ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಟ್ರಂಪ್ ಅಧಿಕಾರಕ್ಕೆ ಬಂದಾಗಿನಿಂದ, ಉಕ್ರೇನ್‌ನಲ್ಲಿ ಶಾಂತಿ ಸ್ಥಾಪನೆಗೆ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ರಷ್ಯಾ ಹಾಗೂ ಉಕ್ರೇನ್ ನಡುವೆ ಶಾಂತಿ ಸ್ಥಾಪನೆ ಹಿನ್ನೆಲೆಯಲ್ಲಿ ಅಲಾಸ್ಕಾದಲ್ಲಿ ಮುಂದಿನ ವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.
ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧವನ್ನು ಉಕ್ರೇನ್‌ನಲ್ಲಿ ಶಾಂತಿ ಸ್ಥಾಪಿಸುವ ಸಂಬಂಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಮಾಸ್ಕೋ ಮತ್ತು ಕೀವ್ ನಡುವೆ ಅಂತಿಮ ಒಪ್ಪಂದ ಏರ್ಪಡುವ ಬಗ್ಗೆ ಟ್ರಂಪ್ ಮುನ್ಸೂಚನೆ ನೀಡಿದ್ದಾರೆ. ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷನಾಗಿ ನಾನು ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಬಹುನಿರೀಕ್ಷಿತ ಸಭೆಯು ಆ.15 ರಂದು ಅಲಾಸ್ಕಾ ರಾಜ್ಯದ ಗ್ರೇಟ್ ಸ್ಟೇಟ್‌ನಲ್ಲಿ ನಡೆಯಲಿದೆ ಎಂದು ಟ್ರಂಪ್ ತಮ್ಮ ಟ್ರೂತ್ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.
‘ರಷ್ಯಾ ಮೇಲೆ ಸಾಕಷ್ಟು ಒತ್ತಡ ಹೇರಿದರೆ ಕದನ ವಿರಾಮ ಸಾಧಿಸಲು ಸಾಧ್ಯವಾಗುತ್ತದೆ’ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್‌ಸ್ಕಿ ರಾಷ್ಟ್ರವನ್ನುದ್ದೇಶಿಸಿ ಶುಕ್ರವಾರ ಸಂಜೆ ಮಾಡಿದ ಭಾಷಣದಲ್ಲಿ ತಿಳಿಸಿದ್ದಾರೆ. ಉಕ್ರೇನ್ ನಾಲ್ಕು ಪ್ರಮುಖ ಪ್ರದೇಶಗಳಾದ ಲುಗಾನ್, ಡೊನೆಟ್. ಝಪೊರಿಝಿಯಾ ಮತ್ತು ಖೆರ್ಸನ್ ಮತ್ತು 2014ರಲ್ಲಿ ಸ್ವಾಧೀನಪಡಿಸಿಕೊಂಡ ಕ್ರೈಮಿಯಾ ತಮ್ಮ ವಶದಲ್ಲಿರುವುದಾಗಿ ಪುಟಿನ್ ಹೇಳಿದ್ದಾರೆ.
ಕ್ರೈಮಿಯಾ ಹೊರತುಪಡಿಸಿ ಉಳಿದ ನಾಲ್ಕು ಪ್ರದೇಶಗಳಲ್ಲಿ ರಷ್ಯಾದ ಪಡೆಗಳು ಸಂಪೂರ್ಣ ನಿಯಂತ್ರವನ್ನು ಹೊಂದಿಲ್ಲ. ಉಕ್ರೇನಿಯನ್ ಬಿಕ್ಕಟ್ಟಿನ ದೀರ್ಘಾವಧಿಯ ಶಾಂತಿಯುತ ಇತ್ಯರ್ಥವನ್ನು ಸಾಧಿಸುವ ಸಂಬಂಧ ಚರ್ಚಿಸಲು ರಷ್ಯಾ ಅಧ್ಯಕ್ಷರು ಗಮನಹರಿಸಲಿದ್ದಾರೆಂದು ಕ್ರೆಮ್ಲಿನ್ ಸಹಾಯಕ ಯೂರಿ ಉಷಕೋವ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಟ್ರಂಪ್ ಭೇಟಿಗೂ ಮುನ್ನ ಪುಟಿನ್ ಶುಕ್ರವಾರ ಚೀನಾ ಮತ್ತು ಭಾರತದ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಟ್ರಂಪ್ ಅಧಿಕಾರ ವಹಿಸಿಕೊಂಡ ಆರಂಭದಿಂದಲೂ ಉಕ್ರೇನ್‌ನಲ್ಲಿ ಶಾಂತಿ ಸ್ಥಾಪನೆಗೆ ಪ್ರಯತ್ನಿಸುತ್ತಿದ್ದಾರೆ. ಆದರೆ ಇದುವರೆಗೂ ಯಾವುದೇ ಪ್ರಗತಿ ಸಾಧಿಸಿಲ್ಲ. ಫೆಬ್ರವರಿ 2022 ರಲ್ಲಿ ಉಕ್ರೇನ್ ಮೇಲೆ ರಷ್ಯಾ ಯುದ್ಧವನ್ನು ಪ್ರಾರಂಭಿಸಿತು. ಯುದ್ಧದಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಲಕ್ಷಾಂತರ ಜನರು ತಮ್ಮ ಮನೆಗಳನ್ನು ಬಿಟ್ಟು ಬೇರೆ ಕಡೆ ವಲಸೆ ಹೋಗಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಮೂರು ಸುತ್ತಿನ ಮಾತುಕತೆಗಳು ಫಲ ನೀಡಲು ವಿಫಲವಾಗಿವೆ. ಈ ಹಿಂದೆ ಕದನ ವಿರಾಮಕ್ಕಾಗಿ ಯುನೈಟೆಡ್ ಸ್ಟೇಟ್ಸ್, ಯುರೋಪ್ ಮತ್ತು ಕೀವ್‌ನಿಂದ ಬಂದ ಅನೇಕ ಕರೆಗಳನ್ನು ಪುಟಿನ್ ತಿರಸ್ಕರಿಸಿದ್ದಾರೆ. ಇದೀಗ ಅಲಾಸ್ಕಾದಲ್ಲಿ ಇಬ್ಬರೂ ನಾಯಕರ ಭೇಟಿಯು ಶಾಂತಿ ಸ್ಥಾಪನೆಗೆ ಮುನ್ನುಡಿಯಾಗಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಟ್ರಂಪ್-ಪುಟಿನ್ ಭೇಟಿ ಕುರಿತು ಉಕ್ರೇನ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಜೂನ್ 2021ರಲ್ಲಿ ಜಿನೀವಾದಲ್ಲಿ ಅಮೆರಿಕದ ಅಂದಿನ ಅಧ್ಯಕ್ಷ ಜೋ ಬೈಡನ್ ಹಾಗೂ ವ್ಲಾಡಿಮಿರ್ ಪುಟಿನ್ ಭೇಟಿ ಬಳಿಕ ಅಲಾಸ್ಕಾದಲ್ಲಿ ಉಭಯ ರಾಷ್ಟ್ರಗಳ ನಾಯಕರು ಮೊದಲ ಬಾರಿಗೆ ಸಮಾಗಮವಾಗಲಿದ್ದಾರೆ. ಟ್ರಂಪ್ ಮತ್ತು ಪುಟಿನ್ ಕೊನೆಯ ಬಾರಿಗೆ 2019ರಲ್ಲಿ ಟ್ರಂಪ್ ಅವರ ಮೊದಲ ಅವಧಿಯಲ್ಲಿ ಜಪಾನ್‌ನಲ್ಲಿ ನಡೆದ G20 ಶೃಂಗಸಭೆಯಲ್ಲಿ ಒಟ್ಟಿಗೆ ಸೇರಿದ್ದರು.
