ಬಿಹಾರ: ಅಯೋಧ್ಯೆಯ ಶ್ರೀ ರಾಮ ಮಂದಿರ ಮಾದರಿಯಲ್ಲಿ ಸೀತಾ ಮಾತೆಯ ಜನ್ಮಸ್ಥಳವೆಂದು ಪರಿಗಣಿಸಲಾದ ಬಿಹಾರದ ಮಿಥಿಲಾ ಪ್ರದೇಶದ ಸೀತಾಮರ್ಹಿಯಲ್ಲಿರುವ ಪುನೌರಾ ಧಾಮ್‌ನಲ್ಲಿರುವ ಮಾತಾ ಜಾನಕಿ ದೇವಾಲಯದ ಪುನರಾಭಿವೃದ್ಧಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಶಂಕುಸ್ಥಾಪನೆ ಮಾಡಲಿದ್ದಾರೆ.
ಸೀತಾ ದೇವಿಯ ಜನ್ಮಸ್ಥಳ ಎಂದು ನಂಬಲಾದ ಸ್ಥಳದಲ್ಲಿ ಪ್ರಮುಖ ಯೋಜನೆಗೆ ಸಚಿವರು ಚಾಲನೆ ನೀಡಲಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಗೆ ಕೆಲ ತಿಂಗಳು ಬಾಕಿ ಇರುವಾಗ ಈ ಕಾರ್ಯಕ್ರಮವು ರಾಜ್ಯ ರಾಜಕೀಯದಲ್ಲಿ ಮಹತ್ವದ್ದು ಎನ್ನಲಾಗಿದೆ. ಚುನಾವಣೆ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ ರಾಜ್ಯದಲ್ಲಿ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ/ ಚಾಲನೆ ನೀಡುತ್ತಿದೆ.
67 ಎಕರೆ ವ್ಯಾಪ್ತಿಯಲ್ಲಿರುವ ದೇವಸ್ಥಾನದ ಕಾಮಗಾರಿಯನ್ನು 11 ತಿಂಗಳೊಳಗೆ ಪೂರ್ಣಗೊಳಿರುವ ನಿರೀಕ್ಷೆ ಇದೆ. 882 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ. ಬಿಹಾರ ಸರ್ಕಾರವು ದೇವಾಲಯ ನಿರ್ಮಾಣಕ್ಕಾಗಿ ಟ್ರಸ್ಟ್ ರಚಿಸಿದೆ.
ಉತ್ತರ ಪ್ರದೇಶದ ಅಯೋಧ್ಯೆಯ ಶ್ರೀ ರಾಮ ಮಂದಿರದ ಗಾತ್ರ ಮತ್ತು ಭವ್ಯತೆಯ ಮಾದರಿಯಲ್ಲೇ ಈ ಯೋಜನೆಗೆ ಸೆಪ್ಟೆಂಬರ್ 2023ರಲ್ಲಿ ಅನುಮೋದನೆ ಪಡೆಯಲಾಗಿತ್ತು. ಧಾರ್ಮಿಕ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಯೋಜನೆ ಇದಾಗಿದೆ. ಆ ಸಮಯದಲ್ಲಿ ಜೆಡಿ (ಯು) ಮತ್ತು ಆರ್‌ಜೆಡಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದವು. 2023ರಲ್ಲಿ ನಿತೀಶ್ ಕುಮಾರ್ ದೇವಾಲಯದ ಆವರಣಕ್ಕಾಗಿ 72 ಕೋಟಿ ರೂ. ಮಂಜೂರು ಮಾಡಿದ್ದರು. ಇದೀಗ ಎನ್‌ಡಿಎ ಸರ್ಕಾರವು ಸಂಪೂರ್ಣ ಯೋಜನೆಗಾಗಿ 882 ಕೋಟಿ ರೂ.ಯನ್ನು ಮಂಜೂರು ಮಾಡಿದೆ.
ರಾಜ್ಯ ಸಚಿವ ಸಂಪುಟದಿಂದ ಅನುಮೋದನೆಗೊಂಡ ಯೋಜನೆಯಲ್ಲಿ ದೇವಾಲಯ ಸಂಕೀರ್ಣದ ಜೊತೆಗೆ ಲವ–ಕುಶ ಪಾರ್ಕ್, ಧಾರ್ಮಿಕ ಪ್ರದರ್ಶನ ಮಳಿಗೆಗಳು, ಭಕ್ತರ ವಸತಿ ಸೌಲಭ್ಯ, ಹಸಿರು ಉದ್ಯಾನ ಹಾಗೂ ಸಾಂಸ್ಕೃತಿಕ ಕೇಂದ್ರಗಳು ಒಳಗೊಂಡಿವೆ. ಈ ಯೋಜನೆಗಳು ಸುಮಾರು 67 ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿವೆ.
ಮಾತೆ ಜಾನಕಿ ಮಂದಿರದ ವಿನ್ಯಾಸವನ್ನು ಅಯೋಧ್ಯಾ ರಾಮಮಂದಿರ ನಿರ್ಮಾಣ ಮಾಡಿದ ಇಂಜಿನಿಯರ್‌ಗಳ ತಂಡ ಸಿದ್ಧಪಡಿಸಿದ್ದು, 50 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿದೆ. ಭಕ್ತರ ಅನುಕೂಲಕ್ಕಾಗಿ ರಾಮ–ಜಾನಕಿ ಪಥ ಯೋಜನೆಯಡಿ ಅಯೋಧ್ಯಾ–ಸೀತಾಮರಿಹಿ ನಡುವಿನ ಸಂಪರ್ಕ ಸುಧಾರಿಸಲಾಗುತ್ತಿದೆ. ಅಯೋಧ್ಯೆಯ ರಾಮ ಮಂದಿರದ ವಾಸ್ತುಶಿಲ್ಪಿ ಚಂದ್ರಕಾಂತ್ ಸೋಂಪುರ ದೇವಾಲಯವು ವಿನ್ಯಾಸಗೊಳಿಸಿದ್ದಾರೆ.
ಪ್ರತಿವರ್ಷ ಇಲ್ಲಿ ನಡೆಯುವ ಜಾನಕಿ ನವಮಿ ಉತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ಯೋಜನೆ ಪೂರ್ಣಗೊಂಡ ಬಳಿಕ, ಸೀತಾಮರಿಹಿ ಭಾರತದೆಲ್ಲೆಡೆ ಹಾಗೂ ವಿದೇಶದಿಂದಲೂ ಭಕ್ತರನ್ನು ಆಕರ್ಷಿಸುವ ಪ್ರಮುಖ ತೀರ್ಥ ಕ್ಷೇತ್ರವಾಗಿ ಬೆಳೆದು ನಿಲ್ಲಲಿದೆ ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.