ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ವಿಶ್ವದ ಅತ್ಯಂತ ವಿಶ್ವಾಸಾರ್ಹ ಮತ್ತು ನಂಬಿಕಸ್ಥ ಜನನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಯುಎಸ್ ಮೂಲದ ಮಾರ್ನಿಂಗ್ ಕನ್ಸಲ್ಟ್ ಸಮೀಕ್ಷೆಯಲ್ಲಿ ವಿವಿಧ ರಾಷ್ಟ್ರಗಳಲ್ಲಿ ಸಾವಿರಾರು ಜನರ ಜೊತೆ ಸಂದರ್ಶನಗಳ ಆಧಾರದ ಮೇಲೆ ವಿಶ್ವ ನಾಯಕರ ಪಟ್ಟಿ ಮಾಡಲಾಗಿದೆ. ಮೋದಿ 75 ಅಂಕಗಳನ್ನು ಪಡೆದು, ವಿಶ್ವಾಸಾರ್ಹ ಜಾಗತಿಕ ನಾಯಕರಾಗಿದ್ದಾರೆ.
ಜುಲೈ 4 ರಿಂದ 10ರ ನಡುವೆ ನಡೆದ ಸಮೀಕ್ಷೆಯಲ್ಲಿ, ಶೇ 75 ಅನುಮೋದನೆ ರೇಟಿಂಗ್‌ನೊಂದಿಗೆ ಮೋದಿ ಜಾಗತಿಕ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಮಾರ್ನಿಂಗ್ ಕನ್ಸಲ್ಟ್‌ನ ಇತ್ತೀಚಿನ ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಪ್ರಕಾರ, ಭಾರತದ ಪ್ರಧಾನ ಮಂತ್ರಿಯವರು ವಿಶ್ವದ ಅತ್ಯಂತ ವಿಶ್ವಾಸಾರ್ಹ ನಾಯಕರು.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಬಿಜೆಪಿಯ ಅಮಿತ್ ಮಾಳವೀಯ “ಒಂದು ಶತಕೋಟಿಗೂ ಹೆಚ್ಚು ಭಾರತೀಯರಿಂದ ಪ್ರೀತಿಸಲ್ಪಟ್ಟ ಮತ್ತು ಪ್ರಪಂಚದಾದ್ಯಂತ ಗೌರವಿಸಲ್ಪಟ್ಟ ಪ್ರಧಾನಿ ಮೋದಿ, ವಿಶ್ವದ ಅತ್ಯಂತ ವಿಶ್ವಾಸಾರ್ಹ ನಾಯಕರಾಗಿದ್ದಾರೆ. ಭಾರತ ಸುರಕ್ಷಿತ ಕೈಯಲ್ಲಿದೆ,” ಎಂದಿದ್ದಾರೆ.
ಮಾರ್ನಿಂಗ್ ಕನ್ಸಲ್ಟ್ ಯುಎಸ್ ಮೂಲದ ವ್ಯವಹಾರ ಗುಪ್ತಚರ ಮತ್ತು ಡೇಟಾ ವಿಶ್ಲೇಷಣಾ ಕಂಪನಿಯಾಗಿದೆ. ಮಾರ್ನಿಂಗ್ ಕನ್ಸಲ್ಟ್ ಸಮೀಕ್ಷೆಯು ವಿವಿಧ ರಾಷ್ಟ್ರಗಳಲ್ಲಿ ಸಾವಿರಾರು ಜನರೊಂದಿಗೆ ಸಂದರ್ಶನಗಳ ಆಧಾರದ ಮೇಲೆ ವಿಶ್ವ ನಾಯಕರ, ವಿಶೇಷವಾಗಿ ಪ್ರಜಾಪ್ರಭುತ್ವ ರಾಷ್ಟ್ರಗಳ ಸಾರ್ವಜನಿಕ ಅನುಮೋದನೆ ರೇಟಿಂಗ್‌ಗಳನ್ನು ಅಳೆಯುತ್ತದೆ. ಸಮೀಕ್ಷೆ ನಡೆಸಿದ ಪ್ರತಿ ನಾಲ್ಕು ಜನರಲ್ಲಿ ಮೂವರು ಜನರು ಪ್ರಜಾಪ್ರಭುತ್ವ ನಾಯಕರಾಗಿ ಮೋದಿಯ ಬಗ್ಗೆ ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
2021ರಿಂದಲೂ ಮೋದಿಯವರು ಮಾರ್ನಿಂಗ್ ಕನ್ಸಲ್ಟ್‌ನ ಶ್ರೇಯಾಂಕದಲ್ಲಿ ನಿರಂತರವಾಗಿ ಅಗ್ರಸ್ಥಾನವನ್ನು ಕಾಯ್ದಿರುವುದು ಗಮನಾರ್ಹ. 2022ರ ಆರಂಭದಲ್ಲಿ ಶೇ 71.2, 2023ರಲ್ಲಿ ಏಪ್ರಿಲ್, ಸೆಪ್ಟೆಂಬರ್ ಮತ್ತು ಡಿಸೆಂಬರ್‌ನ ಸಮೀಕ್ಷೆಯಲ್ಲಿ ಶೇ 76, 2024ರ ಫೆಬ್ರವರಿಯಲ್ಲಿ ಶೇ 78ರಷ್ಟು ರೇಟಿಂಗ್ ಮೋದಿ ಪಡೆದಿದ್ದರು.
ಈಗ ನರೇಂದ್ರ ಮೋದಿ ಶೇ. 75ರಷ್ಟು ರೇಟಿಂಗ್‌ನೊಂದಿಗೆ ಜಾಗತಿಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ದಕ್ಷಿಣ ಕೊರಿಯಾದ ಲೀ ಜೇಮ್ಯುಂಗ್ (ಶೇ. 59) ದ್ವೀತಿಯ ಸ್ಥಾನ ಹಾಗೂ ಅರ್ಜೆಂಟೀನಾದ ಜೇವಿಯರ್ ಮಿಲೀ (ಶೇ. 57) ಮೂರನೇ ಸ್ಥಾನದಲ್ಲಿದ್ದಾರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ. 44 ರೊಂದಿಗೆ 8ನೇ ಸ್ಥಾನದಲ್ಲಿದ್ದಾರೆ.
2023ರಲ್ಲಿ ಇಂಡಿಯಾ ಔಟ್ ಅಭಿಯಾನ ಮೂಲಕ ಮಾಲ್ಡೀವ್ಸ್ ಅಧ್ಯಕ್ಷರಾಗಿದ್ದ ಮೊಹಮ್ಮದ್ ಮುಯಿಝು ಭಾರತದ ಜತೆ ಪ್ರವಾಸೋದ್ಯಮ ವಿಚಾರದಲ್ಲಿ ಕಾದಾಟಕ್ಕಿಳಿದು ದ್ವಿಪಕ್ಷೀಯ ಸಂಬಂಧ ಕಡಿತಕ್ಕೂ ಮುಂದಾಗಿದ್ದರು, ಆದರೆ ಈಗ ಮಾಲ್ಡೀವ್ಸ್ ಇಂದು 60ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ರೆಡ್ ಕಾರ್ಪೆಟ್ ಮೂಲಕ ಸ್ವಾಗತ ಮಾಡಿದ್ದು ಸಹ ನಾಯಕತ್ವದ ಗುಣವನ್ನು ತೋರುತ್ತದೆ.