ದೇವರು ಸರ್ವೋತ್ತಮ ಎಂಬ `ಅರಿವೇ’ ಗುರು

ಹಿಂದೂ ಸನಾತನ ಸಂಸ್ಕೃತಿಯಲ್ಲಿ “ಗುರು” ದೇವರ ಸಮಾನ ಎಂದೇ ಪರಿಗಣಿಸುತ್ತೇವೆ. ಒಂದು ಪಕ್ಷ ದೇವರು ಮುನಿಸಿಕೊಂಡರೂ ಮುನಿಸಿಕೊಳ್ಳಬಹುದು. ಆದರೆ ಗುರು ಶಿಷ್ಯರ ಮೇಲೆ ಅತೀವ ಪ್ರೀತಿ ವಾತ್ಸಲ್ಯದಿಂದ ನಮ್ಮನ್ನು ಸಲಹುತ್ತಾರೆ. ಅವರ ಮುನಿಸು ನಮ್ಮನ್ನು ತಿದ್ದುವ ದಾರಿಯಲ್ಲಿ ಇರುತ್ತದೆ ಮತ್ತು ಆ ಮುನಿಸು ಕ್ಷಣಿಕವಾಗಿರುತ್ತದೆ. ನಾವು ಮಾಡುವ ತಪ್ಪು ಒಪ್ಪುಗಳನ್ನು ಸರಿಪಡಿಸಿ, ಸಾಧನೆಯ ಹಾದಿಯಲ್ಲಿ ಇರುವಂತೆ ನೋಡಿಕೊಳ್ಳುವವರೇ ಗುರುಗಳು. ನಮ್ಮ ಸಾಧನೆಗಳಿಗೆ ಹೆಚ್ಚು ಸಂತೋಷ ಪಡುವವರು, ತುಂಬು ಹೃದಯದಿಂದ ಆಶೀರ್ವದಿಸುವವರು ಯಾರಾದರೂ ಇದ್ದರೆ ಅವರು ಗುರುಗಳು ಮಾತ್ರ. ಗುರು ಅಂದ್ರೆ ಯಾರೋ ನಮಗೆ ಪಾಠ ಹೇಳುವವರು ಮಾತ್ರ ಅಲ್ಲ. ಯಾರು ನಮಗೆ ಬದುಕಿನಲ್ಲಿ ಸರಿ ದಾರಿ ತೋರಿಸುವವರು. ನಾವು ತಪ್ಪು ಮಾಡಿದಾಗ ತಿದ್ದಿ ನಿದರ್ಶನ ಕೊಡುವವರು, ನಾವು ಕೇಳಿದ ಪ್ರಶ್ನೆಗೆ ಸ್ಪಷ್ಟ ನಿಖರ, ಉತ್ತರ ನೀಡುವವರು, ಯಾರು ನಮಗೆ ಜ್ಞಾನಧಾರೆಯನ್ನು ಎರೆಯುವವರೋ, ಯಾರು ನಮ್ಮ ನಿತ್ಯದ ಅಭೀಷ್ಟೆಗಳನ್ನು ಯಾವುದೇ ಫಲಾಪೇಕ್ಷೆಯಿಲ್ಲದೆ ಈಡೇರಿಸುವವರೋ `ಅವರೇ ಗುರು’ ಸಂಸ್ಕೃತದಲ್ಲಿ ಗುರು ಎಂಬ ಪದವನ್ನು ಈ ರೀತಿ ವ್ಯಾಖ್ಯಾನಿಸಲಾಗಿದೆ: “ಗುಃ” ಅಂದರೆ ಅಂಧಕಾರ, “ರುಃ” ಅಂದರೆ ನಿವಾರಕ ಅಂದರೆ, ಗುರು ಅಂದರೆ ಅಜ್ಞಾನ ಎಂಬ ಅಂಧಕಾರವನ್ನು ದೂರಮಾಡುವವನು. ಶಿಷ್ಯನಿಗೆ ಜ್ಞಾನ, ಶಿಸ್ತು, ಮೌಲ್ಯಗಳು, ಮತ್ತು ಬದುಕಿನ ದಿಕ್ಕು ನೀಡುವವನು ಗುರು. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಜೀವನದ ನಿತ್ಯ ಸತ್ಯವನ್ನು, ಭೌತಿಕ ಜಗತ್ತಿನಲ್ಲಿ ನಮ್ಮ ಕರ್ತವ್ಯಗಳನ್ನು ಹೇಗೆ ಮಾಡಬೇಕು ಎಂದು ಉಪದೇಶಿಸಿ ಜ್ಞಾನಗುರುವಾದ. ಹಾಗಾದರೆ ಈ ಪ್ರಪಂಚಕ್ಕೆ ಗುರು ಯಾರು ಎಂದು ನೋಡಿದರೆ, ಈ ಪ್ರಪಂಚಕ್ಕೆ ತತ್ವ ಜ್ಞಾನವನ್ನು, ವೇದಗಳನ್ನು, ಉಪನಿಷತ್ ಗಳನ್ನೂ ನಮಗೆ ಧಾರೆಯೆರೆದ, ವಾಸಿಷ್ಠ ಕೃಷ್ಣನಾದ, ವ್ಯಾಸ ಮಹರ್ಷಿಗಳೇ ಈ ಪ್ರಪಂಚಕ್ಕೆ ಗುರುಗಳು.
“ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್‌ದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀಗುರವೇ ನಮಃ”
ಶ್ರೀ ಪುರಂದರದಾಸರು “ಗುರುವಿನ ಗುಲಾಮ ನಾಗುವ ತನಕ ದೊರೆಯದಣ್ಣ ಮುಕುತಿ” ಎಂದು ದೇವರನಾಮದಲ್ಲಿ ತಿಳಿಸಿ, ನಮಗೆ ಜ್ಞಾನ ಬೇಕಾದರೆ, ಗುರುವನ್ನು ಆಶ್ರಯಿಸಬೇಕು. ಗುರುವನ್ನು ಸಂತೋಷ ಪಡಿಸಿ ಗುರುವಿನಿಂದ ಎಷ್ಟು ಸಾಧ್ಯವೋ ಅಷ್ಟೂ ಜ್ಞಾನ ಸಂಪಾದನೆ ಮಾಡಬೇಕು ಎಂದು ತಿಳಿಸಿದ್ದಾರೆ. ಇಂದು ಆಶಾಡ ಪೂರ್ಣಿಮೆ, ಶ್ರೀ ವೇದವ್ಯಾಸದೇವರ ಜನ್ಮದಿನ, ಈ ದಿನವನ್ನು ನಾವು ಶ್ರದ್ಧಾಭಕ್ತಿಗಳಿಂದ ಗುರುಗಳನ್ನು ಆರಾಧಿಸುವ ದಿನ, ಗುರುಪೂರ್ಣಿಮಾ, ಆಚರಿಸುತ್ತೇವೆ. “ಗುರುಪೂರ್ಣಿಮಾ” ಎಂಬುದು ಆಧ್ಯಾತ್ಮಿಕತೆಯ, ಸಂಸ್ಕೃತಿಯ, ಜ್ಞಾನಾರ್ಜನೆಯ ಮತ್ತು ಋಣಪೂರಣೆಯ ಪವಿತ್ರ ದಿನವಾಗಿದೆ. ನಾವು ಕೊಡುವ ಯಾವುದೇ ದ್ರವ್ಯ ಗುರುಗಳಿಗೆ ಬೇಕಾಗಿಲ್ಲ. ಅದರಿಂದ ಅವರು ತೃಪ್ತಿಯನ್ನು ಹೊಂದುವುದಿಲ್ಲ. ಗುರುಗಳು ಕೊಟ್ಟ ಜ್ಞಾನಕ್ಕೆ ನಾವು ಏನನ್ನಾದರೂ ಹಿಂತಿರುಗಿ ಕೊಡುವುದಾದರೆ ಅದು ನಮ್ಮ ಆತ್ಮ ಸಮರ್ಪಣೆಯ ಕೃತಜ್ಞತಾ ಪೂರ್ವಕ ನಮಸ್ಕಾರ. ಗುರುಗಳು ಪ್ರಸನ್ನರಾಗಿ ಆಶೀರ್ವದಿಸಿದರೆ ಅದರಿಂದ ಸಿಗುವ ಫಲವೇ ಜ್ಞಾನ. ಆ ತತ್ವಜ್ಞಾನವೇ ಇಡೀ ಪ್ರಪಂಚಕ್ಕೆ ದೊರೆತ ಬೆಳಕು.