ಢಾಕಾ: ಬಾಂಗ್ಲಾದೇಶ ವಾಯುಪಡೆಯ ತರಬೇತಿ ಜೆಟ್ ವಿಮಾನ ಪತನ ಹೊಂದಿದ ಘಟನೆ ಢಾಕಾದ ಉತ್ತರ ಪ್ರದೇಶದ ಮೈಲ್‌ಸ್ಟೋನ್ ಕಾಲೇಜು ಆವರಣದಲ್ಲಿ ನಡೆದಿದೆ.
ಚೀನಾ ನಿರ್ಮಿತ F-7 BGI ವಿಮಾನ ಇದಾಗಿದ್ದು, ಘಟನೆಯಲ್ಲಿ ಸುಮಾರು 15ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ನೂರಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ. ಆದರೆ ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇಂದು ಮಧ್ಯಾಹ್ನ 1 ಗಂಟೆ 6 ನಿಮಿಷದ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಏರ್ ಇಂಡಿಯಾ ವಿಮಾನ ದುರಂತ ಮಾದರಿಯಲ್ಲಿಯೇ ಈ ಘಟನೆ ನಡೆದಿದೆ. ವಿಮಾನ ಟೇಕ್ ಆಫ್ ಆಗಿದ್ದ ಕೆಲವೇ ಸಮಯದಲ್ಲಿ ಮೈಲ್‌ಸ್ಟೋನ್ ಕಾಲೇಜಿನ ಕ್ಯಾಂಟೀನ್‌ನ ಚಾವಣಿಯ ಮೇಲೆ ವಿಮಾನ ಅಪ್ಪಳಿಸಿದೆ.
ವಿಮಾನವು ಚಾವಣಿಗೆ ಡಿಕ್ಕಿ ಹೊಡೆಯುತ್ತಿದ್ದಂತೆ ಕ್ಯಾಂಪಸ್‌ನಲ್ಲಿರುವ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಭಯಭೀತರಾಗಿದ್ದಾರೆ. ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಸ್ಥಳೀಯ ಆಡಳಿತವೂ ಶೀಘ್ರ ಸ್ಥಳದಲ್ಲಿ ಹಾಜರಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ವಿಮಾನ ಪತನವಾಗುತ್ತಿದ್ದಂತೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸಾಕಷ್ಟು ದೂರದವರೆಗೂ ದಟ್ಟ ಹೊಗೆ ಆವರಿಸಿತ್ತು ಎನ್ನಲಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ವಾಯುಪಡೆಯ ಹೆಲಿಕಾಪ್ಟರ್‌ಗಳು, ಆಂಬ್ಯುಲೆನ್ಸ್‌ಗಳು ಸೇರಿದಂತೆ ಎಂಟು ಅಗ್ನಿಶಾಮಕ ದಳ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿವೆ.
ಗಾಯಾಳುಗಳನ್ನು ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆ, ಕುರ್ಮಿಟೋಲಾ ಜನರಲ್ ಆಸ್ಪತ್ರೆ, ಕುವೈತ್ ಬಾಂಗ್ಲಾದೇಶ ಸ್ನೇಹ ಸರ್ಕಾರಿ ಆಸ್ಪತ್ರೆ, ಉತ್ತರ ಮಹಿಳಾ ವೈದ್ಯಕೀಯ ಕಾಲೇಜು ಹಾಗೂ ಶಹೀದ್ ಮನ್ಸೂರ್ ಅಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಚೀನಾ ನಿರ್ಮಿತ ವಿಮಾನ ಪತನಗೊಂಡಿದ್ದು ಈ ವರ್ಷದಲ್ಲೇ ಇದು ಎರಡನೇ ಚೀನಾ ನಿರ್ಮಿತ ಎಫ್-7 ಆಗಿದೆ. ಮ್ಯಾನ್ಮಾರ್ ವಾಯುಪಡೆಯ ಎಫ್-7 ಫೈಟರ್ ಜೆಟ್ ಕಳೆದ ತಿಂಗಳು ಸಾಗೈಂಗ್ ಪ್ರದೇಶದಲ್ಲಿ ಪತನಗೊಂಡಿದ್ದು ದುರಂತದಲ್ಲಿ ಪೈಲಟ್ ಸಾವನ್ನಪ್ಪಿದ್ದರು. ಬೀಜಿಂಗ್ ಉತ್ಪಾದಿಸುವ ರಕ್ಷಣಾ ಉಪಕರಣಗಳ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತವಾಗಿತ್ತು.