ಅಂತಾರಾಜ್ಯ ದರೋಡೆಕೋರರ ಬಂಧನ: ಸುಳಿವು ಕೊಟ್ಟ `ರೀಟಾ’

ಕಲಬುರಗಿ: ಜಿಲ್ಲೆಯ ಶಹಬಾದ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆ ಹಚ್ಚುವಲ್ಲಿ ಪತ್ತೆದಾರಿ `ಶ್ವಾನ ರೀಟಾ’ ಪ್ರಮುಖ ಪಾತ್ರ ವಹಿಸಿದ್ದು, ರೀಟಾ ಸುಳಿವಿನಿಂದಾಗಿಯೇ ಶಹಾಬಾದ್ ಪೊಲೀಸರು ನಾಲ್ವರು ಅಂತಾರಾಜ್ಯ ದರೋಡಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಜೂ. ೨೨ರಂದು ಮಧ್ಯರಾತ್ರಿ ೧.೩೦ಕ್ಕೆ ಸುಮಾರಿಗೆ ಶಹಾಬಾದ್ ನಗರದ ಧಕ್ಕಾ ತಾಂಡಾದ ನಿವಾಸಿ ಹಣಮಂತ ಪವಾರ ಅವರ ಮನೆಯೊಳಗೆ ಐವರು ದರೋಡೆಕೋರರು ನುಗ್ಗಿ ಮನೆಯವರಿಗೆ ಸೀರೆಯಿಂದ ಕೈ ಕಾಲು ಕಟ್ಟಿ ಚಾಕು, ತಲ್ವಾರ ತೋರಿಸಿ ಮನೆಯಲ್ಲಿದ್ದ ನಗದು ಹಣ, ಬಂಗಾರ ಮತ್ತು ಬೆಳ್ಳಿ ಆಭರಣಗಳು ಹೀಗೆ ಒಟ್ಟು ೧೫,೨೬,೫೦೦ ರೂ. ಕಿಮ್ಮತ್ತಿನ ಆಭರಣ ಮತ್ತು ನಗದು ಹಣ ದರೋಡೆ ಮಾಡಿಕೊಂಡು ಹೋಗಿದ್ದಾರೆಂದು ಶಹಾಬಾದ್ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದರೋಡೆ ಬಳಿಕ ಸ್ಥಳಕ್ಕೆ ಬಂದ ಪತ್ತೆದಾರಿ ಶ್ವಾನ ರೀಟಾ ದರೋಡೆ ಸ್ಥಳದಿಂದ ಪತ್ತೆ ಮಾಡುತ್ತ ನೇರವಾಗಿ ಶಹಾಬಾದ್ ಪಟ್ಟಣದಲ್ಲಿನ ಆರೋಪಿಯ ಮನೆಗೆ ದೌಡಾಯಿಸಿದೆ. ಮಹತ್ವದ ಸುಳಿವು ಕೊಟ್ಟ ಶ್ವಾನ ರೀಟಾಳ ಮಾಹಿತಿ ಆಧಾರಿಸಿದ ಪೊಲೀಸರು ಹಂತ ಹಂತವಾಗಿ ತನಿಖೆ ನಡೆಸಿ ಕೊನೆಗೆ ಆರೋಪಿಗಳನ್ನು ಬಂಧಿಸಿದ್ದಾರೆ.