ಬೆಂಗಳೂರು: ಕರ್ನಾಟಕದ ಸರ್ಕಾರಿ ನೌಕರರಿಗೆ ಪ್ರಮುಖವಾದ ಮಾಹಿತಿಯೊಂದಿದೆ. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (ಕೆಎಎಎಸ್) ಜಾರಿ ಕುರಿತು ಸರ್ಕಾರ ಅಂತಿಮ ತೀರ್ಮಾನವನ್ನು ಕೈಗೊಂಡಿದೆ.
ಕರ್ನಾಟಕದ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ನಗದು ರಹಿತ ಚಿಕಿತ್ಸೆ ಒದಗಿಸಲು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಘೋಷಣೆ ಮಾಡಲಾಗಿತ್ತು. ಆದರೆ ಈ ಯೋಜನೆಗೆ ಇನ್ನೂ ಅಧಿಕೃವಾಗಿ ಚಾಲನೆ ನೀಡಿಲ್ಲ.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಹೇಗಿರಬೇಕು?, ಸರ್ಕಾರಿ ನೌಕರರ, ಅವಲಂಬಿತ ನೋಂದಣಿ, ಆಸ್ಪತ್ರೆಗಳ ವಿವರ ಮುಂತಾದ ಮಾಹಿತಿಯನ್ನು ಈಗಾಗಲೇ ನೀಡಲಾಗಿದೆ. ಯಾವ-ಯಾವ ಚಿಕಿತ್ಸೆಗಳು ಯೋಜನೆ ವ್ಯಾಪ್ತಿಗೆ ಒಳಪಡುತ್ತದೆ ಎಂದು ಮಾಹಿತಿ ಕೊಡಲಾಗಿದೆ. ಆದರೆ ಯೋಜನೆ ಲೋಕಾರ್ಪಣೆಗೊಂಡಿಲ್ಲ.
ಯೋಜನೆ ಲೋಕಾರ್ಪಣೆ: ಕರ್ನಾಟಕದ ಸರ್ಕಾರಿ ನೌಕರರು ರಾಜ್ಯ ಸರ್ಕಾರದ ಮೇಲೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಲೋಕಾರ್ಪಣೆ ಮಾಡುವಂತೆ ಒತ್ತಡ ಹೇರುತ್ತಿದ್ದರು. ಸದ್ಯದ ಮಾಹಿತಿ ಪ್ರಕಾರ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಆಗಸ್ಟ್ ಮೊದಲ ವಾರದಲ್ಲಿ ಜಾರಿಯಾಗಲಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ನಿಯೋಗದ ಜೊತೆ ಸುವರ್ಣ ಆರೋಗ್ಯ ಟ್ರಸ್ಟ್ ಕಾರ್ಯಕಾರಿ ನಿರ್ದೇಶಕ ಉಜ್ವಲ್ ಕುಮಾರ್ ಘೋಷ್ ಭೇಟಿ ಮಾಡಿ, ಚರ್ಚೆ ನಡೆಸಿದ್ದಾರೆ.
ಈ ಸಭೆಯಲ್ಲಿ ನಿರ್ದೇಶಕರು ಮುಖ್ಯಮಂತ್ರಿಗಳ ದಿನಾಂಕವನ್ನು ಪಡೆದು ಆಗಸ್ಟ್ ಮೊದಲ ವಾರದಲ್ಲಿ ಕೆಎಎಸ್‌ಎಸ್ ಯೋಜನೆಯನ್ನು ಕಾರ್ಯಕ್ರಮ ನಡೆಸುವ ಮೂಲಕ ಲೋಕಾರ್ಪಣೆಗೊಳಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
ಅಲ್ಲದೇ ಆಗಸ್ಟ್ ಮೊದಲ ವಾರದಲ್ಲಿ ಆರೋಗ್ಯ ಸಂಜೀವಿನಿ ಯೋಜನೆಯನ್ನು ಎಲ್ಲಾ ಸರ್ಕಾರಿ ನೌಕರರಿಗೂ ಜಾರಿಗೊಳಿಸುವುದು, ನೌಕರರ ವಂತಿಗೆ ಹಣವನ್ನು ಆಗಸ್ಟ್ ತಿಂಗಳಿನಿಂದಲೇ ಕಟಾಯಿಸಲು ತೀರ್ಮಾನಿಸಲಾಗಿದೆ.
ಕರ್ನಾಟಕದ ಸರ್ಕಾರಿ ನೌಕರರು ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಜಾರಿಯ ಬಳಿಕ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಲೋಕಾರ್ಪಣೆ ಮಾಡಬೇಕು ಎಂದು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರು.
ಯೋಜನೆಯ ಮುಖ್ಯ ಉದ್ದೇಶಗಳು: ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಒದಗಿಸಲು ಈ ಯೋಜನೆಯನ್ನು ರೂಪಿಸಿದೆ.
ಉತ್ತಮ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆಯನ್ನು ಕೈಗೆಟುಕುವ ಬೆಲೆಯಲ್ಲಿ ಒದಗಿಸುವುದು. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯುವಾಗ ಅನುಭವಿಸುವ ತೊಂದರೆಗಳನ್ನು ಕಡಿಮೆ ಮಾಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಯೋಜನೆಗೆ ನೋಂದಾವಣೆಗೊಳ್ಳಲು ಸರ್ಕಾರಿ ನೌಕರರು ಹೆಆರ್‌ಎಂಎಸ್ ಸಂಖ್ಯೆ ಮೂಲಕ ಲಾಗಿನ್ ಆಗಬೇಕು ಮತ್ತು ಅಲ್ಲಿಂದ ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಹೊಸ ಬಳಕೆದಾರರು ಮೊದಲು ನೋಂದಾಯಿಸಿಕೊಳ್ಳಬೇಕು ಮತ್ತು ನಂತರ ಲಾಗಿನ್ ಆಗಬೇಕು.
ಅವಲಂಬಿತ ಸದಸ್ಯರ ಮಾಹಿತಿಯನ್ನು ತುಂಬಬೇಕು ಮತ್ತು ಅಗತ್ಯವಿದ್ದರೆ ತಿದ್ದುಪಡಿ ಮಾಡಬಹುದು. ಯೋಜನೆಯನ್ನು ಜಾರಿಗೊಳಿಸಲು ಈಗಾಗಲೇ ನೋಂದಣಿ ಪ್ರಕ್ರಿಯೆ ಜಾರಿಯಲ್ಲಿದೆ.