ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಕರ್ನಾಟಕ ಸರ್ಕಾರದ ಮುಂದೆ ಹೊಸ ಬೇಡಿಕೆ ಮುಂದಿಟ್ಟಿದ್ದಾರೆ. ಈ ಬೇಡಿಕೆ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ/ ಹೆಚ್ಚುವರಿ ವರ್ಗಾವಣೆ ಪ್ರಕ್ರಿಯೆಗಳನ್ನು ಕೈಗೊಳ್ಳುವ ಕುರಿತಾಗಿದೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಪಡಾಕ್ಷರಿ ಈ ಕುರಿತು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಬೇಡಿಕೆ ಏನು?: ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಕೌನ್ಸಿಲಿಂಗ್/ಹೆಚ್ಚುವರಿ ಶಿಕ್ಷಕರ ವರ್ಗಾವಣೆಗಾಗಿ ಉಲ್ಲೇಖದಂತೆ ಅಧಿಸೂಚನೆ ಹೊರಡಿಸಲಾಗಿದ್ದು, ವರ್ಗಾವಣೆ ಪ್ರಕ್ರಿಯೆ ಸಂದರ್ಭದಲ್ಲಿ ಈ ಕೆಳಕಂಡ ಅಂಶಗಳನ್ನು ಪರಿಗಣಿಸಿ ವರ್ಗಾವಣೆ ಪ್ರಕ್ರಿಯೆಗಳನ್ನು ಕೈಗೊಳ್ಳಲು ಮನವಿ ಸಲ್ಲಿಕೆ ಮಾಡಲಾಗಿದೆ.
- ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳು ಅನುಷ್ಠಾನವಾಗದೇ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಹೆಚ್ಚುವರಿಯಾಗುತ್ತಿದ್ದಾರೆ.
- ಆದ್ದರಿಂದ, ಪ್ರಾಥಮಿಕ ಶಾಲಾ ಶಿಕ್ಷಕರ ಹೆಚ್ಚುವರಿ ವರ್ಗಾವಣೆ ಪ್ರಕ್ರಿಯೆಯ ಮ್ಯಾಪಿಂಗ್ ಸಂದರ್ಭದಲ್ಲಿ ಆಯಾ ತಾಲ್ಲೂಕಿನ ಶಿಕ್ಷಕರನ್ನು ಆದಷ್ಟು ಆಯಾ ತಾಲ್ಲೂಕಿನ ವ್ಯಾಪ್ತಿಯಲ್ಲಿಯೇ ಸ್ಥಳನಿಯುಕ್ತಿಗೊಳಿಸಲು ಅನುಕೂಲವಾಗುವಂತೆ ಹುದ್ದೆಗಳನ್ನು ತೋರಿಸುವುದು.
- ರಾಜ್ಯದಲ್ಲಿ ಸಾಕಷ್ಟು ಜಿ.ಪಿ.ಟಿ. ಹುದ್ದೆಗಳು ಖಾಲಿ ಇದ್ದು, ಇನ್ನೂ ಭರ್ತಿಯಾಗಿರುವುದಿಲ್ಲ. ಸದರಿ ಹುದ್ದೆಗಳನ್ನು ಭರ್ತಿ ಮಾಡದೇ ಇದ್ದು ಹಾಗೂ ಹಾಲಿ ಇರುವ ಪಿ.ಎಸ್.ಟಿ. ಶಿಕ್ಷಕರ ಹುದ್ದೆಗಳನ್ನು ಜಿ.ಪಿ.ಟಿ. ಹುದ್ದೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಈ ಕ್ರಮವನ್ನು ಕೈಬಿಟ್ಟು ಪಿ.ಎಸ್.ಟಿ. ಹುದ್ದೆಗಳನ್ನು ಯಥಾಸ್ಥಿತಿಯಲ್ಲಿಯೇ ಉಳಿಸುವುದು.
- 1 ರಿಂದ 5ನೇ ತರಗತಿಯವರೆಗೆ ಹಿಂದಿ ಭಾಷಾ ವಿಷಯ ಇಲ್ಲದೇ ಇರುವುದರಿಂದ ಹಿಂದಿ ಭಾಷಾ ಶಿಕ್ಷಕರು ಸಾಮಾನ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರನ್ನೂ ಸಹ ಸಾಮಾನ್ಯ ಶಿಕ್ಷಕರೆಂದು ಪರಿಗಣಿಸುವುದು.
- ಶಾಲೆಯಲ್ಲಿ ಹೆಚ್ಚುವರಿ ಎಂದು ಗುರುತಿಸಿದ ಶಿಕ್ಷಕರ ಬದಲಾಗಿ ಬೇರೆ ಯಾರಾದರೂ ಸ್ವ-ಇಚ್ಛೆಯಿಂದ ಹೆಚ್ಚುವರಿಯಾಗಿ ಸ್ಥಳಾಂತರ ಹೊಂದಲು ಇಚ್ಚಿಸಿದಲ್ಲಿ ಅಂತಹ ಶಿಕ್ಷಕರಿಗೆ ಮುಕ್ತ ಅವಕಾಶ ಕಲ್ಪಿಸುವುದು.
- ಶಿಕ್ಷಕರುಗಳು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾಗಿದ್ದಲ್ಲಿ ಸರ್ಕಾರಿ ಆದೇಶದಂತೆ ಹೆಚ್ಚುವರಿ ವರ್ಗಾವಣೆಯಿಂದ ವಿನಾಯಿತಿ ನೀಡುವುದು.
ಕರ್ನಾಟಕ ಸರ್ಕಾರ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ವೇಳೆಗೆ ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆ ನಡೆಸುತ್ತದೆ. ಈ ವರ್ಷ ಮೇ 29ರಿಂದಲೇ ವರ್ಗಾವಣೆ ಪ್ರಕ್ರಿಯೆಗಳು ಆರಂಭವಾಗಿದ್ದವು. ಒಂದು ಸ್ಥಳದಲ್ಲಿ ಕನಿಷ್ಠ 3 ವರ್ಷ ಪೂರೈಸಿದವರು ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಬಹುದು ಎಂದು ಸೂಚಿಸಲಾಗಿತ್ತು.
ಮೊದಲ ಹಂತದಲ್ಲಿ ಹೆಚ್ಚುವರಿ ಶಿಕ್ಷಕರ ಮರು ಹೊಂದಾಣಿಕೆ ನಡೆದಿದ್ದು, ನಂತರ ಶಿಕ್ಷಕರು, ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಕರು, ವಿಶೇಷ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆದಿತ್ತು. ಈ ವರ್ಗಾವಣೆ ಪ್ರಕಿಯೆ ಹೇಗೆ ನಡೆಯಬೇಕು? ಎಂದು ಶಿಕ್ಷಣ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿತ್ತು.
ಈಗ ರಾಜ್ಯ ಸರ್ಕಾರಿ ನೌಕರರ ಸಂಘ ಪುನಃ ಶಿಕ್ಷಕರ ವರ್ಗಾವಣೆ ಸಂದರ್ಭದಲ್ಲಿ ಗಮನಿಸಬೇಕಾದ ಅಂಶಗಳ ಕುರಿತು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಕೆ ಮಾಡಿದೆ.
ix317y