Compassionate Job: ಅನುಕಂಪ ಆಧಾರಿತ ನೌಕರಿ, ಮಾರ್ಗಸೂಚಿಗಳು

0
69

ಬೆಂಗಳೂರು: ಅನುಕಂಪ ಆಧಾರಿತ ನೇಮಕಾತಿಯಲ್ಲಿ ವಿಳಂಬವಾಗುತ್ತಿದೆ. ಆದ್ದರಿಂದ ಕರ್ನಾಟಕ ಹೈಕೋರ್ಟ್ ಈ ಮಾದರಿಯ ಎಲ್ಲಾ ಅರ್ಜಿಗಳನ್ನು 90 ದಿನದೊಳಗೆ ವಿಲೇವಾರಿ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅಲ್ಲದೇ ಅನುಕಂಪ ಆಧಾರಿತ ನೌಕರಿಗೆ ಮಾರ್ಗಸೂಚಿಯನ್ನು ನಿಗದಿ ಮಾಡಿದೆ.

ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ಜವಾನನ ಕುಟುಂಬಕ್ಕೆ ಅನುಕಂಪ ಆಧಾರಿತ ನೌಕರಿ ನೀಡುವಂತೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಆದೇಶಿಸಿತ್ತು.

ಈ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಮತ್ತು ನ್ಯಾಯಮೂರ್ತಿ ಕೆ.ಎಸ್.ಹೇಮಲೇಖಾ ಅವರಿದ್ದ ವಿಭಾಗೀಯ ಪೀಠ ಆದೇಶವನ್ನು ನೀಡಿದೆ.

ಮಾರ್ಗಸೂಚಿಗಳು: ಕರ್ನಾಟಕ ಸರ್ಕಾರ ಸಲ್ಲಿಕೆ ಮಾಡಿದ್ದ ಮೇಲ್ಮನವಿ ವಜಾಗೊಳಿಸಿದ ಕೋರ್ಟ್ ಅನುಕಂಪ ಆಧಾರಿತ ನೌಕರಿಗಾಗಿ ಅರ್ಜಿ ಸಲ್ಲಿಸಿದ ಬಳಿಕವೂ ಅವುಗಳ ವಿಲೇವಾರಿ ವಿಳಂಬದಿಂದ ಅವಲಂಬಿತರಿಗೆ ಅನಾನುಕೂಲವಾಗಿದೆ ಎಂದು ಹೇಳಿದೆ.

2017ರಲ್ಲಿ ಕೆಎಟಿ ನೀಡಿದ ಆದೇಶದಂತೆ 8 ವಾರಗಳಲ್ಲಿ ಮೃತರ ಪುತ್ರ ಮಹಬೂಬ್‌ಗೆ ಅನುಕಂಪ ಆಧಾರಿತ ನೌಕರಿಯನ್ನು ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದೆ. ಅಲ್ಲದೇ ಅನುಕಂಪ ಆಧಾರಿತ ನೌಕರಿಗೆ ಬರುವ ಅರ್ಜಿಗಳನ್ನು 90 ದಿನದಲ್ಲಿ ವಿಲೇವಾರಿ ಮಾಡಬೇಕು. ಅರ್ಜಿ ತಿರಸ್ಕಾರ ಮಾಡಿದರೆ ಅದಕ್ಕೆ ಸಕಾರಣ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದೆ.

  • ಅನುಕಂಪ ಆಧಾರಿತ ನೌಕರಿಗಾಗಿ ಅಧಿಕಾರಿಗಳು 30 ದಿನಗಳ ಒಳಗೆ ಅರ್ಜಿಯನ್ನು ಸ್ವೀಕಾರ ಮಾಡಬೇಕು. ಅರ್ಜಿ ಸ್ವೀಕಾರ ಮಾಡಿದ 90 ದಿನಗಳಲ್ಲಿ ಅದರ ಬಗ್ಗೆ ಸ್ಪಷ್ಟವಾದ ತೀರ್ಮಾನ ಕೈಗೊಳ್ಳಬೇಕು.
  • ಸರಿಯಾಗಿ ಅರ್ಜಿ ಸಲ್ಲಿಕೆ ಮಾಡಲು ಕುಟುಂಬದ ಅವಲಂಬಿತರಿಗೆ ಸಹಾಯ ಮಾಡಬೇಕು. ಅರ್ಜಿಗಳನ್ನು ತಿರಸ್ಕಾರ ಮಾಡಿದರೆ ಸಮಂಜಸವಾದ ಕಾರಣವನ್ನು ವಿವರಣೆ ಸಹಿತ ತಿಳಿಸಬೇಕು.
  • ಅನುಕಂಪ ಆಧಾರಿತ ನೌಕರಿಗಾಗಿ ಏಕರೂಪದ ಪ್ರಮಾಣಿತಾ ಕಾರ್ಯಾಚರಣೆ ವಿಧಾನವನ್ನು ಜಾರಿಗೊಳಿಸಬೇಕು. ಅನುಕಂಪ ಆಧಾರಿತ ನೇಮಕಾತಿ ಕುರಿತು ಅಧಿಕಾರಿಗಳಿಗೆ ತರಬೇತಿಯನ್ನು ಕೊಡಬೇಕು.

ಏನಿದು ಪ್ರಕರಣ?; ಜೇವರ್ಗಿ ತಹಶೀಲ್ದಾರ್ ಕಚೇರಿಯಲ್ಲಿ ಜವಾನರಾಗಿದ್ದ ರಾಜಾ ಪಟೇಲ್ ಬಂಡಾ ಡಿಸೆಂಬರ್ 16, 2014ರಂದು ನಿಧನರಾದರು. 2015ರ ಜನವರಿ 2ರಂದು ಪಿಂಚಣಿ ಮತ್ತು ನಾಲ್ವರು ಪುತ್ರರಲ್ಲಿ ಒಬ್ಬರಿಗೆ ಅನುಕಂಪ ಆಧಾರಿತ ನೌಕರಿ ನೀಡಬೇಕು ಎಂದು ಮೃತನ ಪತ್ನಿ ಅರ್ಜಿ ಸಲ್ಲಿಕೆ ಮಾಡಿದರು.

2015ರ ಅಕ್ಟೋಬರ್‌ನಲ್ಲಿ ವಯಸ್ಸಿನ ಮಿತಿ ಕಾರಣಕ್ಕೆ ಅರ್ಜಿಯನ್ನು ತಿರಸ್ಕಾರ ಮಾಡಲಾಗಿತ್ತು. 2017ರ ಫೆಬ್ರವರಿಯಲ್ಲಿ ಮೃತನ ದ್ವಿತೀಯ ಪುತ್ರ ಮಹಬೂಬ್ ತಾಯಿಯ ಆರಂಭಿಕ ಅರ್ಜಿ ಉಲ್ಲೇಖ ಮಾಡಿ ಮತ್ತೊಂದು ಅರ್ಜಿ ಸಲ್ಲಿಸಿದರು.

ಆದರೆ ಈ ಅರ್ಜಿಯನ್ನು ಕರ್ನಾಟಕ ನಾಗರೀಕ ಸೇವೆಗಳ ಅನುಕಂಪದ ಆಧಾರದ ಮೇಲೆ ನೇಮಕಾತಿ ನಿಯಮ-1996 ನಿಯಮ 5ನ್ನು ಉಲ್ಲೇಖಿಸಿ ಅರ್ಜಿಯನ್ನು ತಿರಸ್ಕಾರ ಮಾಡಲಾಯಿತು. ಆದ್ದರಿಂದ ಅರ್ಜಿದಾರರು ಕೆಎಟಿ ಮೊರೆ ಹೋಗಿದ್ದರು. ಕಲಬುರಗಿ ಕೆಎಟಿ ಪೀಠ ಅರ್ಜಿಯನ್ನು ಮಾನ್ಯ ಮಾಡಿ ಉದ್ಯೋಗ ನೀಡುವಂತೆ ಆದೇಶಿಸಿತ್ತು. ಇದನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಸರ್ಕಾರ ಪ್ರಶ್ನೆ ಮಾಡಿತ್ತು.

Previous articleLPG ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ: ಆಗಸ್ಟ್ 1ರಿಂದಲೇ ಜಾರಿ
Next articleಸಂಸದೆ ಪ್ರಭಾ ಮಲ್ಲಿಕಾರ್ಜುನ್‌ಗೆ ಬಿಗ್ ರಿಲೀಫ್ ಕೊಟ್ಟ ಕೋರ್ಟ್

LEAVE A REPLY

Please enter your comment!
Please enter your name here