Dharmasthala Mass Burial: 5 ಕಡೆ ಪೊಲೀಸರು ಹುಡುಕಾಟ, ಸ್ಥಳದಲ್ಲಿ ಸಿಕ್ಕಿದ್ದೇನು?

0
57

ಧರ್ಮಸ್ಥಳ ಪ್ರಕರಣದಲ್ಲಿ SIT ತನಿಖೆ ಮುಂದುವರೆದಿದೆ. ಅನಾಮಿಕ ವ್ಯಕ್ತಿಯ ಜೊತೆಗೆ ಪೊಲೀಸರು 5 ಕಡೆ ಹುಡುಕಾಟ ನಡೆಸಿದ್ದಾರೆ.

ಮಂಗಳೂರು: ಕರ್ನಾಟಕದಲ್ಲಿ ಸಂಚಲನಕ್ಕೆ ಕಾರಣವಾಗಿರುವ ಧರ್ಮಸ್ಥಳ ಪ್ರಕರಣದ ಕುರಿತು ಎಸ್‌ಐಟಿ ತನಿಖೆ ಚುರುಕಾಗಿದೆ. ಸುರಿಯುವ ಮಳೆಯ ನಡುವೆಯೇ ಅನಾಮಿಕ ದೂರುದಾರ ಜೊತೆ ಪೊಲೀಸರು ಧರ್ಮಸ್ಥಳದಲ್ಲಿ ಶೋಧ ಕಾರ್ಯವನ್ನು ನಡೆಸುತ್ತಿದ್ದಾರೆ.

ಧರ್ಮಸ್ಥಳದ ವಿವಿಧೆಡೆ ನೂರಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಅನಾಮಿಕ ವ್ಯಕ್ತಿಯೊಬ್ಬ ದೂರು ನೀಡಿದ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ. ಮೂರು ದಿನದ ತನಿಖೆಯನ್ನು ಧರ್ಮಸ್ಥಳದಲ್ಲಿ ತಂಡ ಮುಗಿಸಿದೆ.

ಮಂಗಳವಾರ ದೂರುದಾರನ ಜೊತೆ ಪೊಲೀಸರು 15 ಸ್ಥಳಗಳನ್ನು ಗುರುತಿಸಿದ್ದರು. ಈಗ 5 ಸ್ಥಳಗಳಲ್ಲಿ ಗುಂಡಿಗಳನ್ನು ತೆಗೆದು ಹುಡುಕಾಟ ನಡೆಸಲಾಗಿದೆ. ಯಾವುದೇ ಶವದ ಅವಶೇಷಗಳು, ಅಸ್ತಿಪಂಜರ ಪತ್ತೆಯಾಗಿಲ್ಲ.

ಆದರೆ, ಸಾಮಾಜಿಕ ಜಾಲತಾಣದಲ್ಲಿ ಮಂಗಳವಾರ ಗುಂಡಿ ತೆಗೆದ ಒಂದು ಸ್ಥಳದಲ್ಲಿ ಹರಿದ ಕೆಂಪು ರವಿಕೆ, ಪುರುಷನ ಪಾನ್ ಕಾರ್ಡ್, ಲಕ್ಷ್ಮೀ ಹೆಸರಿರುವ ಡೆಬಿಟ್ ಕಾರ್ಡ್ ಪತ್ತೆಯಾಗಿದೆ ಎಂಬ ಸುದ್ದಿಗಳು ಹಬ್ಬಿವೆ. ಆದರೆ ಈ ಕುರಿತು ಎಸ್‌ಐಟಿ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.

ಮಹತ್ವದ ಸಾಕ್ಷ್ಯ: ಮೊದಲು ಗುರುತಿಸಿದ ಸ್ಥಳವನ್ನು ಅಗೆಯುವ ವೇಳೆ ಸೈಟ್ ಸಂಖ್ಯೆ 1ರಲ್ಲಿ ಎಸ್‌ಐಟಿ ಮಹತ್ವದ ಸಾಕ್ಷ್ಯಗಳನ್ನು ಪತ್ತೆ ಹಚ್ಚಿದೆ ಎಂದು ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ತಾಯಿ ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಎನ್. ತಿಳಿಸಿದ್ದಾರೆ.

ಮಂಗಳವಾರದ ಕಾರ್ಯಚರಣೆಯ ವೇಳೆ ಸುಮಾರು 2.5 ಅಡಿ ಆಳದಲ್ಲಿ ಕೆಂಪು ಬಣ್ಣದ ರವಿಕೆ, ಪಾನ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಪತ್ತೆಯಾಗಿದೆ ಎಂದು ಸುದ್ದಿಗಳು ಹಬ್ಬಿವೆ. ಈ ಬೆಳವಣಿಗೆಯು ತನಿಖೆಗೆ ಹೊಸ ಆಯಾಮವನ್ನು ನೀಡಲಿದೆ ಎಂದು ಅಂದಾಜಿಸಲಾಗಿದೆ.

ಮೊಹಂತಿ ಭೇಟಿ: ಎಸ್‌ಐಟಿ ಕಾರ್ಯಾಚರಣೆ ನಡೆಯುತ್ತಿರುವ ನೇತ್ರಾವತಿ ಸ್ಥಳಕ್ಕೆ ಬುಧವಾರ ಎಸ್‌ಐಟಿ ಮುಖ್ಯಸ್ಥ ಡಾ. ಪ್ರಣಬ್ ಮೊಹಂತಿ, ಐಪಿಎಸ್ ಅನುಚೇತ್, ಎಸ್ಪಿ ಸಿ.ಎ. ಸೈಮನ್ ಭೇಟಿ ನೀಡಿದರು. ಗುರುತಿಸಿದ 4ನೇ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿ ಮರಳಿದ್ದಾರೆ. ಈ ನಡುವೆ ಅನಾಮಿಕ ದೂರುದಾರ ಮೊಹಂತಿ ಉಪಸ್ಥಿತಿಯಲ್ಲಿ ಸ್ಥಳ ಅಗೆಯುವ ಪ್ರಕ್ರಿಯೆ ನಡೆಯಬೇಕೆಂದು ಪಟ್ಟು ಹಿಡಿದಿದ್ದಾನೆ ಎಂಬ ಮಾಹಿತಿ ಇದೆ.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 1995 ರಿಂದ 2014ರ ವರೆಗೆ ಕರ್ತವ್ಯ ನಿರ್ವಹಿಸಿದ್ದ ಪೊಲೀಸ್ ಸಿಬ್ಬಂದಿಯ ಪಟ್ಟಿ ನೀಡುವಂತೆ ಎಸ್‌ಐಟಿ ಅಧಿಕಾರಿಗಳು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮನವಿ ಮಾಡಿದ್ದಾರೆ.

ನಿವೃತ್ತ ಪೊಲೀಸ್ ಅಧಿಕಾರಿ ಹೆಸರು: ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯ ಹೆಸರು ಕೇಳಿ ಬಂದಿದೆ. ವಿಚಾರಣೆ ಸಂದರ್ಭ ನಿವೃತ್ತ ಪೊಲೀಸ್ ಅಧಿಕಾರಿಯ ಬಗ್ಗೆ ಅನಾಮಿಕ ದೂರುದಾರ ಮಾಹಿತಿ ನೀಡಿದ್ದಾನೆ ಎಂಬ ವರದಿಗಳಿವೆ.

ಎಸ್‌ಐಟಿ ವಿಚಾರಣೆಯಲ್ಲಿ ದೂರುದಾರ ಹಲವರ ಹೆಸರನ್ನು ಉಲ್ಲೇಖಿಸಿದ್ದಾನೆ. ಅದರಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಹೆಸರು ಇದೆ. ದೂರುದಾರ ನೀಡಿದ್ದ ಮಾಹಿತಿ ಪ್ರಕಾರ ಧರ್ಮಸ್ಥಳ ಭಾಗದಲ್ಲಿ ಪೊಲೀಸ್ ಔಟ್ ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ದೂರುದಾರ ಉಲ್ಲೇಖಿಸಿರುವ ಹಲವರನ್ನು ನೋಟಿಸ್ ನೀಡಿ ವಿಚಾರಣೆಗೆ ಕರೆಸುವ ಸಾಧ್ಯತೆ ಇದೆ. ಜೊತೆಗೆ ಆ ಪೊಲೀಸ್ ಅಧಿಕಾರಿಯನ್ನೂ ಎಸ್‌ಐಟಿ ವಿಚಾರಣೆ ಮಾಡುವ ಸಾಧ್ಯತೆ ಇದೆ. ಮತ್ತೊಂದು ಕಡೆ ತನಿಖಾಧಿಕಾರಿಗಳು ಆರೋಪಕ್ಕೆ ಸಂಬಂಧಿಸಿ ಸಾಕ್ಷ್ಯ ಸಂಗ್ರಹಿಸುವ ಕಾರ್ಯ ಮುಂದುವರಿದಿದೆ.

Previous articleಭಾರತದ ಮೇಲೆ ಶೇ. 25ರಷ್ಟು ಸುಂಕ: ಮೋದಿಗೆ ಶಾಕ್‌ ಕೊಟ್ಟ ಟ್ರಂಪ್
Next articleವಿಶ್ವದಲ್ಲೇ ಕಾಣದ ರಕ್ತದ ಗುಂಪು ಕರ್ನಾಟಕದ ಮಹಿಳೆಯಲ್ಲಿ ಪತ್ತೆ

LEAVE A REPLY

Please enter your comment!
Please enter your name here