ಸಚಿವ ಸ್ಥಾನ ಇಲ್ಲ, ಸಿಎಲ್‌ಪಿ ಸಭೆಗೆ ಗೈರು: ಕೆ.ಎನ್.ರಾಜಣ್ಣ ಭಾವುಕ ಪೋಸ್ಟ್‌

0
73

ಬೆಂಗಳೂರು: ಸಚಿವ ಸ್ಥಾನವನ್ನು ಕಾಂಗ್ರೆಸ್ ಹೈಕಮಾಂಡ್ ನಾಯಕರ ಕೆಂಗಣ್ಣಿಗೆ ಗುರಿಯಾಗಿ ಕಳೆದುಕೊಂಡಿದ್ದಾರೆ ಮಧುಗಿರಿ ಕ್ಷೇತ್ರದ ಶಾಸಕ ಕೆ.ಎನ್.ರಾಜಣ್ಣ. ಆಪ್ತನನ್ನು ಉಳಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ ಪ್ರಯತ್ನಗಳು ಫಲ ಕೊಟ್ಟಿಲ್ಲ.

ಮುಂಗಾರು ಅಧಿವೇಶನದ ಮೊದಲ ದಿನವಾದ ಸೋಮವಾರ ವಿಧಾನಸೌಧದಲ್ಲಿಯೇ ಸಹಕಾರ ಸಚಿವರಾಗಿದ್ದ ಕೆ.ಎನ್.ರಾಜಣ್ಣ ರಾಜೀನಾಮೆ ನೀಡಿದ್ದರು, ರಾಜ್ಯಪಾಲರು ರಾಜೀನಾಮೆ ಅಂಗೀಕಾರ ಮಾಡಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಗೆ ಕೆ.ಎನ್.ರಾಜಣ್ಣ ಗೈರಾಗಿದ್ದರು.

ಮಧುಗಿರಿ ಕ್ಷೇತ್ರದಲ್ಲಿ ರಾಜಣ್ಣ ಬೆಂಬಲಿಗರು ಬೃಹತ್ ಪ್ರತಿಭಟನೆ ನಡೆಸಿದ್ದರು. ಮಧುಗಿರಿ ಬಂದ್ ಮಾಡಿ ಅವರನ್ನು ಸಂಪುಟಕ್ಕೆ ವಾಪಸ್ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದರು. ಆದರೆ ಹೈಕಮಾಂಡ್ ಖಡಕ್ ತೀರ್ಮಾನದ ಮುಂದೆ ಯಾವುದೇ ಒತ್ತಡ ಕೆಲಸ ಮಾಡುವುದಿಲ್ಲ ಎಂಬುದು ಸ್ಪಷ್ಟ.

ಮಾಜಿ ಸಚಿವರ ಪೋಸ್ಟ್: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ, “ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ” ಎಂದು ಕೆ.ಎನ್.ರಾಜಣ್ಣ ಆರೋಪ ಮಾಡಿದ್ದರು. ರಾಜಣ್ಣರನ್ನು ಸಂಪುಟದಿಂದ ಕೈ ಬಿಟ್ಟ ವಿಚಾರ ಕರ್ನಾಟಕ ಕಾಂಗ್ರೆಸ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಈಗ ಮಾಜಿ ಸಚಿವ ಕೆ.ಎನ್.ರಾಜಣ್ಣ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. “ಆತ್ಮೀಯ ಹಾಗೂ ಅಭಿಮಾನಿ ಬಂಧುಗಳಲ್ಲಿ ನನ್ನದೊಂದು ಕೋರಿಕೆ” ಎಂದು ಪೋಸ್ಟ್‌ನಲ್ಲಿ ಹಲವಾರು ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಪೋಸ್ಟ್ ವಿವರಗಳು ಹೀಗಿದೆ….

ಆತ್ಮೀಯರೇ..
ರಾಜಕೀಯ ಏರುಪೇರುಗಳು ನನಗೆ ಹೊಸತಲ್ಲ. ಯಾವುದೇ ರಾಜಕೀಯ ಬದಲಾವಣೆಗೂ ಎಂದೂ ಧೃತಿಗೆಟ್ಟವನಲ್ಲ, ಇದು ಸಹ ಹಾಗೆಯೇ ಎಂದು ಹೇಳಲು ಇಚ್ಛಿಸುತ್ತೇನೆ. ನಿಮ್ಮಲ್ಲಿ ನನ್ನ ವಿನಂತಿ ಏನೆಂದರೆ, ಯಾವುದೇ ಕಾರಣಕ್ಕೂ ಅಭಿಮಾನದ ಅತಿರೇಕದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

ಕೆಲವು ಯುವಜನರು ಅಹಿತಕರವಾಗಿ ತಮಗೆ ತಾವು ನೋವು ಮಾಡಿಕೊಂಡಿದ್ದು ನನ್ನ ಮನಸ್ಸಿಗೆ ದುಃಖ ತಂದಿದೆ. ನಿಮ್ಮನ್ನು ನಂಬಿಕೊಂಡು ನಿಮ್ಮ ಕುಟುಂಬಗಳು ಮನೆಯಲ್ಲಿ ಕಾಯುತ್ತಿರುತ್ತಾರೆ. ನಾನು ಸಹ ನಿಮ್ಮನ್ನು ನನ್ನ ಕುಟುಂಬವೆಂದೇ ಭಾವಿಸಿದ್ದೇನೆ. ನಿಮ್ಮ ಪ್ರೀತಿ, ಅಭಿಮಾನ ಎಂತಹದ್ದು ಎಂಬುದನ್ನು ಕಣ್ಣಾರೆ ಕಂಡಿದ್ದೇನೆ.
ಹಾಗಾಗಿ, ಯಾವುದೇ ತಪ್ಪು ನಿರ್ಧಾರ ಮಾಡಬೇಡಿ. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವಂತಹ ಪ್ರಯತ್ನವನ್ನು ಮಾಡಬೇಡಿ.

ನಾವೆಲ್ಲರೂ ಬುದ್ಧ, ಬಸವ, ವಾಲ್ಮೀಕಿ, ಅಂಬೇಡ್ಕರ್ ರವರ ಹಾದಿಯಲ್ಲೇ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ನಮ್ಮ ನಾಯಕರಾದ ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಸಂವಿಧಾನ ಉಳಿಸುವ ಪ್ರಯತ್ನಕ್ಕೆ ಬಲ ತರಬೇಕಿದೆ. ಹಾಗೂ ನಮ್ಮ ಗೌರವಾನ್ವಿತ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಕೈ ಬಲಪಡಿಸುವ ಕಡೆಗೆ ನಮ್ಮ ಚಿಂತನೆ ಇರಲಿ ಎಂದು ನಿಮ್ಮನ್ನು ಕೋರುತ್ತೇನೆ ಎಂದು ರಾಜಣ್ಣ ಮನವಿ ಮಾಡಿದ್ದಾರೆ.

Previous articleಬಿಎಸ್‌ಎನ್ಎಲ್‌ ಈ ಪ್ಲಾನ್‌ ನೋಡಿ, ₹1ಕ್ಕೆ ಭಾರೀ ಕೊಡುಗೆ
Next articleಕಾಂಗ್ರೆಸ್ ಶಾಸಕ ಸತೀಶ್ ಸೈಲ್ ನಿವಾಸದ ಮೇಲೆ ಇಡಿ ದಾಳಿ

LEAVE A REPLY

Please enter your comment!
Please enter your name here