ಚಾಮರಾಜನಗರ: 3ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಚಾಮರಾಜನಗರ ತಾಲೂಕಿನ ಬದನಗುಪ್ಪೆ ಗ್ರಾಮದ ಲಿಂಗರಾಜು ಎಂಬುವರ ಪುತ್ರಿ ತೇಜಸ್ವಿನಿ (08) ಮೃತಪಟ್ಟ ಬಾಲಕಿ. ನಗರದ ಸಂತ ಫ್ರಾನ್ಸಿಸ್ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿದ್ದ ತೇಜಸ್ವಿನಿ ಸೋಮವಾರ ಬೆಳಗ್ಗೆ ಶಾಲೆಗೆ ಹೋಗಿದ್ದಳು. ತರಗತಿಯಲ್ಲಿ ಶಿಕ್ಷಕರಿಗೆ ನೋಟ್ಸ್ ತೋರಿಸಲು ಹೋಗುತ್ತಿದ್ದಂತೆ ವಿದ್ಯಾರ್ಥಿನಿ ಕುಸಿದು ಬಿದ್ದಿದ್ದಾಳೆ. ಶಾಲೆಯವರು ಆಕೆಯನ್ನು ನಗರದ ಜೆಎಸ್ಎಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಬಾಲಕಿ ಈಗಾಗಲೇ ಮೃತಪಟ್ಟಿದ್ದಾಳೆಂದು ತಿಳಿಸಿದ್ದಾರೆ.