ಆ್ಯಪಲ್ ಕಂಪನಿಯ ಸಿಒಒ ಆಗಿ ಭಾರತೀಯ ಮೂಲದ ಸಾಬಿಹ್ ಖಾನ್ ನೇಮಕ

ನವದೆಹಲಿ: ಭಾರತ ಮೂಲಕ ಸಾಬಿಹ್ ಖಾನ್ ಅವರನ್ನು ಅಮೆರಿಕದ ಆ್ಯಪಲ್ ಕಂಪನಿ ತನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ ನೇಮಕ ಮಾಡಿದೆ.
ಪ್ರಸ್ತುತ ಆ್ಯಪಲ್‌ನ ಕಾರ್ಯಾಚರಣೆಗಳ ಹಿರಿಯ ಉಪಾಧ್ಯಕ್ಷರಾಗಿರುವ 58 ವರ್ಷದ ಸಬಿಹ್ ಖಾನ್, ಸಂಸ್ಥೆಯಲ್ಲಿ ಮೂರು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಈ ತಿಂಗಳ ಕೊನೆಯಲ್ಲಿ ನಿವೃತ್ತಿಯಾಗಲಿರುವ ಸಿಒಒ ಜೆಫ್ ವಿಲಿಯಮ್ಸ್ ಅವರ ಜಾಗಕ್ಕೆ ಖಾನ್ ನೇಮಕಗೊಳ್ಳುತ್ತಿದ್ದಾರೆ.
1966ರಲ್ಲಿ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಜನಿಸಿದ್ದ ಖಾನ್, ತಮ್ಮ ಶಾಲಾ ಶಿಕ್ಷಣವನ್ನು ಸಿಂಗಪುರದಲ್ಲಿ ಪೂರೈಸಿದ್ದರು. ನಂತರ ಅಮೆರಿಕದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಉನ್ನತ ಪದವಿ ಪಡೆದಿದ್ದರು. 1995ರಲ್ಲಿ ಆ್ಯಪಲ್‌ನ ಪ್ರೊಕ್ಯೂರ್ಮೆಂಟ್ ವಿಭಾಗದಲ್ಲಿ ತಮ್ಮ ವೃತ್ತಿ ಪ್ರಯಾಣ ಆರಂಭಿಸುವ ಮೊದಲು ಅವರು ಜಿಇ ಪ್ಲಾಸ್ಟಿಕ್ಸ್‌ನಲ್ಲಿ ಅಪ್ಲಿಕೇಶನ್ ಡೆವಲಪ್ಮೆಂಟ್ ಎಂಜಿನಿಯರ್ ಮತ್ತು ಪ್ರಮುಖ ತಾಂತ್ರಿಕ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. 30 ವರ್ಷಗಳ ಅವಧಿಯಲ್ಲಿ, ಅವರು ಆಪಲ್‌ನ ಜಾಗತಿಕ ಪೂರೈಕೆ ಸರಪಳಿಯನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರು.
ದುಬಾರಿ ಬೆಲೆಯ ಮೊಬೈಲ್‌ ತಯಾರಿಕೆಯಲ್ಲಿ ಮುಂಚೂಣಿ ಸಂಸ್ಥೆಯಾದ ಆ್ಯಪಲ್, ತನ್ನ ಮುಂದಿನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (COO) ಭಾರತ ಮೂಲದ ಸಬಿಹ್ ಖಾನ್ ಅವರನ್ನು ನೇಮಕ ಮಾಡಿರುವುದಾಗಿ ಮಂಗಳವಾರ ಘೋಷಿಸಿದೆ. “ಸಬಿಹ್ ಖಾನ್ ಅವರು ತಮ್ಮ ದೀರ್ಘಕಾಲೀನ ಅನುಭವ, ತಂತ್ರಜ್ಞಾನದ ಅರಿವು ಮತ್ತು ಕಾರ್ಯನಿರ್ವಹಣೆಯ ಅನುಭವಗಳಿಂದ ಆ್ಯಪಲ್‌ನ ಮುಂದಿನ ಹಂತದ ಅಭಿವೃದ್ಧಿಗೆ ಸದೃಢ ನಾಯಕತ್ವ ಒದಗಿಸಲಿದ್ದಾರೆ”, ಎಂದು ಆಪಲ್ ತನ್ನ ಅಧಿಕೃತ ಹೇಳಿಕೆಯಲ್ಲಿ ವಿವರಿಸಿದೆ.