ಧರ್ಮಸ್ಥಳ: ಕೆಟ್ಟ ಹೆಸರು ಬರುತ್ತದೆಂದು ಉಲ್ಟಾ ಹೊಡೆದ ಸರ್ಕಾರ!

0
88

ಹುಬ್ಬಳ್ಳಿ: ಧರ್ಮಸ್ಥಳ ವಿಚಾರದಲ್ಲಿ ಸೂಕ್ಷ್ಮವಾಗಿ ವರ್ತಿಸಬೇಕಿದ್ದ ರಾಜ್ಯ ಸರ್ಕಾರ ಅತ್ಯಂತ ಬೇಜವಾಬ್ದಾರಿತನದಿಂದ ನಡೆದುಕೊಂಡಿದೆ. ಏನೊಂದೂ ಸಿಗದಿದ್ದಕ್ಕೆ ಸಿಎಂ ಈಗ ವರಸೆ ಬದಲಿಸುತ್ತಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಲ್‌ಪಿ ಸಭೆಯಲ್ಲಿ ʼಧರ್ಮಸ್ಥಳ ತನಿಖೆಯಲ್ಲಿ ಸರ್ಕಾರದ ಪಾತ್ರವಿಲ್ಲ’ ಎಂದಿರುವ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಸಚಿವರು, SIT ರಚಿಸಿದ್ದು ತಾವೇ ಅಲ್ಲವೇ? ಎಂದು ತಿರುಗೇಟು ಕೊಟ್ಟಿದ್ದಾರೆ.

SIT ರಚಿಸಿ ತನಿಖೆಗೆ ಆದೇಶಿಸಿದ ಸಿಎಂ ಈಗ ಸರ್ಕಾರದ ಪಾತ್ರವಿಲ್ಲವೆಂದು ಉಲ್ಟಾ ಹೊಡೆಯುತ್ತಿದ್ದಾರೆ. ಪರ-ವಿರೋಧ ಚರ್ಚೆಯ ನಡುವೆಯೇ ತರಾತುರಿಯಲ್ಲಿ SIT ರಚಿಸಿ ಉತ್ಖನನಕ್ಕೆ ಆದೇಶ ನೀಡಿದ್ದು ತಾವೇ ಅಲ್ಲವೇ? ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.

ಮಣ್ಣು ಅಗೆದಿದ್ದೊಂದೇ ಬಂತು!: ಧರ್ಮಸ್ಥಳದ 13 ಉತ್ಖನನ ಮಾಡಿದ ಜಾಗಗಳಲ್ಲಿ ಈವರೆಗೂ ಮಣ್ಣು ಅಗೆದಿದ್ದೊಂದೇ ಬಂತು. ಅನಾಮಿಕ ಆರೋಪಿಸಿದಂತೆ ಏನೊಂದೂ ಗುರುತರ ಸಾಕ್ಷಿ, ಶವಗಳ ಅವಶೇಷ ಸಿಗದಾಯಿತು. ಹೀಗಾಗಿ ಸಿಎಂ ಈಗ ತಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆಂಬ ಕಾರಣಕ್ಕೆ ʼಧರ್ಮಸ್ಥಳ ತನಿಖೆಯಲ್ಲಿ ಸರ್ಕಾರದ ಪಾತ್ರವಿಲ್ಲ’ ಎನ್ನುತ್ತಿದ್ದಾರೆಂದು ಸಚಿವ ಜೋಶಿ ಟೀಕಿಸಿದ್ದಾರೆ.

ಸಿಎಂ ಪಾತ್ರವಿಲ್ಲದೆ SIT ರಚನೆ ಆಯಿತಾ?: ಧರ್ಮಸ್ಥಳ ಪ್ರಕರಣದಲ್ಲಿ ಸಿಎಂ ಪಾತ್ರವಿಲ್ಲದೆ SIT ರಚಿಸಲಾಯಿತೆ? ಎಂದು ಪ್ರಶ್ನಿಸಿದ ಜೋಶಿ, ಇಷ್ಟೆಲ್ಲಾ ಹೈಡ್ರಾಮಾ ಮಾಡುವ ಬದಲು ಸರಿಯಾಗಿ ಪೊಲೀಸ್ ತನಿಖೆ ನಡೆಸಬಹುದಿತ್ತು. ಆದರೆ ಅದೇನೋ ಅಗೆದು ಗುಡ್ಡೆ ಹಾಕುವ ಕೆಲಸ ಮಾಡಿದ್ದಾರೆ ಎಂದು ಸರ್ಕಾರದ ವಿರುದ್ಧ ಹರಿ ಹಾಯ್ದಿದ್ದಾರೆ.

ಧರ್ಮಸ್ಥಳಕ್ಕೆ ತಲೆಮಾರಿನ ಇತಿಹಾಸವಿದೆ. ಈ ಪವಿತ್ರ ಕ್ಷೇತ್ರಕ್ಕೆ ಪ್ರತಿ ‌ದಿನ ಲಕ್ಷಾಂತರ ಜನರು ಭೇಟಿ‌ ನೀಡುತ್ತಾರೆ. ಆದರೆ ರಾಜ್ಯ ಸರ್ಕಾರ ಜನರ ನಂಬಿಕೆ ವಿಚಾರದಲ್ಲಿ ಆಟವಾಡುತ್ತಿದೆ. ಅತ್ಯಂತ ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿದ್ದು, ತೀವ್ರ ಖಂಡನೀಯ ಎಂದಿದ್ದಾರೆ ಜೋಶಿ.

ದಟ್ಟಾರಣ್ಯ ಪ್ರದೇಶದ ನೇತ್ರಾವತಿ ಸ್ನಾನಘಟ್ಟದ 13 ಭಾಗಗಳಲ್ಲಿ ಶವಗಳನ್ನು ಹೂತು ಹಾಕಿದೆ ಎಂದಿರುವ ಅನಾಮಿಕನ ಆರೋಪದ ಬಗ್ಗೆ ಪರ – ವಿರೋಧ ಚರ್ಚೆ ನಡುವೆಯೇ SIT ರಚಿಸಿ, ಈಗ ಉತ್ಖನನ ಜಾಗದಲ್ಲಿ ಏನೂ ಸಿಗದಿದ್ದರಿಂದ ʼಧರ್ಮಸ್ಥಳ ತನಿಖೆಯಲ್ಲಿ ಸರ್ಕಾರದ ಪಾತ್ರವಿಲ್ಲ’ ಎನ್ನುತ್ತಿರುವುದು ನಿಜಕ್ಕೂ ದುರಂತ ಹಾಗೂ ಖಂಡನೀಯ ಎಂದು‌ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಫಲಿತಾಂಶ ಶೂನ್ಯ: ಅನಾಮಿಕ ಸಾಕ್ಷಿ ದೂರುದಾರ ಗುರುತಿಸಿದ 16 ಸ್ಥಳಗಳಲ್ಲೂ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಎರಡು ಕಡೆ ಮಾತ್ರ ಪುರುಷನದ್ದು ಎನ್ನಲಾದ ಎರಡು ಕಳೇಬರದ ಅವಶೇಷಗಳು ಪತ್ತೆಯಾಗಿದೆ. ಬಾಕಿ ಇದ್ದ 13ನೇ ಸ್ಥಳದಲ್ಲಿ ಮಂಗಳವಾರ ಶೋಧ ನಡೆದಿತ್ತು. 13ನೇ ಸ್ಥಳದ ವ್ಯಾಪ್ತಿಯ ಸುಮಾರು 300 ಮೀಟರ್ ಪ್ರದೇಶವನ್ನು ಜಿಪಿಆರ್ ಯಂತ್ರದಿಂದ ಸ್ಕ್ಯಾನ್ ಮಾಡಲಾಗಿತ್ತು. ಆದರೆ, ಯಂತ್ರವು ಕಳೇಬರದ ಅವಶೇಷಗಳ ಬಗ್ಗೆ ಸುಳಿವು ನೀಡಿಲ್ಲ. ತಾಂತ್ರಿಕವಾಗಿ ಯಾವುದೇ ನಿರ್ದಿಷ್ಟ ಪತ್ತೆ ಸಿಗದಿದ್ದರೂ, ಎಸ್‌ಐಟಿ ತಂಡವು ಅನಾಮಿಕ ದೂರುದಾರನ ಹೇಳಿಕೆಯ ಆಧಾರದ ಮೇಲೆ ಅಗೆತ ಕಾರ್ಯಕ್ಕೆ ಮುಂದಾದರೂ ಫಲಿತಾಂಶ ಶೂನ್ಯವಾಗಿದೆ. ಎರಡು ಹಿಟಾಚಿಗಳಲ್ಲಿ 14 ಅಡಿ ಆಳ ಗುಂಡಿ ಅಗೆಯಲಾಗಿದೆ.

ಬಿಜೆಪಿ ಶಾಸಕರು ವಾರಾಂತ್ಯದಲ್ಲಿ ಧರ್ಮಸ್ಥಳಕ್ಕೆ: ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಶಾಸಕರು ವಾರಾಂತ್ಯದಲ್ಲಿ ಧರ್ಮಸ್ಥಳಕ್ಕೆ ಭೇಟಿ ನೀಡಲು ನಿರ್ಧರಿಸಿದ್ದಾರೆ. ಈ ಕುರಿತಂತೆ ಮಾತನಾಡಿರುವ ಬಿ.ವೈ. ವಿಜಯೇಂದ್ರ, ಪಕ್ಷದ ಹಿರಿಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿ ಆಗಸ್ಟ್ 17ರಂದು ಭಾನುವಾರ ಧರ್ಮಸ್ಥಳಕ್ಕೆ ಹೋಗುತ್ತೇವೆ. ಆದರೆ ಬಿಜೆಪಿ ಕಾರ್ಯಕರ್ತರಾಗಿ ಅಲ್ಲ ಮಂಜುನಾಥೇಶ್ವರನ ಭಕ್ತರಾಗಿ ಹೋಗುವುದಾಗಿ ತಿಳಿಸಿದ್ದಾರೆ.

Previous articleನಮ್ಮ ಮೆಟ್ರೋ ಹಳದಿ ಮಾರ್ಗ, ಬೆಂಗಳೂರಿಗೆ ಬಂತು 4ನೇ ರೈಲು
Next articleಕನ್ನಡ ರ‍್ಯಾಪ್‌ ಹಾಡಿನಲ್ಲಿ ಚಂದನ್ ಶೆಟ್ಟಿ ಜೊತೆ ಕ್ರಿಸ್‌ ಗೇಲ್‌‌

LEAVE A REPLY

Please enter your comment!
Please enter your name here