ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಶೇಕಡ 25ರಷ್ಟು ಸುಂಕವನ್ನು ಘೋಷಿಸಿದ್ದಾರೆ. ಈ ಬೆನ್ನಲ್ಲೇ, ಪಾಕಿಸ್ತಾನದೊಂದಿಗೆ ಅಮೆರಿಕ ಮಹತ್ವದ ಒಪ್ಪಂದ ಮಾಡಿಕೊಂಡಿದೆ.
ಪಾಕಿಸ್ತಾನದೊಂದಿಗೆ ಅಮೆರಿಕ ವ್ಯಾಪಾರ ಒಪ್ಪಂದ ಮಾಡಿಕೊಂಡಿದ್ದು, ಪಾಕಿಸ್ತಾನದ ತೈಲ ನಿಕ್ಷೇಪಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ಒಪ್ಪಂದ ಮಾಡಿಕೊಂಡಿದೆ ಎಂದು ಅಮೆರಿಕ ಹೇಳಿದೆ.
‘ಪಾಕಿಸ್ತಾನದ ಜತೆ ಒಪ್ಪಂದ ಅಂತಿಮಗೊಳಿಸಿದ್ದೇವೆ. ಪಾಕಿಸ್ತಾನಲ್ಲಿರುವ ಭಾರೀ ತೈಲ ನಿಕ್ಷೇಪಗಳನ್ನು ಅಭಿವೃದ್ಧಿಪಡಿಸಲು ಅಮೆರಿಕ ನೆರವಾಗಲಿದೆ. ಈ ಪಾಲುದಾರಿಕೆಯನ್ನು ಯಾವ ತೈಲ ಕಂಪನಿ ಮುನ್ನಡೆಸಬೇಕೆಂದು ಆಯ್ಕೆ ಮಾಡುವ ಪ್ರಕ್ರಿಯೆ ನಡೆದಿದೆ. ಯಾರಿಗೆ ಗೊತ್ತು, ಒಂದು ದಿನ ಅವರು ಭಾರತಕ್ಕೆ ತೈಲ ಮಾರುವ ದಿನ ಬರಬಹುದು’ ಎಂದು ಡೊನಾಲ್ಡ್ ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಮುಂಚೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಪ್ರಿಲ್‌ನಲ್ಲಿ ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. 26 ರಷ್ಟು ಹೆಚ್ಚುವರಿ ಸುಂಕವನ್ನು ವಿಧಿಸಿದ್ದರು. ಆದರೆ ಅದನ್ನು ಜುಲೈ 9ರವರೆಗೆ ಅಮಾನತುಗೊಳಿಸಿತ್ತು. ನಂತರ ಈ ಅಮಾನತನ್ನು ಆಗಸ್ಟ್ 1 ರವರೆಗೆ ವಿಸ್ತರಿಸಲಾಗಿತ್ತು. ಇನ್ನು ಆ ಸಮಯದಲ್ಲಿ ಶೇ. 10ರ ಮೂಲ ಸುಂಕ ಅನ್ವಯಿಸುತ್ತಿತ್ತು. ಆಗಸ್ಟ್ 1 ಕ್ಕೆ ಅನ್ವಯ ಆಗುವಂತೆ ಈಗ ಟ್ರಂಪ್ ಭಾರತದ ಮೇಲೆ ಶೇ. 25 ರಷ್ಟು ಸುಂಕ ವಿಧಿಸುವುದಾಗಿ ಬುಧವಾರ ಘೋಷಿಸಿದ್ದರು.
ಭಾರತವು ‘ತಮ್ಮ ಬಹುಪಾಲು ಮಿಲಿಟರಿ ಉಪಕರಣಗಳನ್ನು ರಷ್ಯಾದಿಂದಲೇ ಖರೀದಿಸುತ್ತದೆ. ಹೀಗೆ ಮಾಡಿದರೆ ಮುಂದೊಂದು ದಿನ ಅವರು ದಂಡವನ್ನು ಎದುರಿಸಬೇಕಾಗುತ್ತದೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಹತ್ಯೆಯನ್ನು ರಷ್ಯಾ ನಿಲ್ಲಿಸಬೇಕೆಂದು ಎಲ್ಲರೂ ಬಯಸುವ ಸಮಯದಲ್ಲಿ ಅವರು ರಷ್ಯಾದ ಅತಿದೊಡ್ಡ ಇಂಧನ ಖರೀದಿದಾರರಾಗಿದ್ದಾರೆ. ಎಲ್ಲವೂ ಒಳ್ಳೆಯದಲ್ಲ! ಆದ್ದರಿಂದ ಭಾರತವು ಆಗಸ್ಟ್ 1ರಿಂದ ಅನ್ವಯ ಆಗುವಂತೆ 25% ಸುಂಕ ಮತ್ತು ಜೊತೆಗೆ ದಂಡವನ್ನು ಹೊಂದಿರಲಿದೆ, ಈ ಮೇಲೆ ನೀಡಲಾದ ಕಾರಣಗಳಿಗಾಗಿ ದಂಡವನ್ನು ಸಹ ಪಾವತಿಸಬೇಕಾಗುತ್ತದೆ ಎಂದು ಟ್ರಂಪ್ ತಿಳಿಸಿದ್ದರು.
ರಷ್ಯಾ ಜೊತೆ ಭಾರತ ಏನು ಮಾಡಿದರೂ ನನಗೆ ಚಿಂತೆಯಿಲ್ಲ. ಅವರು ಒಟ್ಟಾಗಿ ತಮ್ಮ ಸತ್ತ ಆರ್ಥಿಕತೆಯನ್ನು ಕೆಡವಬಹುದು, ನಾವು ಭಾರತದೊಂದಿಗೆ ಬಹಳ ಕಡಿಮೆ ವ್ಯವಹಾರ ಮಾಡಿದ್ದೇವೆ. ಅವರ ಸುಂಕಗಳು ತುಂಬಾ ಹೆಚ್ಚಿವೆ, ವಿಶ್ವದಲ್ಲೇ ಅತ್ಯಧಿಕವಾಗಿವೆ. ಅದೇ ರೀತಿ, ರಷ್ಯಾ ಮತ್ತು ಯುಎಸ್ಎ ಒಟ್ಟಿಗೆ ಯಾವುದೇ ವ್ಯವಹಾರವನ್ನು ಮಾಡುವುದಿಲ್ಲ. ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಬೇಕೆಂದು ಎಲ್ಲರೂ ಬಯಸುವ ಹೊತ್ತಲ್ಲಿ, ಭಾರತ ಮತ್ತು ಚೀನಾದ ನಡೆ ಸರಿಯಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಪಾಕಿಸ್ತಾನ ಒಳಗೊಂಡ ಪ್ರಮುಖ ಘೋಷಣೆಯನ್ನು ಹೊರಡಿಸಿರುವ ಟ್ರಂಪ್, ಪಾಕಿಸ್ತಾನದಲ್ಲಿ ತೈಲ ನಿಕ್ಷೇಪಗಳನ್ನು ಅಭಿವೃದ್ಧಿಪಡಿಸಲು ವಾಷಿಂಗ್ಟನ್ ಮತ್ತು ಇಸ್ಲಾಮಾಬಾದ್ ನಡುವೆ ಮಾಡಲಾದ ಹೊಸ ಒಪ್ಪಂದ ಬಹಿರಂಗಪಡಿಸಿದ್ದಾರೆ. ʻನಾವು ಪಾಕಿಸ್ತಾನ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ, ಆ ಮೂಲಕ ಪಾಕಿಸ್ತಾನ ಮತ್ತು ಅಮೆರಿಕ ತಮ್ಮ ಬೃಹತ್ ತೈಲ ನಿಕ್ಷೇಪಗಳನ್ನು ಅಭಿವೃದ್ಧಿಪಡಿಸುವಲ್ಲಿ ಒಟ್ಟಾಗಿ ಕೆಲಸ ಮಾಡುತ್ತವೆʼ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.