲ್ಲಾ ಪಂಚಾಯತ್ಗಳು ಕೇವಲ ಹೆಸರಿಗೆ ಉಳಿದುಕೊಂಡಿವೆ. ರಾಜೀವ್ಗಾಂಧಿ ಪ್ರಧಾನಿಯಾಗಿದ್ದಾಗ ಸಂವಿಧಾನಕ್ಕೆ ತಿದ್ದುಪಡಿ ತಂದು ಪ್ರತಿ ವರ್ಷ 5 ವರ್ಷಕ್ಕೊಮ್ಮೆ ಚುನಾವಣೆ ಕಡ್ಡಾಯ ಎಂದು ನಿಯಮ ಮಾಡಲಾಯಿತು. ಆದರೆ ಇದರ ಪಾಲನೆಯಾಗುತ್ತಿಲ್ಲ. ಮಹಾನಗರ ಪಾಲಿಕೆಗಳಿಗೆ ಆಡಳಿತಾಧಿಕಾರಿ ನೇಮಿಸಿ ಆಡಳಿತ ನಡೆಸಲು ಸರ್ಕಾರ ಬಯಸುತ್ತದೆಯೇ ಹೊರತು ಚುನಾಯಿತ ಸಮಿತಿ ಇರುವುದನ್ನು ಬಯಸುವುದಿಲ್ಲ. ಹೀಗಾಗಿ ಎಲ್ಲ ಮಹಾನಗರ ಪಾಲಿಕೆಗಳು ಭ್ರಷ್ಟಾಚಾರದ ಕೂಪಗಳಾಗಿವೆ. ಇದರಿಂದ ಮಹಾನಗರ ಪಾಲಿಕೆ ನೌಕರರು ಸರ್ಕಾರದ ಅವಕೃಪೆಗೆ ಒಳಗಾಗಿರುವುದು ಸಹಜ. ಇದನ್ನು ಸರಿಪಡಿಸಬೇಕು ಎಂದರೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರು ಅಧಿಕಾರಕ್ಕೆ ಬರಬೇಕು. ಪ್ರತಿ ಮಹಾನಗರ ಪಾಲಿಕೆ ತನ್ನದೇ ಆದ ಬೈಲಾ ಹೊಂದಿವೆ. ಅದರಂತೆ ಕೆಲಸಗಳು ನಡೆಯಬೇಕು. ಆದರೆ ಸ್ಥಳೀಯವಾಗಿ ಜನ ಪ್ರತಿನಿಧಿಯೇ ಇಲ್ಲ ಎಂದಾಗ ಆಡಳಿತ ನೋಡುವವರು ಯಾರು? ಪಾಲಿಕೆ ವ್ಯಾಪ್ತಿಯಲ್ಲಿರುವ ಜನರು ಕೂಡ ಈಗ ತಮ್ಮ ಕುಂದುಕೊರತೆಗಳನ್ನು ಯಾರ ಬಳಿ ಹೇಳಬೇಕೆಂದು ಪರದಾಡುತ್ತಿದ್ದಾರೆ. ಮಹಾನಗರ ಪಾಲಿಕೆ ನೌಕರರ ಮುಷ್ಕರದ ಮೂಲಕ ಎಲ್ಲ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದಾರೆ. ಪ್ರಜಾಪ್ರಭುತ್ವದ ಮೂಲ ಬೇರು ಸ್ಥಳೀಯ ಸಂಸ್ಥೆಗಳು. ಅವುಗಳೇ ದುರ್ಬಲಗೊಂಡರೆ ವಿಧಾನ ಮಂಡಲ ಮತ್ತು ಸಂಸತ್ತು ಉತ್ತಮವಾಗಿ ನಿರ್ವಹಿಸಲು ಹೇಗೆ ಸಾಧ್ಯ? ಸರ್ಕಾರ ಎಂದರೆ ಆಡಳಿತ ಮತ್ತು ಪ್ರತಿಪಕ್ಷ ಎರಡೂ ಪ್ರಬಲವಾಗಿರಬೇಕು. ಇದಕ್ಕೆ ಚುನಾವಣೆ ಸಕಾಲಕ್ಕೆ ನಡೆಯಬೇಕು. ಸ್ಥಳೀಯ ಸಂಸ್ಥೆ ಸೊರಗಲು ಇದೇ ಕಾರಣ. ಹಳ್ಳಿಯ ಚರಂಡಿ ದುರಸ್ತಿ ಮಾಡಲು ವಿಧಾನಸೌಧದಿಂದ ಆದೇಶ ಹೊರಡುವಂತೆ ಆಗಬಾರದು. ರಾಜೀವಗಾಂಧಿ ಹೇಳಿದಂತೆ ಕೇಂದ್ರ ಸರ್ಕಾರದಿಂದ ೧೦೦ ರೂ. ಬಿಡುಗಡೆಯಾದರೆ ೨೦ ರೂ. ಮಾತ್ರ ಹಳ್ಳಿ ತಲುಪುತ್ತದೆ. ಸ್ಥಳೀಯ ಸಂಸ್ಥೆಗಳು ಈ ಭ್ರಷ್ಟ ವ್ಯವಸ್ಥೆಗೆ ಬ್ರೇಕ್ ಹಾಕುವ ಯಂತ್ರಗಳಾಗಬೇಕು. ಇದಕ್ಕೆ ಸ್ಥಳೀಯ ಸಂಸ್ಥೆ ನೌಕರರು ಸಬಲರಾಗಿರಬೇಕು.