ಹೃದಯಘಾತಕ್ಕೆ ಕೋವಿಡ್ ಕಾರಣವಲ್ಲ,ಅನಗತ್ಯ ಭಯ ಬೇಡ

ಸಂ.ಕ.ಸಮಾಚಾರ ಕಲಬುರಗಿ: ಇತ್ತೀಚೆಗೆ ಯುವಕರು ಹೃದಯಾಘಾತಕ್ಕೆ ಒಳಗಾಗುತ್ತಿರುವುದರಿಂದ ಜನರಲ್ಲಿ ಹೃದಯದ ವಿಷಯದಲ್ಲಿ ಭಯದ ವಾತಾವರಣ ಮೂಡಿದೆ. ವಾಸ್ತವವಾಗಿ ಇದರ ಬಗ್ಗೆ ಅನಗತ್ಯ ಆತಂಕ ಪಡಬೇಕಿಲ್ಲ. ಇನ್ನು ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್‌ ಸ್ಪಷ್ಟಪಡಿಸಿದರು.

ಬುಧವಾರ ಇಲ್ಲಿನ ಜಗತ್ ವೃತ್ತದಲ್ಲಿರುವ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಕಲಬುರಗಿ ಮತ್ತು ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತ ಸಂಶೋಧನಾ ಆಸ್ಪತ್ರೆ ಸಹಯೋಗದೊಂದಿಗೆ ಆಯೋಜಿಸಿದ ಪತ್ರಕರ್ತರಿಗೆ ಹೃದಯ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಐ.ಸಿ.ಎಂ.ಆರ್. ಸೇರಿದಂತೆ ಅನೇಕ ಸಂಸ್ಥೆಗಳು ಅಧ್ಯಯನ ಕೈಗೊಂಡಿದ್ದು, ಎಲ್ಲಿಯೂ ಕೋವಿಡ್ ಲಸಿಕೆಯಿಂದ ಹೃದಯಾಘಾತದ ಬಗ್ಗೆ ಪುರಾವೆ ಸಿಕ್ಕಿಲ್ಲ, ಹೃದಯಘಾತದಿಂದ ಮೃತಪಟ್ಟಲ್ಲಿ ಸಾರ್ವಜನಿಕ ಆರೋಗ್ಯ ಸಂಸ್ಥೆಗೆ ವರದಿ ಮಾಡಲು ಸರ್ಕಾರ ನೋಟಿಪೈಡ್ ಡಿಸೀಸ್ ಎಂದು ನಿರ್ಧರಿಸಿದೆ. ಹೃದಯಾಘಾತದಿಂದ ಮೃತಪಟ್ಟಲ್ಲಿ ಮುಂದಿನ ದಿನದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಇದರಿಂದ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದರು.

ಹಾಸನದಲ್ಲಿ ಹೃದಯಾಘಾತದ ಹೆಚ್ಚಿನ ಪ್ರಕರಣ ಕಂಡುಬಂದ ಕಾರಣ ತಜ್ಞರ ಸಮಿತಿ ರಚಿಸಿದ್ದು, ವರದಿ ಬಂದ ನಂತರ‌ ಸರ್ಕಾರ ಕ್ರಮ ಕೈಗೊಳ್ಳಲಿದೆ, ಸಮಾಜದ ಸ್ವಾಸ್ಥಕ್ಕಾಗಿ ದಿನದ‌ 24 ಗಂಟೆ ಕಾರ್ಯನಿರ್ವಹಿಸುವ ಪತ್ರಕರ್ತರ ಅರೋಗ್ಯ ಕಾಳಜಿ ವಹಿಸುವ ಉದ್ದೇಶದಿಂದ ಕಲಬುರಗಿಯ ಜಯದೇವ ಆಸ್ಪತ್ರೆಯಿಂದ ಉಚಿತ ಹೃದ್ರೋಗ ಶಿಬಿರ ಆಯೋಜಿಸಿದ್ದು, ಇಲ್ಲಿ ಇ.ಸಿ.ಜಿ, 2ಡಿ ಎಕೋ, ಟಿ.ಎಂ.ಟಿ ತಪಾಸಣೆ ಮಾಡಲಾಗುತ್ತಿದೆ. ಇದರ ಲಾಭ ಪತ್ರಕರ್ತರು ಪಡೆಯಬೇಕು ಎಂದು ಅವರು ಮನವಿ ಮಾಡಿದರು.

ಕಲಬುರಗಿಯಲ್ಲಿ ಆರೋಗ್ಯ ಸೇವೆ ಸುಧಾರಣೆ ಹೆಚ್ಚಿನ ಯೋಜನೆಗಳು ಹಮ್ಮಿಕೊಳ್ಳಲಾಗಿದೆ. 200 ಹಾಸಿಗೆಯ ತಾಯಿ-ಮಕ್ಕಳ ಆಸ್ಪತ್ರೆ, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ, ನಿಮ್ಹಾನ್ಸ್ ಶಾಖೆ, ಇನ್ಸ್ಟಿಟ್ಯೂಟ್ ಆಫ್ ಡಯಾಬಟಾಲಾಜಿ ಕಟ್ಟಡ ಕೆಲಸ ಪ್ರಾರಂಭವಾಗಿದ್ದು, ಮುಂದಿನ ದಿನದಲ್ಲಿ ಕಣ್ಣಿನ ಚಿಕಿತ್ಸೆಗೆ ಮಿಂಟೋ ಆಸ್ಪತ್ರೆಯ ಶಾಖೆಯನ್ನು ಸಹ ಕಲಬುರಗಿಯಲ್ಲಿ ತೆರೆಯಲು ಚಿಂತನೆ ನಡೆದಿದೆ ಎಂದರು.

ಮಿತ ಅಹಾರ ಬಳಸಿ,ವ್ಯಾಯಾಮ ಮಾಡಿ: ಉತ್ತಮ ಅರೋಗ್ಯ ಕಾಪಾಡಿಕೊಳ್ಳಲು ಮಿತ ಆಹಾರ ಬಳಸಬೇಕು. ಪೌಷ್ಟಿಕಾಂಶವುಳ್ಳ ಅಹಾರ ಸೇವಿಸಬೇಕು. ತಂಬಾಕು ಉತ್ಪನ್ನ, ಮದ್ಯ ಸೇವನೆ ಬಿಡಬೇಕು. ವಿಶೇಷವಾಗಿ ಪಾಶ್ಚಿಮಾತ್ಯ ಶೈಲಿಯ ಆಹಾರಗಳಾದ ಪಿಜಾ, ಬರ್ಗರ್, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿನ್ನುವುದು ಬಿಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿನಿತ್ಯ ವ್ಯಾಯಾಮ, ಯೋಗಾಭ್ಯಾಸ, ಧ್ಯಾನ ಮಾಡಬೇಕೆಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಸಲಹೆ ನೀಡಿದರು.

ಕಲಬುರಗಿಯ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತ ಸಂಶೋಧನಾ ಆಸ್ಪತ್ರೆಯ ಮುಖ್ಯಸ್ಥ ಡಾ.ವೀರೇಶ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಮಾತನಾಡಿದರು.