ಬೆಳಗಾವಿ: ಓರ್ವ ಬುದ್ಧಿಮಾಂದ್ಯ ಮಗುವಿನ ಮೂಗಿನಲ್ಲಿ ಬರೋಬ್ಬರಿ 14 ವಸ್ತುಗಳು ಸಿಲುಕಿಕೊಂಡಿದ್ದವು ಎಂದರೆ ನೀವು ನಂಬಲೇಬೇಕು. ಆಶ್ಚರ್ಯವೆಂದು ನಿಮಗೆ ಅನಿಸಿದರೂ ಇದು ನಡೆದಿದ್ದು ಸತ್ಯ. ಈ ಮಗುವಿನ ಮೂಗಿನಲ್ಲಿ ಸಿಲುಕಿದ್ದ ಈ ವಸ್ತುಗಳನ್ನು ವೈದ್ಯರು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಸಾಮಾನ್ಯ ನೆಗಡಿ, ಮೂಗಿನಿಂದ ದುರ್ವಾಸನೆ, ಮೂಗಿನಲ್ಲಿ ಬಾವು ಹಾಗೂ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ 9 ವರ್ಷದ ಬುದ್ದಿಮಾಂದ್ಯ ಮಗುವಿಗೆ ಕೆಎಲ್‌ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಯ ಹೆಸರಾಂತ ಕಿವಿ, ಮೂಗು ಹಾಗೂ ಗಂಟಲು ತಜ್ಞ ಡಾ. ವಿವೇಕಾನಂದ ಕೊಳವೆಗರ ಅವರಿಂದ ಚಿಕಿತ್ಸೆ ನೀಡಲಾಗಿದೆ.
ಪೋಷಕರೊಂದಿಗೆ ಬಂದ ಬಾಲಕನು ಮೊದಲು ತೀವ್ರ ನೋವಿನಿಂದ ಬಳಲುತ್ತಿದ್ದ. ಆತನ ಮೂಗಿನಲ್ಲಿ ದುರ್ಬೀನಿನ ಮೂಲಕ ನೋಡಲಾಗಿ ಕೆಲವು ಅಸಾಮಾನ್ಯ ವಸ್ತುಗಳು ಇರುವುದು ತಿಳಿದುಬಂದಿತು. ಇಂತಹ ಸಮಸ್ಯಾತ್ಮಕ ಪ್ರಕರಣಕ್ಕೆ ಸಮಾಧಾನ ಕಂಡುಕೊಂಡ ವೈದ್ಯರು ಬಾಲಕನಿಗೆ ಅರವಳಿಕೆ ನೀಡಿ ಮೂಗಿನಲ್ಲಿರುವ ವಸ್ತು ಹೊರತೆಗೆಯಲು ಯೋಜಿಸಿ ಚಿಕಿತ್ಸೆ ನೀಡಿದ್ದಾರೆ.
ಆತನ ಮೂಗಿನಲ್ಲಿ ಸುಮಾರು 5 ರಿಂದ 8 ಸಣ್ಣ ಕಲ್ಲುಗಳು, 2 ಸಣ್ಣ ಪ್ಲಾಸ್ಟಿಕ್ ಆಟದ ಸಾಮಾನುಗಳು ಸೇರಿ ಒಟ್ಟು 14 ವಸ್ತು ಹೊರತೆಗೆಯಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ವಿವೇಕಾನಂದ ಕೊಳ್ವೆಕರ, ಮಕ್ಕಳು ಆಟವಾಡುವಾಗ ಅವರ ಕಡೆ ಗಮನ ಕೊಡುವುದು ಪಾಲಕರ ಆದ್ಯ ಕರ್ತವ್ಯ. ಅದರಲ್ಲಿ ಇಂತಹ ವಿಶೇಷ ಮಕ್ಕಳ ಬಗ್ಗೆ ಅತಿಯಾದ ಕಾಳಜಿ ಅತಿ ಮಹತ್ವದ್ದಾಗಿದೆ. ಮಕ್ಕಳ ಕೈಯಲ್ಲಿ ಸಣ್ಣ ಸಣ್ಣ ಆಟದ ಸಾಮಾನು ಕೊಡದಿರಿ, ಒಂದು ವೇಳೆ ಆಟದ ಸಾಮಾನುಗಳು ಅವರ ಶರೀರದ ಯಾವುದೇ ಭಾಗದಲ್ಲಿ ಸಿಲುಕಿದರೆ ತಕ್ಷಣ ವೈದ್ಯರನು ಕಾಣಿ ಎಂದರು.
ಇಂತಹ ರೋಗಿಗೆ ಚಿಕಿತ್ಸೆ ನೀಡಿ ಆತನ ಆರೋಗ್ಯಯುತ ಜೀವನಕ್ಕೆ ಕಾರಣಿಭೂತರಾಗಲು ಕಾರಣರಾದ ವೈದ್ಯರಿಗೆ ಕಿವಿ, ಮೂಗು ಹಾಗೂ ಗಂಟಲು ವಿಭಾಗದ ಮುಖ್ಯಸ್ಥ ಡಾ.ಆರ್.ಎನ್. ಪಾಟೀಲ ಅವರು ಆಸ್ಪತ್ರೆಯ ವೈದ್ಯಕೀಯ ನಿರೀಕ್ಷಕ ಡಾ.ಆರ್.ಜಿ. ನೆಲವಿಗಿ, ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ದೇಸಾಯಿ ಅಭಿನಂದಿಸಿದ್ದಾರೆ. ಯುಎಸ್‌ಎಂ ಕೆಎಲ್‌ಇ ನಿರ್ದೇಶಕ ಡಾ.ಎಚ್.ಬಿ. ರಾಜಶೇಖರ, ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ಶ್ಲಾಘಿಸಿದ್ದಾರೆ.