KSRTC Bus Strike: Live Updates, ಮುಷ್ಕರ ವಾಪಸ್, ಎಲ್ಲಾ ನೌಕರರು ಕೆಲಸಕ್ಕೆ ಹಾಜರು

0
305

ಬೆಂಗಳೂರು: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಆಗಸ್ಟ್ 5ರ ಮಂಗಳವಾರದಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದೆ.

ಸಾರಿಗೆ ನೌಕರರ ಮುಷ್ಕರದ ಹಿನ್ನಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸರ್ಕಾರಿ ಬಸ್‌ಗಳು ರಸ್ತೆಗೆ ಇಳಿದಿಲ್ಲ. ಜನರು ಸಂಚಾರಕ್ಕೆ ಖಾಸಗಿ ಬಸ್, ಆಟೋ ಸೇರಿದಂತೆ ಖಾಸಗಿ ವಾಹನ ಅವಲಂಬಿಸಿದ್ದಾರೆ. ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳಲು ಪರದಾಡುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗಿನ ಸೋಮವಾರದ ಸಭೆ ವಿಫಲಗೊಂಡ ಬಳಿಕ ಸಮಿತಿ ಮಂಗಳವಾರ ಬೆಳಗ್ಗೆ 6 ಗಂಟೆಯಿಂದಲೇ ಮುಷ್ಕರ ಪ್ರಾರಂಭಿಸಿದೆ. ಹಲವು ಜಿಲ್ಲೆಗಳಲ್ಲಿ ಮುಷ್ಕರ ಬಿಸಿ ಜನರಿಗೆ ತಟ್ಟಿದ್ದು, ಅವರು ಪರದಾಡುತ್ತಿದ್ದಾರೆ.

ಸಾರಿಗೆ ಮುಷ್ಕರದ Live Updates ಇಲ್ಲಿದೆ….

ಸಾರಿಗೆ ಮುಷ್ಕರ ತಾತ್ಕಾಲಿಕವಾಗಿ ವಾಪಸ್: ತಕ್ಷಣ ಎಲ್ಲಾ ನೌಕರರು ಕೆಲಸಕ್ಕೆ ಹಾಜರಾಗಿ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಎಚ್‌.ವಿ.ಅನಂತ ಸುಬ್ಬರಾವ್‌ ಕರೆ ನೀಡಿದ್ದಾರೆ. ಹೈಕೋರ್ಟ್ ಖಡಕ್ ಸೂಚನೆ ಹಿನ್ನಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿಕೆ: ಮುಷ್ಕರ ನಡೆಸದಂತೆ ಇದ್ದ ತಡೆಯಾಜ್ಞೆಯನ್ನು ಎರಡು ದಿನ ವಿಸ್ತರಣೆ ಮಾಡಿರುವ ಕರ್ನಾಟಕ ಹೈಕೋರ್ಟ್ ಅರ್ಜಿ ವಿಚಾರಣೆಯನ್ನು ಆಗಸ್ಟ್ 7ಕ್ಕೆ ಮುಂದೂಡಿದಕೆ ಮಾಡಿದೆ.

ಜನರಿಗೆ ತೊಂದರೆ ಮಾಡಬೇಡಿ: ನಿಮ್ಮ ಸಮಸ್ಯೆಯನ್ನು ಸರ್ಕಾರದ ಜೊತೆ ಮಾತನಾಡಿ ಬಗೆಹರಿಸಿಕೊಳ್ಳಿ. ಜನರನ್ನು ಒತ್ತೆಯಾಳಾಗಿ ಇಟ್ಟುಕೊಳ್ಳಬೇಡಿ ಎಂದು ಹೈಕೋರ್ಟ್ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿತು.

ಮುಷ್ಕರ ಮಾಡುವುದಿಲ್ಲ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ವಕೀಲರು ಬುಧವಾರ ಮುಷ್ಕರ ನಡೆಸುವುದಿಲ್ಲ ಎಂದು ಕೋರ್ಟ್‌ಗೆ ಹೇಳಿಕೆ ನೀಡಿದರು.

ಸಾರಿಗೆ ನೌಕರರಿಗೆ ಹೈಕೋರ್ಟ್ ತರಾಟೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಕರ್ನಾಟಕ ಹೈಕೋರ್ಟ್ ಅಸಮಾಧಾನ. ಮುಷ್ಕರ ನಡೆಸಬೇಡಿ ಎಂದು ಆದೇಶವಿದ್ದರೂ ಮುಷ್ಕರ ಮಾಡುತ್ತಿರುವುದೇಕೆ?. ನ್ಯಾಯಾಂಗ ನಿಂದನೆ ದೂರು ದಾಖಲಿಸಬೇಕೆ? ಎಂದು ಪ್ರಶ್ನಿಸಿದ ಕೋರ್ಟ್.

ಹೈಕೋರ್ಟ್‌ನಲ್ಲಿ ವಿಚಾರಣೆ: ಸಾರಿಗೆ ನೌಕರರ ಮುಷ್ಕರ ಮುಂದೂಡಿಕೆ ಮಾಡಲು ಸೂಚನೆ ನೀಡಬೇಕು ಎಂದು ಸಲ್ಲಿಕೆಯಾಗಿರುವ ಪಿಐಎಲ್ ವಿಚಾರಣೆ ಕರ್ನಾಟಕ ಹೈಕೋರ್ಟ್‌ನಲ್ಲಿ ಆರಂಭವಾಗಿದೆ. ಸೋಮವಾರ ಮುಷ್ಕರ ನಡೆಸಬಾರದು ಎಂದು ಕೋರ್ಟ್ ನೌಕರರಿಗೆ ಸೂಚನೆ ನೀಡಿತ್ತು.

ಡಿಸಿ, ಎಸ್ಪಿ ಬಸ್ ನಿಲ್ದಾಣಕ್ಕೆ ಭೇಟಿ: ಮಂಡ್ಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಸಾರಿಗೆ ನೌಕರರ ಮುಷ್ಕರದ ಹಿನ್ನಲೆಯಲ್ಲಿ ಬಸ್ ನಿಲ್ದಾಣ ಹಾಗು ಡಿಪೋಗೆ ಭೇಟಿ ನೀಡಿದರು. ಸ್ಥಳದಲ್ಲಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸೂಚನೆಗಳನ್ನು ನೀಡಿದರು.

ಸಚಿವರಿಗೆ ಸಿದ್ದರಾಮಯ್ಯ ಕರೆ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ. ಸಾರಿಗೆ ನೌಕರರ ಮುಷ್ಕರ, ಮುಂದಿನ ಕ್ರಮಗಳ ಕುರಿತು ಅವರು ಸಚಿವರ ಜೊತೆ ಮಾತುಕತೆ ನಡೆಸಿದ್ದಾರೆ.

ಮುಖ್ಯಮಂತ್ರಿಗಳಿಗೆ ಮಾಹಿತಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನಡೆಸುತ್ತಿರುವ ಮುಷ್ಕರ ಮತ್ತು ಬಸ್ ಸಂಚಾರದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ಪಡೆದರು.

ಬಸ್‌ಗಳ ಮೇಲೆ ಕಲ್ಲು ತೂರಾಟ: ಗದಗದಲ್ಲಿ ಇಬ್ಬರು ಮುಸುಕು ಧಾರಿಗಳು ಹೊಸಪೇಟೆ ವಿಭಾಗದ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದಾಗಿ ಬಸ್‌ಗಳ ಮುಂಭಾಗಕ್ಕೆ ಹಾನಿಯಾಗಿದೆ.

ಪರೀಕ್ಷೆಗಳು ಮುಂದೂಡಿಕೆ: ಸಾರಿಗೆ ನೌಕರರ ಮುಷ್ಕರದ ಹಿನ್ನಲೆಯಲ್ಲಿ ತುಮಕೂರು ಮತ್ತು ಕೊಪ್ಪಳ ವಿಶ್ವವಿದ್ಯಾಲಯಗಳು ಮಂಗಳವಾರ ನಡೆಯಬೇಕಿದ್ದ ಸ್ನಾತಕ, ಸ್ನಾತಕೋತ್ತರ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿವೆ. ಬಸ್ ಇಲ್ಲದ ಕಾರಣ ವಿದ್ಯಾರ್ಥಿಗಳು ಆಗಮಿಸಲು ಸಾಧ್ಯವಾಗುತ್ತಿಲ್ಲ.

ರಾಯಚೂರು ಅಪ್‌ಡೇಟ್: ಸಾರಿಗೆ ನೌಕರರ ಅನಿರ್ಧಿಷ್ಟ ಮುಷ್ಕರದ ಹಿನ್ನೆಲೆಯಲ್ಲಿ ಮಂಗಳವಾರ ನಗರ ಕೇಂದ್ರ ಬಸ್ ನಿಲ್ದಾಣದಿಂದ ಬಸ್‌ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಪ್ರಯಾಣಿಕರು ಪರಾದಾಡುತ್ತಿದ್ದಾರೆ.

11.30ಕ್ಕೆ ಮಹತ್ವದ ಸಭೆ: ಕರ್ನಾಟಕ ಹೈಕೋರ್ಟ್ ಆದೇಶ, ಸರ್ಕಾರದ ಮಾತುಕತೆಯ ಆಹ್ವಾನದ ಕುರಿತು ಚರ್ಚಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಮಹತ್ವದ ಸಭೆ 11.30ಕ್ಕೆ ಬೆಂಗಳೂರು ನಗರದಲ್ಲಿ ನಡೆಯಲಿದೆ.

ದಾವಣಗೆರೆ: ಮುಷ್ಕರದ ಹಿನ್ನಲೆಯಲ್ಲಿ ದಾವಣಗೆರೆಯಲ್ಲಿ ಜನರು ಪರದಾಡುತ್ತಿದ್ದಾರೆ. ಕೆಎಸ್ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಜನರು ಬರುತ್ತಿದ್ದಾರೆ. ಆದರೆ ಸರ್ಕಾರಿ ಬಸ್‌ಗಳಿಲ್ಲ, ಜಿಲ್ಲಾಡಳಿತ ಶಾಲಾ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದಂತೆ ಖಾಸಗಿ ಬಸ್ ವ್ಯವಸ್ಥೆ ಮಾಡಿದೆ. ಆದರೆ ಗ್ರಾಮೀಣ ಭಾಗದ ಜನರು ನಗರಕ್ಕೆ ಬರಲು ಬಸ್‌ಗಳಿಲ್ಲ.

ಹುಬ್ಬಳ್ಳಿ-ಧಾರವಾಡ: ಹುಬ್ಬಳ್ಳಿ -ಧಾರವಾಡ ಅವಳಿ ನಗರದಲ್ಲಿ ಸರ್ಕಾರಿ ಬಸ್‌ಗಳ ಸಂಚಾರ ಸ್ಥಗಿತವಾಗಿದೆ. ಬೇಂದ್ರೆ ಖಾಸಗಿ ಬಸ್‌ಗಳಿಗೆ ಪ್ರಯಾಣಿಕರು ಮುಗಿಬಿದ್ದಿದ್ದಾರೆ. ದೂರ ಮಾರ್ಗ, ನಗರ ಸಾರಿಗೆ, ಬಿಆರ್‌ಟಿಎಸ್ ಬಸ್ ಸೇರಿದಂತೆ ಯಾವ ಬಸ್‌ಗಳ ಸಂಚಾರವೂ ಇಲ್ಲ. ಡ್ರೈವರ್ ಮತ್ತು ಕಂಡಕ್ಟರ್ ಡಿಪೋದಿಂದ ಹೊಸೂರು ಬಸ್ ನಿಲ್ದಾಣ, ಗೋಕುಲ ಬಸ್ ನಿಲ್ದಾಣಕ್ಕೆ ಬಸ್‌ಗಳನ್ನು ತಂದು ನಿಲ್ಲಿಸಿದ್ದಾರೆ. ಆದರೆ ನಿಲ್ದಾಣದಿಂದ ಮಾತ್ರ ಯಾವುದೇ ಬಸ್ ಹೊರಗೆ ಬರುತ್ತಿಲ್ಲ.

ಬೆಂಗಳೂರು: ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್‌ಗಳ ಸಂಚಾರ ಕಡಿಮೆ ಇದೆ. ಬೆಳಗ್ಗೆ 6 ಗಂಟೆಯಿಂದ 1050 ಬಸ್‌ಗಳ ಪೈಕಿ ಕೇವಲ 880 ಬಸ್‌ಗಳು ಸಂಚಾರ ನಡೆಸಿವೆ. ಜನರು ನಮ್ಮ ಮೆಟ್ರೋ, ಖಾಸಗಿ ವಾಹನದ ಮೂಲಕ ಕಚೇರಿಗೆ ಹೊರಟಿದ್ದಾರೆ.

ಕುಷ್ಟಗಿಯ ಅಪ್‌ಡೇಟ್: ಮುಷ್ಕರದ ಹಿನ್ನಲೆಯಲ್ಲಿ ಕುಷ್ಟಗಿ ಸಂಪೂರ್ಣವಾಗಿ ಬಂದಾಗಿದ್ದು ಕುಷ್ಟಗಿ ಬಸ್ ನಿಲ್ದಾಣದಿಂದ ಜನರನ್ನು ಕರೆದುಕೊಂಡು ಹೋಗಲು ಖಾಸಗಿ ವಾಹನಗಳು ಸಜ್ಜಾಗಿವೆ. ಆದರೆ ಪ್ರಯಾಣಕರನ್ನು ತಮ್ಮ ಊರಿಗೆ ತಲುಪಿಸಲು ಎರಡು ಪಟ್ಟು ಹಣವನ್ನು ತೆಗೆದುಕೊಳ್ಳುತ್ತಿದ್ದಾರೆ.

ಬಾಗಲಕೋಟೆ: ಬಾಗಲಕೋಟೆಯಲ್ಲಿಯೂ ಕೆಲವು ಬಸ್‌ಗಳು ಮಾತ್ರ ಸಂಚಾರ ನಡೆಸುತ್ತಿವೆ. ರಬಕವಿ-ಬನಹಟ್ಟಿ, ತೇರದಾಳ ಹಾಗೂ ಮಹಾಲಿಂಗಪೂರ ಸೇರಿ ತಾಲೂಕಿನಾದ್ಯಂತ ಎಲ್ಲ ಬಸ್ ನಿಲ್ದಾಣಗಳಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

ಆಟೋ ಚಾಲಕರ ಸುಲಿಗೆ: ಬಸ್ ಇಲ್ಲದಿರುವುದನ್ನು ಆಟೋ ಚಾಲಕರು ಬಂಡವಾಳ ಮಾಡಿಕೊಂಡು ಜನರನ್ನು ಸುಲಿಗೆ ಮಾಡುತ್ತಿದ್ದಾರೆ. ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ಬಾಯಿಗೆ ಬಂದಷ್ಟು ದರವನ್ನು ಆಟೋ ಚಾಲಕರು ಹೇಳುತ್ತಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮುಷ್ಕರ ವಾಪಸ್‌ಗೆ ಕರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರಿಗೆ ನಿಗಮದ ವಿವಿಧ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಈಗಾಗಲೇ ಕೆಲವು ಸುತ್ತಿನ ಸಭೆ ನಡೆಸಲಾಗಿದೆ. ಪರಸ್ಪರ ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿದೆ. ಮುಷ್ಕರವನ್ನು ವಾಪಾಸು ಪಡೆಯಬೇಕು ಎಂದು ಕರೆ ನೀಡಿದ್ದಾರೆ.

ರೋಗಿಗಳ ಪರದಾಟ: ಹುಬ್ಬಳ್ಳಿ ನಗರಕ್ಕೆ ಕಿಮ್ಸ್ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದ ಜನರು ಪರದಾಡಿದರು. ಹಳ್ಳಿಯಿಂದ ರಾತ್ರಿ ಬಸ್‌ನಲ್ಲಿ ಬೆಳಗ್ಗೆ ನಗರಕ್ಕೆ ಆಗಮಿಸಿದರು. ಆದರೆ ಬಸ್ ನಿಲ್ದಾಣದಿಂದ ಆಸ್ಪತ್ರೆಗೆ ಹೋಗಲು ನಗರ ಸಾರಿಗೆ ಬಸ್‌ಗಳಿಲ್ಲ. ಆದ್ದರಿಂದ ಆಟೋಗಳಿಗೆ ದುಪ್ಪಟ್ಟು ಬೆಲೆ ತೆರಬೇಕಾಯಿತು. ಹೊಸೂರು ಬಸ್ ನಿಲ್ದಾಣದಿಂದ ಕಿಮ್ಸ್ ಅಸ್ಪತ್ರೆಗೆ ಒಬ್ಬರಿಗೆ 25 ರೂ. ದರ ಫಿಕ್ಸ್ ಮಾಡಿ ಆಟೋ ಚಾಲಕರು ಸಂಚಾರ ನಡೆಸುತ್ತಿದ್ದಾರೆ.

Previous articleKSRTC: ಸಾರಿಗೆ ನೌಕರರ ಮುಷ್ಕರ, ದಾವಣಗೆರೆಯಲ್ಲಿ ಬಸ್ ಇಲ್ಲದೇ ಪರದಾಟ
Next articleಹುಬ್ಬಳ್ಳಿ: ಸರ್ಕಾರಿ ಬಸ್ ಇಲ್ಲ, ಖಾಸಗಿ ಬಸ್‌ಗಳಿಗೆ ಮುಗಿಬಿದ್ದ ಜನರು

LEAVE A REPLY

Please enter your comment!
Please enter your name here