ಮಾಸ್ಕೋ: ರಷ್ಯಾದಲ್ಲಿ ಪ್ರಬಲ ಭೂಕಂಪ ಉಂಟಾಗಿದೆ. ಇದರ ಪರಿಣಾಮ ಕರಾವಳಿ ತೀರಕ್ಕೆ ಸುನಾಮಿ ಅಪ್ಪಳಿಸಿದ್ದು, ಸುಮಾರು 4 ಮೀಟರ್ ಎತ್ತರದ ಅಲೆಗಳು ಸೃಷ್ಟಿಯಾಗಿವೆ. ಅಲಾಸ್ಕಾ, ಹವಾಯಿ ಮತ್ತು ನ್ಯೂಜಿಲೆಂಡ್ ಕಡೆ ಇರುವ ಕರಾವಳಿ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಬುಧವಾರ ಮುಂಜಾನೆ ರಷ್ಯಾದ ಕರಾವಳಿ ಭಾಗದಲ್ಲಿ ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 8.8 ದಾಖಲಾಗಿದೆ. ಭೂಕಂಪದ ತೀವ್ರತೆ ಹೆಚ್ಚಿದ್ದ ಕಾರಣ ಕರಾವಳಿ ಭಾಗದಲ್ಲಿ ಸುನಾಮಿಯ ಎಚ್ಚರಿಕೆಯನ್ನು ನೀಡಲಾಗಿತ್ತು.
ಸ್ಥಳೀಯ ಮಾಧ್ಯಮಗಳ ಪ್ರಕಾರ ಹೊಕ್ಕೈಡೊದಿಂದ ಟೋಕಿಯೋದ ಈಶಾನ್ಯಕ್ಕೆ ಫೆಸಿಫಿಕ್ ಕರಾವಳಿಯ 16 ಸ್ಥಳಗಳಲ್ಲಿ ದೈತ್ಯ ಅಲೆಗಳು ಕಂಡುಬಂದಿವೆ. ಜಪಾನ್‌ನ ಹವಾಮಾನ ಸಂಸ್ಥೆ ಇನ್ನು ದೊಡ್ಡ ಅಲೆಗಳು ಅಪ್ಪಳಿಸಲಿವೆ ಎಂದು ಎಚ್ಚರಿಕೆ ನೀಡಿದೆ.
ಅಮೆರಿಕಾದ ಅಲಸ್ಕಾದ ಭಾಗ ಮತ್ತು ಜಪಾನ್‌ಗೆ ಸಹ ಸುನಾಮಿಯ ಎಚ್ಚರಿಕೆಯನ್ನು ನೀಡಲಾಗಿದೆ. ಪೆಟ್ರೋಪಾವ್ಲೋವ್ಸಕ್‌ನಿಂದ ಸುಮಾರು 136 ಕಿ.ಮೀ.ದೂರದಲ್ಲಿ 19 ಕಿ.ಮೀ.ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಕಂಡುಬಂದಿದೆ.
ಅಮೆರಿಕದ ಭೂ ವೈಜ್ಞಾನಿಕ ಸಮೀಕ್ಷೆ ಪ್ರಕಾರ ಸದ್ಯಕ್ಕೆ ಯಾವುದೇ ಹಾನಿಯಾಗಿಲ್ಲ. ಅಲಸ್ಕಾದ ಭಾಗಗಳಿಗೆ ಸುನಾಮಿ ಅಪ್ಪಳಿಸುವ ಎಚ್ಚರಿಕೆ ನೀಡಲಾಗಿದೆ ಎಂದು ಪ್ರಾದೇಶಿಕ ಸಚಿವ ಸರ್ಗೆಯ್ ಲೆಬೆಡೆವ್ ತಿಳಿಸಿದ್ದಾರೆ.
ರಷ್ಯಾ ಬಳಿ ಸಂಭವಿಸಿದ ಪ್ರಬಲ ಭೂಕಂಪದ ಕಾರಣ ಜಪಾನ್‌ನಲ್ಲೂ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಭೂಕಂಪದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ವೈದ್ಯರು ಆಪರೇಷನ್ ಮಾಡುವಾಗ ಕಟ್ಟಡ ಅಲುಗಾಡುತ್ತಿರುವ ವಿಡಿಯೋ ಭೂಕಂಪದ ತೀವ್ರತೆಗೆ ಸಾಕ್ಷಿಯಾಗಿದೆ.
ಪೆಸಿಫಿಕ್ ಕರಾವಳಿಯಲ್ಲಿ ಇದೇ ಮೊದಲ ಬಾರಿಗೆ ಇಷ್ಟು ತೀವ್ರತೆಯ ಸುನಾಮಿ ಅಲೆಗಳು ಕಂಡುಬಂದಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಭೂಕಂಪದ ಕೇಂದ್ರಬಿಂದುವಾದ ಕಮ್ಚಟ್ಕಾ ದ್ವೀಪದಿಂದ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ.
ಜಪಾನ್‌ನಲ್ಲಿ ಭೂಕಂಪದಿಂದ ಯಾವುದೇ ಹಾನಿಗಳು ಇದುವರೆಗೂ ಕಂಡುಬಂದಿಲ್ಲ. ಜಪಾನ್ ಕರಾವಳಿಯಲ್ಲಿ ಸುನಾಮಿ ಎಚ್ಚರಿಕೆ ಹಿನ್ನಲೆಯಲ್ಲಿ ಹೊಕ್ಕೈಡೊದಿಂದ ಓಕಿನಾ ತನಕ 133 ಪುರಸಭೆಗಳ ಜನರನ್ನು ಸ್ಥಳಾಂತರ ಮಾಡಲು ಸೂಚನೆ ನೀಡಲಾಗಿದೆ.
ಜಪಾನ್ ಕಾಲಮಾನದ ಪ್ರಕಾರ ಬೆಳಗ್ಗೆ 8.25ಕ್ಕೆ ಮೊದಲ ಕಂಪನದ ಅನುಭವವಾಗಿದೆ. ಇದರ ತೀವ್ರತೆ 8.0 ಅಷ್ಟಿತ್ತು ಎಂದು ಅಮೆರಿಕದ ಭೂಕಂಪ ಶಾಸ್ತ್ರಜ್ಞರು ತಿಳಿಸಿದ್ದಾರೆ. ಮಾರ್ಚ್ 2011ರಲ್ಲಿ ಈಶಾನ್ಯ ಜಪಾನ್‌ನಲ್ಲಿ 9.0 ತೀವ್ರತೆಯ ಭೂಕಂಪ ಉಂಟಾಗಿತ್ತು.
ಭೂಕಂಪದ ಕೇಂದ್ರಬಿಂದು ಕಮ್ಚಟ್ಕಾ ದ್ವೀಪ ರಷ್ಯಾದ ಪಶ್ಚಿಮ ಭಾಗದಲ್ಲಿದೆ. ಈ ಭಾಗದಲ್ಲಿ 1,65,000 ಜನರು ಇದ್ದಾರೆ ಎಂದು ಅಂದಾಜಿಸಲಾಗಿದೆ. ದೈತ್ಯ ಅಲೆಗಳು ಕಂಡು ಬಂದ ಹಿನ್ನಲೆಯಲ್ಲಿ ಜನರು ಸಮುದ್ರ ತೀರಕ್ಕೆ ತೆರಳಬಾರದು ಎಂದು ಮನವಿ ಮಾಡಲಾಗಿದೆ.
ವಾಯುವ್ಯ ಹವಾಯಿಯನ್ ದ್ವೀಪದಲ್ಲಿ ಮತ್ತು ರಷ್ಯಾದ ಕರಾವಳಿಯಲ್ಲಿ 10 ಅಡಿಗಳ ತನಕ ಅಲೆಗಳು ಏಳಬಹುದು ಎಂದು ಅಂದಾಜಿಸಲಾಗಿದೆ. ಚುಕ್, ಕೊಸ್ರೋ, ಮಾರ್ಷಲ್ ದ್ವೀಪಗಳಲ್ಲಿಯೂ ಭಾರೀ ಗಾತ್ರದ ಅಲೆಗಳ ಎಚ್ಚರಿಕೆ ಕೊಡಲಾಗಿದೆ.
ದಕ್ಷಿಣ ಕೊರಿಯಾ, ಉತ್ತರ ಕೊರಿಯಾ ಮತ್ತು ತೈವಾನ್‌ನಲ್ಲಿಯೂ ದೊಡ್ಡ ದೊಡ್ಡ ಅಲೆಗಳು ದಡಕ್ಕೆ ಅಪ್ಪಳಿಸಲಿವೆ ಎಂದು ನಿರೀಕ್ಷೆ ಮಾಡಲಾಗಿದೆ. ಆದ್ದರಿಂದ ಪೆಸಿಫಿಕ್ ಮಹಾಸಾಗರದ ತೀರಗಳಲ್ಲಿ ಎಚ್ಚರಿಯನ್ನು ನೀಡಲಾಗಿದೆ.
ಕ್ಯಾಲಿಫೋರ್ನಿಯಾ, ಒರೆಗಾನ್, ವಾಷಿಂಗ್ಟನ್, ಹವಾಯಿ ಸೇರಿದಂತೆ ಪಶ್ಚಿಮ ಕರಾವಳಿಯ ಕೆಲವು ಭಾಗದ ಮೇಲೆ ನಿಗಾ ವಹಿಸಿ ಎಂದು ಸ್ಥಳೀಯ ಆಡಳಿತಕ್ಕೆ ಅಮೆರಿಕದ ಅಲಸ್ಕಾದಲ್ಲಿರುವ ರಾಷ್ಟ್ರೀಯ ಸುನಾಮಿ ಎಚ್ಚರಿಕೆ ಕೇಂದ್ರ ನಿರ್ದೇಶನ ನೀಡಿದೆ.