ಚಿಕ್ಕೋಡಿ: ಮನೆಯಲ್ಲಿನ ಸಿಲಿಂಡರ್ ಗ್ಯಾಸ್ ಸೋರಿಕೆಯಿಂದ ಸ್ಫೋಟಗೊಂಡು ವ್ಯಕ್ತಿಯೊರ್ವ ಮೃತಪಟ್ಟಿದ್ದಾರೆ.
ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಪಟ್ಟಣಕ್ಕೆ ಕೂಲಿ ಕೆಲಸಕ್ಕೆ ಬಂದಿದ್ದ ಮಹಾರಾಷ್ಟ್ರದ ಬೀಡ್ ಮೂಲದ ಸೂರ್ಯಕಾಂತ ಸಳಕೆ(55) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಸಿಲಿಂಡರ್ ಗ್ಯಾಸ್ ಪೈಪ್ ಕಟ್ಟಾಗಿ ರಾತ್ರಿಯಿಡೀ ಸೋರಿಕೆಯಾಗಿದ್ದರಿಂದ ಬೆಳಗಿನ ಜಾವ ವಿದ್ಯುತ್ ಲೈಟ್ ಆನ್ ಮಾಡಿದಾಗ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆಯ ಗೋಡೆ ಕುಸಿದಿದೆ. ಪಕ್ಕದ ಮನೆಯ ಗೋಡೆಗೂ ಸಹ ಹಾನಿಯಾಗಿ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.