ಬೆಂಗಳೂರು: ಗ್ರೇಟರ್ ಬೆಂಗಳೂರು…ಇದು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಹುದೊಡ್ಡ, ದೂರದೃಷ್ಟಿಯ ಯೋಜನೆ. ಬೆಂಗಳೂರು ನಗರದ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಣೆ ಮಾಡುವ ಈ ವಿಚಾರದಲ್ಲಿ ಈಗ ಸರ್ಕಾರ ಪ್ರಮುಖ ಹೆಜ್ಜೆ ಇಟ್ಟಿದೆ. ಬೆಂಗಳೂರು ನಗರ 5 ನಗರ ಪಾಲಿಕೆಯಾಗಿ ವಿಭಾಗವಾಗಲಿದೆ.
ಕರ್ನಾಟಕ ಸರ್ಕಾರ ಶನಿವಾರ ಗ್ರೇಟರ್ ಬೆಂಗಳೂರು ಅಡಿ 5 ನಗರ ಪಾಲಿಕೆಯಾಗಿ ವಿಭಾಗ ಮಾಡಿ ಅಧಿಸೂಚನೆಯನ್ನು ಪ್ರಕಟಿಸಿದೆ. ಇದಕ್ಕೆ ಬರುವ ಆಕ್ಷೇಪಣೆಗಳನ್ನು ಪರಿಶೀಲನೆ ಮಾಡಿದ ಬಳಿಕ ಅಂತಿಮ ಆದೇಶವನ್ನು ಪ್ರಕಟಿಸಲಾಗುತ್ತದೆ.
5 ಪಾಲಿಕೆಗಳು: ಸರ್ಕಾರದ ಅಧಿಸೂಚನೆ ಪ್ರಕಾರ ಇನ್ನು ಮುಂದೆ ಬೆಂಗಳೂರು ನಗರ 5 ನಗರ ಪಾಲಿಕೆಯಾಗಲಿದೆ.
- * ಬೆಂಗಳೂರು ಪಶ್ಚಿಮ ನಗರ ಪಾಲಿಕೆ
* ಬೆಂಗಳೂರು ದಕ್ಷಿಣ ನಗರ ಪಾಲಿಕೆ
* ಬೆಂಗಳೂರು ಉತ್ತರ ನಗರ ಪಾಲಿಕೆ
* ಬೆಂಗಳೂರು ಪೂರ್ವ ನಗರ ಪಾಲಿಕೆ
* ಬೆಂಗಳೂರು ಕೇಂದ್ರ ನಗರ ಪಾಲಿಕೆ
ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ, 2024ರ ಅಡಿ ಪ್ರದತ್ತವಾದ ಅಧಿಕಾರದ ಅನ್ವಯ ಈ ಅಧಿಸೂಚನೆ ಪ್ರಕಟಿಸಿದೆ. ಜನಸಂಖ್ಯೆಯ ವಿಸ್ತೀರ್ಣ, ಜನಸಂಖ್ಯಾ ಸಾಂದ್ರತೆ, ಉತ್ಪತ್ತಿಯಾಗುವ ಆದಾಯ, ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗದ ಶೇಕಡಾವಾರು, ಆರ್ಥಿಕ ಪ್ರಾಮುಖ್ಯತೆ, ಪ್ರದೇಶದ ಮೂಲಸೌಕರ್ಯ ಹೀಗೆ ವಿವಿಧ ಅಂಶಗಳ ಆಧಾರದ ಮೇಲೆ 5 ನಗರ ಪಾಲಿಕೆ ರಚನೆಗೆ ಅಧಿಸೂಚಿಸಿದೆ.
ಸದ್ಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದೆ. ಆದರೆ ಅದು ಇನ್ನು ಇತಿಹಾಸದ ಪುಟ ಸೇರಲಿದೆ. ಬಿಬಿಎಂಪಿಯನ್ನು ವಿಭಾಗ ಮಾಡಬೇಕು. ಸುಗಮವಾಗಿ ಆಡಳಿತ ನಡೆಸಲು ಪಾಲಿಕೆ ವಿಭಜನೆ ಅನಿವಾರ್ಯ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಪಾಲಿಕೆ ವಿಭಜನೆಗಾಗಿಯೇ ಕರ್ನಾಟಕ ಸರ್ಕಾರ ಬಿಬಿಎಂಪಿ ಚುನಾವಣೆಯನ್ನು ಮುಂದೂಡತ್ತಲೇ ಬಂದಿತ್ತು.
5 ಪಾಲಿಕೆ ರಚನೆಯಾದ ಬಳಿಕ ವಾರ್ಡ್‌ವಾರು ಚುನಾವಣೆಗಳು ನಡೆಯಲಿವೆ. ಸಚಿವ ಸಂಪುಟ ಸಭೆಯಲ್ಲಿ ಗ್ರೇಟರ್ ಬೆಂಗಳೂರು ಅಡಿ 5 ನಗರ ಪಾಲಿಕೆಯನ್ನು ರಚನೆ ಮಾಡಲು ಅನುಮೋದನೆ ನೀಡಲಾಗಿತ್ತು. ಮೊದಲು 3 ನಗರ ಪಾಲಿಕೆ ರಚನೆಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಬಳಿಕ ಸರ್ಕಾರ 5 ನಗರ ಪಾಲಿಕೆಗೆ ಅನುಮೋದನೆ ಕೊಟ್ಟಿತ್ತು.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಈಗಿರುವ ಪ್ರದೇಶಗಳನ್ನು ಹಾಗೆಯೇ ಉಳಿಸಿಕೊಂಡು 5 ನಗರ ಪಾಲಿಕೆ ರಚನೆ ಮಾಡಲಾಗುತ್ತದೆ. ಗ್ರೇಟರ್ ಬೆಂಗಳೂರಿಗೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿರುತ್ತಾರೆ. ಬೆಂಗಳೂರು ನಗರದಲ್ಲಿ ಮುಂದೆ ಕೈಗೊಳ್ಳುವ ಎಲ್ಲಾ ಕಾಮಗಾರಿಗಳು ಇದರ ಅಡಿಯಲ್ಲಿಯೇ ಬರುತ್ತವೆ.
ಈ ಅಧಿಸೂಚನೆಗೆ ಬರುವ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮವಾಗಿ ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಿಸಿದ ಬಳಿಕ ಇದು ಜಾರಿಗೆ ಬರಲಿದೆ. ಆಗಸ್ಟ್ 11ರಿಂದ ಕರ್ನಾಟಕ ವಿಧಾನ ಮಂಡಲದ ಮುಂಗಾರು ಅಧಿವೇಶನ ನಡೆಯಲಿದ್ದು, ಆಗ 5 ನಗರ ಪಾಲಿಕೆಗಳ ಕುರಿತು ಚರ್ಚೆ ನಡೆಯಲಿದೆ.
5 ನಗರ ಪಾಲಿಕೆ ಕುರಿತಾಗಿ ಆಕ್ಷೇಪಣೆಗಳಿದ್ದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಕೊಠಡಿ ಸಂಖ್ಯೆ: 436, 4ನೇ ಮಹಡಿ, ವಿಕಾಸ ಸೌಧ, ಡಾ.ಬಿ.ಆರ್. ಅಂಬೇಡ್ಕರ್ ವೀದಿ, ಬೆಂಗಳೂರು-560001 ವಿಳಾಸಕ್ಕೆ ಸಲ್ಲಿಸಬಹುದಾಗಿದೆ ಎಂದು ಅಧಿಸೂಚನೆ ಹೇಳಿದೆ.