ಪ್ರಧಾನಿ ಮೋದಿಗೆ ಬ್ರೆಜಿಲ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವ

ನವದೆಹಲಿ: ಐದು ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಬ್ರೆಜಿಲ್‌ನ ಯಶಸ್ವಿ ಭೇಟಿಯ ನಂತರ ತಮ್ಮ ಕೊನೆಯ ಚರಣದಲ್ಲಿಂದು ನಮೀಬಿಯಾಗೆ ಪ್ರಯಾಣ ಬೆಳೆಸಿದರು.
ಇದಕ್ಕೂ ಮುನ್ನ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದ 17ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಬಳಿಕ ಬ್ರೆಜಿಲ್ ಅಧ್ಯಕ್ಷ ಲುಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಅಲ್ಲದೆ ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬ್ರೆಜಿಲ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ “ಗ್ರ್ಯಾಂಡ್ ಕಾಲರ್ ಆಫ್ ದಿ ನ್ಯಾಷನಲ್ ಆರ್ಡರ್ ಆಫ್ ದಿ ಸದರ್ನ್ ಕ್ರಾಸ್ “ ಪ್ರದಾನ ಮಾಡಲಾಯಿತು.
ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರು, ಎರಡು ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಮತ್ತು ಪ್ರಮುಖ ಜಾಗತಿಕ ವೇದಿಕೆಗಳಲ್ಲಿ ಭಾರತ-ಬ್ರೆಜಿಲ್ ಸಹಕಾರವನ್ನು ಹೆಚ್ಚಿಸಲು ನೀಡಿದ ಗಮನಾರ್ಹ ಕೊಡುಗೆಗಳನ್ನು ಗುರುತಿಸಿ, ಬ್ರೆಜಿಲ್​ ಸರ್ಕಾರ ಈ ಗೌರವವನ್ನು ಪ್ರದಾನ ಮಾಡಿದೆ. ಇನ್ನು, 2014 ರ ಮೇ ತಿಂಗಳಲ್ಲಿ ಪ್ರಧಾನಿ ಮೋದಿ ಅಧಿಕಾರ ವಹಿಸಿಕೊಂಡ ನಂತರ ವಿದೇಶಿ ಸರ್ಕಾರವೊಂದು ಅವರಿಗೆ ನೀಡುತ್ತಿರುವ 26 ನೇ ಅಂತರರಾಷ್ಟ್ರೀಯ ಗೌರವ ಇದಾಗಿದೆ.
ಇದಕ್ಕೂ ಮೊದಲು ಘಾನಾ ದೇಶದಲ್ಲಿ ‘ದಿ ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಘಾನಾ’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.