ನೂತನ ಸಂಸತ್ ಭವನ ಶುಭಾರಂಭದ ಬಿಕ್ಕಟ್ಟು

0
12
ಸಂಪಾದಕೀಯ

ನೂತನ ಸಂಸತ್ ಭವನ ಉದ್ಘಾಟನೆಗೆ ಸಿದ್ಧವಾಗಿದೆ. ಇದನ್ನು ಯಾರು ಉದ್ಘಾಟಿಸಬೇಕೆಂಬುದೇ ವಿವಾದಕ್ಕೆ ಕಾರಣವಾಗಿದೆ. ರಾಷ್ಟ್ರಪತಿ ಅಥವ ಪ್ರಧಾನಿ ಯಾರೇ ಉದ್ಘಾಟಸಿದರೂ ಅದು ಇಡೀ ದೇಶದ ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆಯೇ ಹೊರತು ಕುಗ್ಗಿಸುವುದಿಲ್ಲ. ಸಂಸತ್ತು ಎಂದ ಮೇಲೆ ಆಡಳಿತ ಮತ್ತು ಪ್ರತಿಪಕ್ಷಗಳು ಇದ್ದೇ ಇರುತ್ತವೆ. ಅವುಗಳು ಒಂದುಗೂಡಿ ಕೆಲಸ ಮಾಡಿದಾಗಲೇ ಪ್ರಜಾಪ್ರಭುತ್ವ ಹೆಮ್ಮರವಾಗಿ ಬೆಳೆಯುತ್ತದೆ. ಇದರಲ್ಲಿ ವೈಯುಕ್ತಿಕ ಪ್ರತಿಷ್ಠೆ ದೊಡ್ಡದಾಗಬಾರದು. ಪ್ರಜಾಪ್ರಭುತ್ವ ನಮಗೆ ನಾವೇ ರೂಪಿಸಿಕೊಂಡ ಆಡಳಿತ ವ್ಯವಸ್ಥೆ. ಅದರಿಂದ ಪ್ರಜೆಗಳೇ ನಿಜವಾದ ಪ್ರಭುಗಳು. ಅವರ ಪ್ರತಿನಿಧಿಗಳು ಸಂಸತ್ತಿನಲ್ಲಿ ಪಾಲ್ಗೊಳ್ಳುತ್ತಾರೆ. ಇದು ಮೊದಲಿನಿಂದಲೂ ನಡೆದುಬಂದಿರುವ ಪದ್ಧತಿ. ಈಗ ಸಂಸತ್ತು ನಡೆಯುತ್ತಿರುವ ಭವನ ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿದ್ದು. ಆಗಿನ ಕಾಲಕ್ಕೆ ಇದು ಭವ್ಯ ಕಟ್ಟಡ. ೧೯೨೧ ರಲ್ಲೇ ನಿರ್ಮಾಣಗೊಂಡಿದ್ದು.
೧೯೫೦ ರಲ್ಲಿ ಸಂವಿಧಾನದ ತಳಹದಿಯಲ್ಲಿ ಗಣರಾಜ್ಯ ರಚನೆಯಾದ ಮೇಲೆ ಸಂಸತ್ತಿನ ಉಭಯ ಸದನಗಳು ಇಲ್ಲಿ ನಡೆಯುತ್ತ ಬಂದಿದೆ. ಈ ಸಂಸತ್ತಿನ ಕಟ್ಟಡದಲ್ಲಿ ಸವಲತ್ತು ಕಡಿಮೆ ಇದೆ ಎಂದು ೨೦೨೦ ರಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಈಗ ಇದು ಪೂರ್ಣಗೊಂಡಿದೆ. ಇದು ನಮ್ಮ ಮನೆ. ಇದರ ಗೃಹಪ್ರವೇಶದಲ್ಲಿ ಎಲ್ಲರೂ ತಮ್ಮ ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಒಮ್ಮತದಿಂದ ಭಾಗವಹಿಸಬೇಕು. ಇದು ಒಂದು ರೀತಿಯಲ್ಲಿ ಇಡೀ ದೇಶಕ್ಕೆ ಹೆಮ್ಮೆ ತರುವ ಸಂಗತಿ.
ಈಗ ದೇಶದ ಪ್ರಜಾಪ್ರಭುತ್ವಕ್ಕೆ ಜಗತ್ತಿನ ಎಲ್ಲ ದೇಶಗಳಲ್ಲಿ ಅತ್ಯಂತ ಗೌರವ ಲಭಿಸುತ್ತಿದೆ. ನಮ್ಮ ಸಂಸದೀಯನ ಪರಂಪರೆಯನ್ನು ಬೇರೆ ದೇಶಗಳು ಮಾದರಿಯಾಗಿ ಪರಿಗಣಿಸುವಾಗ ನಾವ ನಮ್ಮ ಸಂಕುಚಿತ ಮನೋಭಾವದಿಂದ ವರ್ತಿಸುವುದು ಸರಿಯಲ್ಲ. ಆಡಳಿತ ಪಕ್ಷ ಕೂಡ ಇದು ತಮ್ಮ ಸಾಧನೆ ಎಂದು ಪರಿಗಣಿಸುವ ಅಗತ್ಯವಿಲ್ಲ. ಪ್ರತಿಪಕ್ಷದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ಮತ್ತು ಪ್ರತಿಪಕ್ಷದವರು ಒಟ್ಟಿಗೆ ಸೇರಿ ಹೊಸ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಬೇಕು. ೧೯ ಪ್ರತಿಪಕ್ಷಗಳು ಸಮಾರಂಭವನ್ನು ಬಹಿಷ್ಕರಿಸುವುದಾಗಿ ಹೇಳುತ್ತಿರುವುದು ಸತ್ಸಂಪ್ರದಾಯವಲ್ಲ.
ಸಂಸತ್ತಿನ ಉಭಯ ಸದನಗಳ ಸದಸ್ಯರು ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಸಮಾರಂಭದಲ್ಲಿ ಪಾಲ್ಗೊಳ್ಳಬೇಕು. ಹೊಸ ಕಟ್ಟಡದಲ್ಲಿ ಹೊಸ ಆಲೋಚನೆಗಳು ಬರಲು ಅವಕಾಶಗಳಿವೆ. ಇಡೀ ದೇಶದ ಬಗ್ಗೆ ಚಿಂತನೆ ನಡೆಸುವವರು ಉದಾರ ನಿಲುವು ತಳೆಯುವುದು ಅಗತ್ಯ. ಹೃದಯ ವೈಶಾಲ್ಯತೆ ಇದ್ದರೆ ಮಾತ್ರ ಕಡು ಬಡವರ ನೋವು ನಲಿವುಗಳನ್ನು ಅರಿತುಗೊಳ್ಳಲು ಸಾಧ್ಯ. ಕಟ್ಟ ಕಡೆಯ ಮನುಷ್ಯನ ಕಣ್ಣೀರು ಒರೆಸಬೇಕು ಎಂದರೆ ಸಂಸದರು ತಮ್ಮ ಅಹಂ ಭಾವದಿಂದ ಹೊರಬೇಕು. ಪ್ರಜಾಪ್ರಭುತ್ವದಲ್ಲಿ ವ್ಯಕ್ತಿಗಳು ಪ್ರಮುಖರಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಸಾಮಾನ್ಯರೂ ಅತ್ಯುನ್ನತ ಪದವಿಯಲ್ಲಿದ್ದು ಉತ್ತಮ ಸೇವೆ ಸಲ್ಲಿಸಲು ಅವಕಾಶವಿದೆ. ಅಧಿಕಾರ ಮತ್ತು ಅವಕಾಶಗಳು ಯಾರ ಆಸ್ತಿಯೂ ಅಲ್ಲ. ಇಂದು ಅಧಿಕಾರದಲ್ಲಿದ್ದವರು ನಾಳೆ ಇಲ್ಲದಿರಬಹುದು. ಇಂದು ಕುಗ್ರಾಮದಲ್ಲಿದ್ದವರು ನಾಳೆ ಇಡೀ ದೇಶದ ಪ್ರತಿನಿಧಿಯಾಗಿ ನಿಲ್ಲಬಹುದು. ಹೀಗಿರುವಾಗ ಸಂಸತ್ತಿನ ಹೊಸ ಕಟ್ಟಡದ ಉದ್ಘಾಟನೆಯಲ್ಲಿ ಪ್ರತಿಯೊಬ್ಬ ಸಂಸದರು ತಮ್ಮ ಪ್ರತಿಷ್ಠೆಯನ್ನು ಬದಿಗೊತ್ತಿ ಇಡೀ ದೇಶದ ಪ್ರತಿಷ್ಠೆಯನ್ನು ಎತ್ತಿಹಿಡಿಯುವ ಸುಸಂದರ್ಭದಲ್ಲಿ ಭಾಗಿಯಾಗಬೇಕು. ಪಕ್ಷ ರಾಜಕಾರಣ ಚುನಾವಣೆ ಕಾಲಕ್ಕೆ ಮಾತ್ರ ಸೀಮಿತಗೊಳ್ಳಬೇಕು.
ಇದನ್ನು ನಮ್ಮ ಹಿಂದಿನವರು ಹೇಳಿಕೊಟ್ಟಿದ್ದಾರೆ. ಮಹಾತ್ಮ ಗಾಂಧಿ ಯಾವ ಹುದ್ದೆಯಲ್ಲೂ ಇರಲಿಲ್ಲ. ಜೆಪಿ ಸಂಸರೂ ಆಗಲಿಲ್ಲ. ಆದರೂ ಜನ ಅವರಿಗೆ ಅತ್ಯುನ್ನತ ಗೌರವ ನೀಡಿದರು. ಜೆಬಿ ಕೃಪಲಾನಿ ಮೊದಲ ಬಾರಿ ಜನತಾ ಸರ್ಕಾರ ರಚನೆಗೊಂಡಾಗ ಮಹಾತ್ಮ ಗಾಂಧಿ ಸಮಾಧಿ ಮುಂದೆ ಸಂಸದರಿಗೆ ಪ್ರಮಾಣವಚನ ಬೋಧಿಸಿ ` ನಮ್ಮ ಆಲೋಚನೆಗಳು ಆಕಾಶದೆತ್ತರ ಇರಲಿ, ಆದರೆ ನಮ್ಮ ಕಾಲುಗಳು ಕೆಸರಲ್ಲಿವೆ ಎಂಬುದನ್ನು ಮರೆಯದರೋಣ’ ಎಂದು ಹೇಳಿದ್ದೂ ಈಗಲೂ ಅರ್ಥಗರ್ಭಿತ ಎನಿಸುತ್ತದೆ. ಸಂಸತ್ತಿನಲ್ಲಿ ಇರುವುದು ನಮ್ಮ ಭಾಗ್ಯ ಎಂದು ತಿಳಿದು ಪ್ರತಿಯೊಬ್ಬ ಸಂಸದರು ತಮ್ಮ ಸಮಯವನ್ನು ಜನತಾ ಜನಾರ್ಧನದ ಸೇವೆಗೆ ಮೀಸಲಿಡಬೇಕು. ಸಂಸತ್ತು ರಚನೆಯೇ ಅತ್ಯಂತ ವಿಶಾಲವಾದ ದೃಷ್ಟಿಕೋನದಲ್ಲಿ ರಚನೆಯಾಗಿದೆ. ನಮ್ಮ ಸಂವಿಧಾನ ರಚನೆಕಾರರು ಬಹಳ ಉನ್ನತ ಆದರ್ಶ ಇಟ್ಟುಕೊಂಡು ಆಡಳಿತ ಕ್ರಮವನ್ನು ರೂಪಿಸಿದ್ದಾರೆ. ಅದನ್ನು ಪಾಲಿಸುವುದಷ್ಟೇ ನಮ್ಮ ಕರ್ತವ್ಯ ಎಂದು ಸಂಸದರು ಭಾವಿಸಿದರೆ ಎಲ್ಲ ಸಮಸ್ಯೆಗಳೂ ಬಗೆಹರಿಯುವುದರಲ್ಲಿ ಸಂದೇಹವಿಲ್ಲ. ಜನಸೇವೆ ಮಾಡುವವರಿಗೆ ವಿನಯವೇ ಪ್ರಧಾನವಾಗಿರಬೇಕು. ಅಧಿಕಾರ ಅಹಂಕಾರವನ್ನು ಸಹಜಕವಾಗಿ ತಂದು ಕೊಡುತ್ತದೆ. ಅದನ್ನು ಅದುಮಿ ಜನಪ್ರತಿನಿಧಿಯಾಗಿರುವುದು ಇಂದಿನ ಸಂಸದರ ಮುಂದಿರುವ ನಿಜವಾದ ಸವಾಲು. ಆಡಳತ ಮತ್ತು ಪ್ರತಿಪಕ್ಷಗಳು ಎಂಬುದು ಚುನಾವಣೆ ಪದ್ಧತಿ ಬೇಕಿರುವ ವ್ಯವಸ್ಥೆ.
ಚುನಾವಣೆ ಮುಕ್ತಾಯಗೊಂಡ ಮೇಲೆ ಚುನಾಯಿತರಾದವರು ಎಲ್ಲರೂ ಸಂಸದರು. ಆಡಳಿತ ಮತ್ತು ಪ್ರತಿಪಕ್ಷಗಳ ಪ್ರತಿನಿಧಿಗಳಿಗೆ ಸಮಾನ ಅವಕಾಶ ಇರುತ್ತದೆ. ಅದರಿಂದ ಎಲ್ಲ ಕಾಲಕ್ಕೂ ನಾವು ಆಡಳಿತ ಮತ್ತು ಪ್ರತಿಪಕ್ಷದವರು ಎಂಬ ಭಿನ್ನ ಭಾವನೆ ಹೊಂದಿರುವುದೇ ತಪ್ಪು. ಎಲ್ಲ ಸಂಸದರೂ ಒಂದುಗೂಡಿ ಕೆಲಸ ಮಾಡಿದರೆ ಜನಪರ ಕೆಲಸಗಳನ್ನು ಮಾಡುವುದು ಕಷ್ಟದ ಕೆಲಸವಲ್ಲ.

Previous articleಜಮೀನು ವಿವಾದ: ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ
Next articleಆಧುನಿಕ ಮನೋವಿಜ್ಞಾನಿಗಳ ಪ್ರಕಾರ ಮನಸ್ಸು