ರಾಜ್ಯ ಸರ್ಕಾರ ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ತೀರ್ಮಾನಿಸಿ ಒಂದು ಹೆಜ್ಜೆ ಇಟ್ಟಿದೆ. ಇದರಿಂದ ಜನರಲ್ಲಿ ಹೊಸ ಸರ್ಕಾರದ ಮೇಲೆ ವಿಶ್ವಾಸ ಮೂಡುವುದು ಸಹಜ. ಉಚಿತ ಸೇವೆ ಪಡೆಯುವುದಕ್ಕೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಇದು ಎಲ್ಲ ಉಚಿತ ಸೇವೆಗಳಿಗೂ ಅನ್ವಯ. ಹಿಂದೆ ನದಿಗಳು ಪವಿತ್ರ ಸ್ಥಳ ಎಂದು ಜನ ಭಾವಿಸಿ ನಾಣ್ಯಗಳನ್ನು ಎಸೆಯುತ್ತಿದ್ದರು. ಆಗ ನಾಣ್ಯಗಳನ್ನು ಎಣಿಸಿ ಹಾಕುತ್ತಿದ್ದರು. ಅದೇ ರೀತಿ ಈಗ ೨೦೦ ಯೂನಿಟ್ ಉಚಿತ ವಿದ್ಯುತ್, ಮನೆ ಒಡತಿಗೆ ೨ ಸಾವಿರ ರೂ.ಮಹಿಳೆಯರಿಗೆ ಉಚಿತ ಬಸ್ಪಾಸ್, ನಿರುದ್ಯೋಗಿಗಳಿಗೆ ಭತ್ಯೆ ನೀಡುವ ಯೋಜನೆಗೆ ಸಂಬಂಧಿಸಿದಂತೆ ತೀರ್ಮಾನ ಕೈಗೊಂಡಿರುವ ಸರ್ಕಾರ ಕೆಲವು ಷರತ್ತುಗಳನ್ನು ವಿಧಿಸಿದೆ. ಇದರಿಂದ ಉಚಿತ ಸುಲಭವಾಗಿ ಸಿಗುವುದಿಲ್ಲ ಎಂಬುದು ಸ್ಪಷ್ಟ. ಚುನಾವಣೆ ಕಾಲದಲ್ಲಿ ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳನ್ನು ಘೋಷಿಸುವುದಕ್ಕೆ ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಚುನಾವಣೆ ಆಯೋಗ ವಿರೋಧ ವ್ಯಕ್ತಪಡಿಸಿತ್ತು. ಆದರೆ ಇಂದಿನ ಪರಿಸ್ಥಿತಿಯಲ್ಲಿ ಕಡು ಬಡವರು ಬದುಕುವುದೇ ಕಷ್ಟವಾಗಿದೆ. ಅವರಿಗೆ ಸಹಾಯಹಸ್ತ ಬೇಕಿದೆ.
ಅನ್ನದ ಪ್ರಶ್ನೆ ಬಂದಾಗ ನೈತಿಕತೆ ಪ್ರಮುಖವಾಗುವುದಿಲ್ಲ. ಜನಸಾಮಾನ್ಯರು ಕೊರೊನಾ, ಬೆಲೆ ಏರಿಕೆ, ಹಣದುಬ್ಬರ ಮತ್ತು ನಿರುದ್ಯೋಗದಿಂದ ತತ್ತರಿಸಿ ಹೋಗಿದ್ದರು. ಅದರಿಂದ ಅವರು ಕಾಂಗ್ರೆಸ್ ಪಕ್ಷ ನೀಡಿದ ಭರವಸೆಗಳನ್ನು ಮನಃಪೂರ್ವಕವಾಗಿ ಸ್ವಾಗತಿಸಿದರು. ಅದು ತಪ್ಪೂ ಅಲ್ಲ. ಸರ್ಕಾರ ಈ ಉಚಿತ ಕೊಡುಗೆಗಳ ಮೂಲಕ ಜನಸಾಮಾನ್ಯರ ಮನಸ್ಸು ಗೆದ್ದಿರುವುದಂತೂ ನಿಜ. ಆದರೆ ಇದೇ ಅಂತಿಮ ಅಲ್ಲ. ಆರ್ಥಿಕ ವ್ಯವಸ್ಥೆ ಉತ್ತಮಗೊಳ್ಳಬೇಕು ಎಂದರೆ ಉಚಿತ ಕೊಡುಗೆ ಕಡಿಮೆ ಪ್ರಮಾಣಕ್ಕೆ ಇಳಿಯಬೇಕು. ಹಣದುಬ್ಬರ ಮತ್ತು ನಿರುದ್ಯೋಗ ನಿಯಂತ್ರಣಕ್ಕೆ ಬರಬೇಕು. ಆರ್ಥಿಕ ಚಟುವಟಿಕೆ ತೀವ್ರಗೊಳ್ಳಬೇಕು ಎಂದರೆ ಉಚಿತ ಕೊಡುಗೆಗಳು ಒಂದೇ ಬಾರಿ ಕೊಡುವಂಥ ಉತ್ತೇಜಕಗಳೇ ಹೊರತು, ಅದು ಕಾಯಂ ಇರಲು ಸಾಧ್ಯವಿಲ್ಲ. ಐಸಿಯುನಲ್ಲಿರುವ ರೋಗಿಗೆ ಡ್ರಿಪ್ಸ್ ಹಾಕಿ ಜೀವ ಉಳಿಸುವ ಹಾಗೆ. ಎಲ್ಲ ಆಸ್ಪತ್ರೆಗಳಲ್ಲಿ ಐಸಿಯು ಚಿಕ್ಕದಾಗಿರುತ್ತದೆ. ವೈದ್ಯರು ಆದಷ್ಟು ಬೇಗನೇ ರೋಗಿಯನ್ನು ಜನರಲ್ ವಾರ್ಡ್ಗೆ ಸ್ಥಳಾಂತರಿಸಲು ಬಯಸುತ್ತಾರೆಯೇ ಹೊರತು ಐಸಿಯುನಲ್ಲಿ ಹೆಚ್ಚು ದಿನ ಇಡುವುದಿಲ್ಲ. ರೋಗಿಯ ಆರೋಗ್ಯದ ದೃಷ್ಟಿಯಿಂದ ಅದು ಪ್ರಮುಖ. ರೋಗಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿ ಬೆಳೆಯಬೇಕು. ಅದಕ್ಕಾಗಿ ಮಾತ್ರ ಔಷಧ ನೀಡಬೇಕು. ಅದೇ ರೀತಿ ಸರ್ಕಾರ ಗ್ಯಾರಂಟಿ ಉಚಿತ ಸೇವೆಯನ್ನು ಕಡು ಬಡವರ ಪ್ರಾಣ ಉಳಿಸಲು ಮಾತ್ರ ಬಳಸಬೇಕು. ಪ್ರತಿಯೊಂದು ದುಡಿಯುವ ಕೈಗಳಿಗೆ ಉದ್ಯೋಗ ನೀಡಬೇಕು. ಅದರಿಂದ ಆರ್ಥಿಕ ಚಟುವಟಕೆ ಅಧಿಕಗೊಳ್ಳುತ್ತದೆ. ಉಚಿತ ನೆರವು ಏಕಮುಖ. ಅದರಿಂದ ಸಮಾಜದಲ್ಲಿ ಉತ್ಪಾದಕತೆ ಅಧಿಕಗೊಳ್ಳುವುದಿಲ್ಲ.
ಕೃಷಿ ಮತ್ತು ಕೈಗಾರಿಕೆ ರಂಗದಲ್ಲಿ ಆರ್ಥಿಕ ಚಟುವಟಿಕೆಗಳು ತೀವ್ರಗೊಳ್ಳಬೇಕು. ಅದಕ್ಕೆ ಈ ಉಚಿತ ಸೇವೆಗಳು ಉತ್ತೇಜನ ನೀಡುವಂತಿರಬೇಕು. ಅದೇರೀತಿ ಸೇವಾ ಕ್ಷೇತ್ರದಲ್ಲೂ ಬೆಳವಣಿಗೆ ಕಂಡು ಬರಬೇಕು. ಅರ್ಥಿಕ ತಜ್ಞರು ಉಚಿತ ಸೇವೆಗಳನ್ನು ವಿರೋಧಿಸುವುದು ಇದೇ ಕಾರಣಕ್ಕೆ. ಆದರೆ ಕಡು ಬಡವರು ಬದುಕುವುದೇ ಕಷ್ಟ ಎಂದಾಗ ಉಚಿತ ಸವಲತ್ತು ಕಲ್ಪಿಸಿಕೊಡುವುದು ಮುಖ್ಯ. ಅದನ್ನು ಈಗ ಸರ್ಕಾರ ಮಾಡುತ್ತಿದೆ. ಇದಕ್ಕೆ ಹೆಚ್ಚುವರಿ ಅನುದಾನ ಬೇಕು. ಹೆಚ್ಚುವರಿ ಹಣವನ್ನು ತೆರಿಗೆ ಹೆಚ್ಚಳದ ಮೂಲಕ ಸ್ವಲ್ಪ ಸರಿತೂಗಿಸಬಹುದು. ಉಳಿದ ಹಣವನ್ನು ಸಾಲದ ಮೂಲಕ ಭರಿಸುವುದು ಅನಿವಾರ್ಯ.
ಈ ಸಾಲ ಮುಂದಿನ ದಿನಗಳಲ್ಲಿ ಹೊರೆಯಾಗದಂತೆ ಎಚ್ಚರವಹಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಸಾಲ ಅಧಿಕಗೊಂಡಲ್ಲಿ ಪ್ರತಿ ವರ್ಷ ಬಡ್ಡಿ ಪಾವತಿಸುವುದು ಕಷ್ಟ. ರಾಜ್ಯದ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾಗಿರುವ ಸಿದ್ದರಾಮಯ್ಯ ಅವರಿಗೆ ಆರ್ಥಿಕ ಶಿಸ್ತು ಎಂದರೆ ಏನು ಎಂಬುದು ಚೆನ್ನಾಗಿ ಗೊತ್ತಿದೆ. ಅವರು ಹಿಂದಿನಿಂದಲೂ ಅದನ್ನು ಪಾಲಿಸಿಕೊಂಡು ಬಂದಿರುವುದರಿಂದ ಇಂದಿನ ಆರ್ಥಿಕ ಸ್ಥಿತಿಯನ್ನು ಎದುರಿಸಲು ಮಾರ್ಗೋಪಾಯವನ್ನು ಕಂಡು ಹಿಡಿಯುವುದು ಕಷ್ಟವಾಗುವುದಿಲ್ಲ. ಕಡು ಬಡವರಿಗೆ ಈ ಉಚಿತ ಸೇವೆಗಳು ಹೆಚ್ಚು ದಿನ ಇರುವುದಿಲ್ಲ. ನಿಮ್ಮ ಕಾಲ ಮೇಲೆ ನೀವು ನಿಲ್ಲುವುದಕ್ಕೆ ಶ್ರಮವಹಿಸಬೇಕು ಎಂಬ ಜಾಗೃತಿಯನ್ನು ಸರ್ಕಾರ ಮೂಡಿಸಬೇಕು. ಇದಕ್ಕೆ ಶಿಕ್ಷಣ ಮತ್ತು ಉದ್ಯೋಗ ಉತ್ತಮ ದಾರಿ ಎಂಬುದರಲ್ಲಿ ಸಂದೇಹವಿಲ್ಲ. ಈಗ ಉಚಿತ ಸೇವೆಗಳನ್ನು ಜಾರಿಗೆ ತರಲು ಒಟ್ಟು ೫೦ ಸಾವಿರಕ್ಕೂ ಹೆಚ್ಚು ಹಣ ಸಂಪನ್ಮೂಲ ಕಂಡುಕೊಳ್ಳುವುದು ಅಗತ್ಯ. ಈ ಹೊರೆಯನ್ನು ಇತರ ತೆರಿಗೆದಾರರ ಮೇಲೆ ಹೇರಲು ಬರುವುದಿಲ್ಲ. ನಮ್ಮ ರಾಜ್ಯದಲ್ಲಿ ವಿದ್ಯುತ್ ವಿತರಣ ಕಂಪನಿಗಳು ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿವೆ. ೨೦೦ ಯೂನಿಟ್ ಉಚಿತ ನೀಡುವುದರಿಂದ ಈ ಕಂಪನಿಗಳು ಮತ್ತಷ್ಟು ಅಪಾಯಕ್ಕೆ ಸಿಲುಕಬಹುದು. ಅದಕ್ಕೆ ಸರ್ಕಾರ ಅವಕಾಶ ನೀಡಬಾರದು.
ವಿದ್ಯುತ್ ಸೇರಿದಂತೆ ಎಲ್ಲ ಮೂಲಭೂತ ಸವಲತ್ತು ಬಳಸುವಾಗ ಎಚ್ಚರಿಕೆವಹಿಸುವುದು ಅಗತ್ಯ. ಇವುಗಳೆಲ್ಲ ಒಮ್ಮೆ ವೆಚ್ಚವಾದ ಮೇಲೆ ಮತ್ತೆ ಬರುವುದಿಲ್ಲ. ಸಮಾಜದ ಯುವ ಪೀಳಿಗೆ ಎಚ್ಚರಿಕೆವಹಿಸುವುದು ಅನಿವಾರ್ಯ. ಅವರೇ ಈ ದೇಶದ ಮುಂದಿನ ಪ್ರಜೆಗಳು. ಅವರು ಮನಸ್ಸು ಮಾಡಿದರೆ ನಾವು ನಮ್ಮ ಅರ್ಥಿಕ ದುರ್ಭರ ಪರಿಸ್ಥಿತಿಯಿಂದ ಹೊರಬಹುದು.