ಬೆಳಗಾವಿ: ಖಾನಾಪುರದ ಗಾಡಿಕೊಪ್ಪ ಗ್ರಾಮದಲ್ಲಿ ಅಪರಿಚಿತ ಶವವಾಗಿ ಪತ್ತೆಯಾದ ಶಿವನಗೌಡ ಪಾಟೀಲ ಎಂಬವರ ಕೊಲೆ ಪ್ರಕರಣದಲ್ಲಿ ಒಂದೊಂದೇ ವಿಚಾರಗಳು ಹೊರಬರುತ್ತಿದ್ದು, ಪತಿಯ ಕೊಲೆಯಾಗಿದ್ದನ್ನು ಪತ್ನಿ ಮೊಬೈಲ್‌ನಲ್ಲಿ ಲೈವ್ ಆಗಿ ವೀಕ್ಷಿಸಿದ್ದಳು ಎಂಬ ಬೆಚ್ಚಿ ಬೀಳಿಸುವ ಅಂಶ ಬಹಿರಂಗವಾಗಿದೆ.
ಆರೋಪಿ ರುದ್ರಪ್ಪ ಹೊಸೆಟ್ಟಿ ಕೊಲೆಗೈಯುವ ದೃಶ್ಯಗಳನ್ನೆಲ್ಲಾ ತನ್ನ ಪ್ರೇಯಸಿ ಶಿವನಗೌಡನ ಪತ್ನಿ ಶೈಲಾಗೆ ವಾಟ್ಸಾಪ ಕಾಲ್ ಮೂಲಕ ಲೈವಾಗಿ ತೋರಿಸಿದ್ದಾನೆ. ಇಬ್ಬರೂ ಕೊಲೆ ಮಾಡಿ ಖುಷಿಪಟ್ಟಿದ್ದಾರೆ. ಮರುದಿನ ಶಿವನಗೌಡನ ಶವ ಪತ್ತೆಯಾದಾಗ ಪತ್ನಿ ಶೈಲಾ ಆತನ ಮೃತದೇಹದ ಮೇಲೆ ಬಿದ್ದು ಬಿಕ್ಕಿ ಬಿಕ್ಕಿ ಅಳುತ್ತಾ ತನಗೆ ಏನೂ ಗೊತ್ತಿಲ್ಲದಂತೆ ನಾಟಕವಾಡಿದ್ದಾಳೆ.
ಪೊಲೀಸರ ತನಿಖೆಯಿಂದ ಚಾಲಾಕಿ ಮಹಿಳೆಯ ಈ ಕುಕೃತ್ಯಗಳೆಲ್ಲಾ ಹೊರ ಬಂದಿವೆ. ಮಾಡಿದ ತಪ್ಪು ಒಪ್ಪಿಕೊಂಡ ಶೈಲಾ ಪಾಟೀಲ ಹಾಗೂ ರುದ್ರಪ್ಪ ಹೊಸೆಟ್ಟಿ ಈಗ ಜೈಲು ಪಾಲಾಗಿದ್ದಾರೆ.
ಏ. ೨ರಂದು ಶಿವನಗೌಡ ಪಾಟೀಲ ಶವ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ತನಿಖೆ ನಡೆಸಿದ ಪೊಲೀಸರು ಒಂದೇ ದಿನದಲ್ಲಿ ಕಲಬುರ್ಗಿಯಲ್ಲಿ ತಲೆ ಮರೆಸಿಕೊಂಡಿದ್ದ ಕೊಲೆ ಆರೋಪಿ ರುದ್ರಪ್ಪ ಹೊಸೆಟ್ಟಿಯ ಹೆಡೆಮುರಿ ಕಟ್ಟಿದ್ದರು. ಆದರೆ ಈತನ ವಿಚಾರಣೆ ಸಂದರ್ಭದಲ್ಲಿ ಶಿವನಗೌಡನ ಪತ್ನಿ ಶೈಲಾಳೇ ಆರೋಪಿಗೆ ಸುಪಾರಿ ನೀಡಿದ್ದಳು ಎಂದು ಗೊತ್ತಾಗಿದೆ.