ಮಂಗಳೂರು: ವೇದಿಕೆಯಲ್ಲೇ ಪೊಲೀಸ್ ಅಧಿಕಾರಿಯ ಮೇಲೆ ಕೈ ಮಾಡುವವರೆಗೆ ಮುಂದುವರೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗವಾಗಿ ಗೂಂಡಾ ವರ್ತನೆ ತೋರಿಸಿದ್ದಾರೆ ಎಂದು ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಪ್ರತಿದಿನ ಬೆಲೆಯೇರಿಕೆ ಮಾಡುತ್ತಲೇ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆಯುತ್ತಿರುವ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಬೆಲೆಯೇರಿಕೆಯ ಬಗ್ಗೆ ಪ್ರತಿಭಟನೆಯ ನಾಟಕವಾಡುತ್ತಿರುವ ಸಂದರ್ಭದಲ್ಲಿ, ಅವರ ದೇಶ ವಿರೋಧಿ ಹೇಳಿಕೆಯನ್ನು ವಿರೋಧಿಸಿದ ಬಿಜೆಪಿಯ ನಡೆಗೆ ಕಸಿವಿಸಿಗೊಂಡು ಗೂಂಡಾ ವರ್ತನೆ ತೋರಿಸಿದ್ದಾರೆ ಎಂದು ಹೇಳಿದ್ದಾರೆ.
ಪಾಕಿಸ್ತಾನ ವಿರುದ್ಧ ಯುದ್ಧ ಅಗತ್ಯವಿಲ್ಲ ಎಂದು ಶತ್ರು ರಾಷ್ಟ್ರದ ಬಗ್ಗೆ ಮೃದು ಧೋರಣೆ ತೋರಿದ ಮುಖ್ಯಮಂತ್ರಿ ವಿರುದ್ಧ ಪ್ರತಿಪಕ್ಷ ಸಹಜವಾಗಿ ವಿರೋಧ ವ್ಯಕ್ತಪಡಿಸಿದರ ಬಗ್ಗೆ ಮಾನಸಿಕ ಸ್ಥಿಮಿತ ಕಳೆದು ಕೊಂಡಿರುವುದು ಗಮನಿಸಿದರೆ ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿ ಎನ್ನುವುದನ್ನು ಮರೆತು, ಪಾಕಿಸ್ತಾನದ ಪ್ರಧಾನಿ ಮೈಮೇಲೆ ಬಂದಿರುವಂತೆ ದುವರ್ತನೆ ತೋರಿದ್ದಾರೆ. ಪೊಲೀಸರ ಆತ್ಮ ಸ್ಥೈರ್ಯ ಕುಂದಿಸುವ ಕಾರ್ಯ ಎಸಗಿದ್ದಾರೆ. ಕರ್ನಾಟಕದ ಜನತೆಗೆ, ನಾಡಿನ ಘನತೆಗೆ ಇವರ ವರ್ತನೆಯಿಂದ ಧಕ್ಕೆಯಾಗಿದೆ ಎಂದು ಕುಂಪಲ ಹೇಳಿದ್ದಾರೆ.