KN Rajanna: ಸಹಕಾರ ಸಚಿವ ಕೆ.ಎನ್.ರಾಜಣ್ಣ ರಾಜೀನಾಮೆ

0
102

ಬೆಂಗಳೂರು: ಕರ್ನಾಟಕ ರಾಜ್ಯದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಮಧುಗಿರಿ ಶಾಸಕ, ಸಹಕಾರ ಸಚಿವ ಕೆ.ಎನ್.ರಾಜಣ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಿದ್ದರಾಮಯ್ಯ ಆಪ್ತರಾದ ರಾಜಣ್ಣ ಹಲವು ಬಾರಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.

ಕರ್ನಾಟಕದ ವಿಧಾನಮಂಡಲದ ಮುಂಗಾರು ಅಧಿವೇಶ ಸೋಮವಾರ ಆರಂಭವಾಗಿದೆ. ಮೊದಲ ದಿನವೇ ಕಾಂಗ್ರೆಸ್‌ನಲ್ಲಿ ಈ ಬೆಳವಣಿಗೆ ನಡೆದಿದೆ. ಮೂಲಗಳ ಮಾಹಿತಿ ಪ್ರಕಾರ ಕೆ.ಎನ್.ರಾಜಣ್ಣ ರಾಜೀನಾಮೆ ಪಡೆಯುವಂತೆ ಹೈಕಮಾಂಡ್ ಸೂಚನೆ ನೀಡಿದೆ. ಕಾಂಗ್ರೆಸ್‌ನ ಈ ಬೆಳವಣಿಗೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಹೊಸ ಅಸ್ತ್ರ ನೀಡಿದಂತೆ ಆಗಿದೆ.

ಸದ್ಯ ಸಚಿವ ಕೆ.ಎನ್.ರಾಜಣ್ಣ ವಿಧಾನಸೌಧದಲ್ಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಲು ತೆರಳುತ್ತಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ ಸಿದ್ದರಾಮಯ್ಯ ಜೊತೆ ಇದ್ದಾರೆ. ಹೈಕಮಾಂಡ್ ಈಗಾಗಲೇ ಸಿದ್ದರಾಮಯ್ಯಗೆ ಸಚಿವ ರಾಜಣ್ಣ ರಾಜೀನಾಮೆ ಪಡೆಯಿರಿ ಎಂದು ಸಂದೇಶ ನೀಡಿದೆ ಎಂಬ ಮಾಹಿತಿ ಇದೆ.

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಲೋಕಸಭೆ ಚುನಾವಣೆಯಲ್ಲಿ ಮತ ಕಳ್ಳತನವಾಗಿದೆ ಎಂದು ಆರೋಪ ಮಾಡಿದ್ದರು. ಆಗ ಸಚಿವ ಕೆ.ಎನ್.ರಾಜಣ್ಣ, “ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೇ ಮತದಾರರ ಪಟ್ಟಿ ಸಿದ್ಧಪಡಿಸಲಾಗಿದೆ. ಆಗ ಎಲ್ಲರು ಕಣ್ಣುಮುಚ್ಚಿ ಕುಳಿತಿದ್ದರೇ?” ಎಂದು ಪ್ರಶ್ನೆ ಮಾಡಿದ್ದರು.

ರಾಹುಲ್ ಗಾಂಧಿ ಬೆಂಗಳೂರಿಗೆ ಬಂದು ಮತ ಕಳ್ಳತನದ ವಿರುದ್ಧ ಬೃಹತ್ ಪ್ರತಿಭಟನೆ ಮಾಡಿದ್ದರು. ಆದರೆ ಸಚಿವ ರಾಜಣ್ಣ ಹೇಳಿಕೆ ಕಾಂಗ್ರೆಸ್‌ ಪಕ್ಷಕ್ಕೆ ಮುಜುಗರ ತಂದಿತ್ತು. ಈ ಹೇಳಿಕೆ ಬಳಿಕವೇ ಹೈಕಮಾಂಡ್‌ ರಾಜಣ್ಣ ರಾಜೀನಾಮೆಗೆ ಸೂಚನೆ ನೀಡಿತ್ತು ಎಂಬ ಮಾಹಿತಿ ಇದೆ.

ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲ ಸಿಎಂ ಸಿದ್ದರಾಮಯ್ಯಗೆ ಕರೆ ಮಾಡಿ ರಾಜೀನಾಮೆ ಪಡೆಯುವಂತೆ ಸೂಚನೆ ನೀಡಿದ್ದರು. ಆದ್ದರಿಂದ ಸೋಮವಾರ ಮಧ್ಯಾಹ್ನ ಸಚಿವ ರಾಜಣ್ಣ ರಾಜೀನಾಮೆ ಸುದ್ದಿ ಹಬ್ಬಿತ್ತು. ಕೆ.ಎನ್.ರಾಜಣ್ಣ ಸಿದ್ದರಾಮಯ್ಯ ಭೇಟಿಯಾಗಿ ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡಿದ್ದಾರೆ.

ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ ಬಳಿಕ ಅವರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್‌ಗೆ ದೂರು ನೀಡಲಾಗಿತ್ತು. ಹಲವಾರು ಕಾರ್ಯಕರ್ತರು ಈ ದೂರಿನ ಪ್ರತಿಗೆ ಸಹಿ ಹಾಕಿದ್ದರು. ರಾಜಣ್ಣರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಸಹ ದೂರಿನಲ್ಲಿ ಮನವಿ ಮಾಡಲಾಗಿತ್ತು.

ವಿಧಾನಸೌಧದಲ್ಲಿ ಈ ಬೆಳವಣಿಗೆ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಾಜಣ್ಣ, “ಸಿಎಂ ಜೊತೆ ಚರ್ಚೆ ಮಾಡುತ್ತೇನೆ, ಅಲ್ಲಿಯವರೆಗೂ ನಾನು ಮಾತನಾಡುವುದಿಲ್ಲ. ಸಂಜೆ ಎಲ್ಲವನ್ನೂ ಹೇಳುತ್ತೇನೆ” ಎಂದರು.

ಕ್ಯಾತ್ಸಂದ್ರ ಎನ್.ರಾಜಣ್ಣ 2023ರ ವಿಧಾನಸಭೆ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯ ಮಧುಗಿರಿ ಕ್ಷೇತ್ರದಲ್ಲಿ 91,166 ಮತಗಳನ್ನು ಪಡೆದು ಜಯಗಳಿಸಿದ್ದಾರೆ. 75 ವರ್ಷದ ಹಿರಿಯ ನಾಯಕನನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟಕ್ಕೆ ಸೇರಿಸಿಕೊಂಡಿದ್ದರು, ಸಹಕಾರ ಖಾತೆ ಹೊಣೆಯನ್ನು ಅವರಿಗೆ ನೀಡಲಾಗಿತ್ತು.

ಈ ವರ್ಷದ ಮೇ ತಿಂಗಳಿನಲ್ಲಿ ಸಚಿವ ಕೆ.ಎನ್.ರಾಜಣ್ಣ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದರು. ನನಗೆ 75 ವರ್ಷವಾಗಿದೆ, ಇನ್ನು ಮುಂದೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಸಹಕಾರ ಕ್ಷೇತ್ರದಲ್ಲಿ ಸಕ್ರಿಯನಾಗಿ ಇರುತ್ತೇನೆ ಎಂದು ಅವರು ಘೋಷಣೆ ಮಾಡಿದ್ದರು.

ಕೆಲವು ದಿನಗಳ ಹಿಂದೆ ಕೆ.ಎನ್.ರಾಜಣ್ಣ 75ನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹ ಪಾಲ್ಗೊಂಡಿದ್ದರು.

Previous articleಇನ್ಫೋಸಿಸ್ ಬಿಪಿಎಂ ಟೆಕ್‌ ನೇಮಕಾತಿ: ನೇರ ಸಂದರ್ಶನ ವಿವರಗಳು
Next articleಕರ್ನಾಟಕ ಮುಂಗಾರು ಅಧಿವೇಶನ: 18 ಶಾಸಕರ ಅಮಾನತು ವಾಪಸ್

LEAVE A REPLY

Please enter your comment!
Please enter your name here