ಬೆಂಗಳೂರಲ್ಲಿ ಮತ ಕಳ್ಳತನ: ರಾಹುಲ್‌ ಗಾಂಧಿ ಬಿಚ್ಚಿಟ್ಟ ವಿವರಗಳು

0
76

ನವದೆಹಲಿ: 2024ರ ಲೋಕಸಭೆ ಚುನಾವಣೆ ವೇಳೆ ಹಲವು ರಾಜ್ಯಗಳಲ್ಲಿ ಮತ ಕಳ್ಳತನ ಮಾಡಲಾಗಿದೆ ಎಂಬುದು ಕಾಂಗ್ರೆಸ್ ನಾಯಕರ ಆರೋಪ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಕರ್ನಾಟಕದ ಸೇರಿದಂತೆ ಹಲವು ರಾಜ್ಯಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಹೇಗೆ ಮತ ಕಳ್ಳತನ ನಡೆದಿದೆ ಎಂದು ವಿವರ ನೀಡಿದ್ದಾರೆ.

ಗುರುವಾರ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಯಾವ ರೀತಿಯಲ್ಲಿ ಮತ್ತು ಎಷ್ಟು ಪ್ರಮಾಣದಲ್ಲಿ ನಕಲಿ ಮತದಾನ ನಡೆದಿದೆ ಎಂದು ಮಾಹಿತಿ ನೀಡಿದರು. ಮತದಾರರ ಪಟ್ಟಿಗೆ ನಕಲಿ ಜನರನ್ನು ಸೇರಿಸಲಾಗಿದೆ ಎಂದು ಹೇಳಿದ್ದಾರೆ.

ರಾಹುಲ್‌ ಕರ್ನಾಟಕದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ಪ್ರಮಾಣದ ಮತ ಕಳ್ಳತನ ನಡೆದಿದೆ ಎಂದು ಆರೋಪ ಮಾಡಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಪಿ.ಸಿ.ಮೋಹನ್ ಚುನಾವಣೆಯಲ್ಲಿ ಜಯಗಳಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಸೋಲು ಕಂಡಿದ್ದರು.

ರಾಹುಲ್ ನೀಡಿದ ವಿವರಗಳು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮ ನಡೆದಿರುವ ಮಾಹಿತಿಯನ್ನು ನೀಡಿದ್ದಾರೆ. ಕ್ಷೇತ್ರದ 6.5 ಲಕ್ಷ ಮತಗಳ ಪೈಕಿ ಸುಮಾರು 1 ಲಕ್ಷಕ್ಕೂ ಹೆಚ್ಚು ಮತಗಳ ಕಳ್ಳತನವಾಗಿದೆ ಎಂದು ದೂರಿದ್ದಾರೆ.

ಕಾಂಗ್ರೆಸ್ ನಡೆಸಿದ ಆಂತರಿಕ ಸಮೀಕ್ಷೆಯ ವೇಳೆ ಮಹಾದೇವಪುರ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಹೆಚ್ಚಿನ ನಕಲಿ ಮತದಾರರು ಇದ್ದು, ಸಿಂಧುವಲ್ಲದ ವಿಳಾಸಗಳು, ಚಿತ್ರಗಳು ಇಲ್ಲದ ಮತದಾರರ ಗುರುತಿನ ಚೀಟಿಗಳಿರುವುದು ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ಮಹದೇವಪುರದಲ್ಲಿ ನಕಲಿ ವಿಳಾಸಗಳನ್ನು ಹೊಂದಿರುವ 40,009 ಮತದಾರರಿದ್ದಾರೆ. ಮನೆ ಸಂಖ್ಯೆ 0 ಎಂಬ ವಿಳಾಸ ಇರುವ ಹಲವರು ನೋಂದಾಯಿಸಿಕೊಂಡಿದ್ದಾರೆ. ಇನ್ನು ಬೂತ್ ಸಂಖ್ಯೆ 366 ಒಂದರಲ್ಲಿ 46 ಮತದಾರರು ಒಂದೇ ರೂಮಿನ ವಿಳಾಸದ ಅಡಿಯಲ್ಲಿ ನೋಂದಾಯಿಸಲ್ಪಟ್ಟಿದ್ದಾರೆ. ಇನ್ನು ಆ ಸ್ಥಳಕ್ಕೆ ಭೇಟಿ ನೀಡಿ ಪರೀಶಿಲಿಸಿದಾಗ ಯಾರೂ ಅಲ್ಲಿ ವಾಸಿಸುತ್ತಿಲ್ಲ ಎಂಬುದು ಗೊತ್ತಾಗಿದೆ ಎಂದು ರಾಹುಲ್ ಆರೋಪಿಸಿದ್ದಾರೆ.

ನಕಲಿ ವಿಳಾಸಗಳೊಂದಿಗೆ 40,000 ನಮೂದುಗಳು ಮತ್ತು ಯಾವುದೇ ಫೋಟೋಗಳಿಲ್ಲದ ಸುಮಾರು 4,000 ನೋಂದಾಯಿತ ಮತದಾರರಿದ್ದಾರೆ. ಅಸ್ತಿತ್ವದಲ್ಲಿ ಇಲ್ಲದ ವಿಳಾಸಗಳನ್ನು ನೀಡಲಾಗಿದೆ. ವಾಸದ ವಿಳಾಸ 0, ಮನೆ ಸಂಖ್ಯೆ 0, ಬೀದಿ ಸಂಖ್ಯೆ 0 ಎಂದು ನಮೂದಾಗಿವೆ. ಕಾಂಗ್ರೆಸ್ ಪಕ್ಷದಿಂದಲೇ ಕರ್ನಾಟಕದ ಮಹದೇವಪುರದಲ್ಲಿ ತನಿಖೆ ಮಾಡಲಾಯಿತು ಎಂದು ವಿವರಣೆ ಕೊಟ್ಟರು.

ಕರ್ನಾಟಕದಲ್ಲಿ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 16, ಕಾಂಗ್ರೆಸ್ 9 ಸ್ಥಾನಗಳನ್ನು ಗೆದ್ದಿತ್ತು. ರಾಹುಲ್ ಗಾಂಧಿ ಪ್ರಕಾರ ಅಚ್ಚರಿಯಾಗಿ ಸೋಲು ಕಂಡ ಕರ್ನಾಟಕದ 7 ಕ್ಷೇತ್ರಗಳ ಪೈಕಿ ಮಹದೇವಪುರ 1 ಕ್ಷೇತ್ರದಲ್ಲಿ ತನಿಖೆ ನಡೆಸಲಾಗಿದೆ.

2024ರಲ್ಲಿ ಅಲ್ಲಿ 6,26,208 ಲಕ್ಷ ಮತಗಳನ್ನು ಕಾಂಗ್ರೆಸ್ ಪಡೆಯಿತು. ಬಿಜೆಪಿ 6,58,915 ಮತಗಳನ್ನು ಬಿಜೆಪಿ ಪಡೆಯಿತು. ಬಿಜೆಪಿ 32,707 ಮತಗಳ ಬಹುಮತ ಪಡೆಯಿತು. ಚುನಾವಣೆ ವೇಳೆ 5 ರೀತಿಯಲ್ಲಿ ಅಕ್ರಮ ನಡೆದಿರುವುದು ಪತ್ತೆಯಾಗಿದೆ. ಮತದಾರರ ಪಟ್ಟಿಗೆ 1,00,250 ಹೆಸರು ಅಕ್ರಮವಾಗಿ ಸೇರಿಸಲಾಗಿದೆ.

ಈ ಪೈಕಿ 11,965 ನಕಲಿ ಮತದಾರರನ್ನು ಸೇರಿಸಲಾಗಿದೆ. ನಕಲಿ ವಿಳಾಸ ಹೊಂದಿರುವ ಮತದಾರರ ಸಂಖ್ಯೆ 40,009. ಅಕ್ರಮವಾಗಿ ಹೆಸರು ಸೇರಿಸಿರುವ ಮತದಾರರ ಸಂಖ್ಯೆ 10,452 ಎನ್ನುವ ಮೂಲಕ ದಾಖಲೆ ಸಮೇತ ರಾಹುಲ್ ಗಾಂಧಿ ಮತ ಕಳ್ಳತನದ ಸ್ಫೋಟಕ ಮಾಹಿತಿಗಳನ್ನು ನೀಡಿದ್ದಾರೆ.

ಗುರುಕಿರತ್ ಸಿಂಗ್ ಡ್ಯಾಂಗ್ ಎಂಬ ವ್ಯಕ್ತಿ ಕ್ಷೇತ್ರದ 4 ವಿಭಿನ್ನ ಮತಗಟ್ಟೆಗಳಲ್ಲಿ ಒಂದು ಅಥವಾ ಎರಡು ಹೇಗೆ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಒಂದೇ ಹೆಸರು, ಒಂದೇ ವಿಳಾಸ, ವಿಭಿನ್ನ ಮತಗಟ್ಟೆಗಳಲ್ಲಿ ಒಂದೇ ವ್ಯಕ್ತಿ ಮತ ಹಾಕಿದ್ದಾನೆ. ಇಂತಹ ಸಾವಿರಾರು ಉದಾಹರಣೆಗಳಿವೆ ಆದಿತ್ಯ ಶ್ರೀ ವಾಸ್ತವ್ಯ ಕರ್ನಾಟಕ ಮಹಾರಾಷ್ಟ್ರ, ಉತ್ತರ ಪ್ರದೇಶದಲ್ಲಿ ಮತದಾನದ ಹಕ್ಕು ಹೊಂದಿದ್ದಾನೆ. ಲಕ್ಷಾಂತರ ಜನರು ಹೀಗೆ ಬೇರೆ ಬೇರೆ ನಕಲಿ ವೋಟರ್ ಐಡಿ ಹೊಂದಿದ್ದಾರೆ ಎಂದು ಪಟ್ಟಿ ಬಿಡುಗಡೆ ಮಾಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಮತ ಕಳ್ಳತನ ಆಗಿದೆ ಎಂದು ಆರೋಪ ಮಾಡಿರುವ ಕಾಂಗ್ರೆಸ್ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಆಗಸ್ಟ್ 8ರ ಶುಕ್ರವಾರ ಬೆಂಗಳೂರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.

Previous articleಶಿವಮೊಗ್ಗ-ಹರಿಹರ ಹೊಸ ರೈಲು ಮಾರ್ಗ ಸ್ಥಗಿತ, ಕಾರಣ ಹೇಳಿದ ಕೇಂದ್ರ ಸಚಿವರು
Next articleವೆಬ್ ಸರಣಿ ಮೂಲಕ ಶೋಧಕ್ಕೆ ಸಜ್ಜಾದ ಲೂಸಿಯಾ ನಿರ್ದೇಶಕ ಪವನ್

LEAVE A REPLY

Please enter your comment!
Please enter your name here