ಯೆಮೆನ್: ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಮುಂದೂಡಲಾಗಿದೆ. ಜುಲೈ 16ರಂದು ಯೆಮೆನ್‌ನಲ್ಲಿ ನಿಮಿಷಾ ಅವರನ್ನು ಗಲ್ಲಿಗೇರಿಸಲು ದಿನಾಂಕ ನಿಗದಿ ಮಾಡಲಾಗಿತ್ತು.
ಯೆಮೆನ್‌ನ ಸ್ಥಳೀಯ ಅಧಿಕಾರಿಗಳು ನಿಮಿಷಾ ಪ್ರಿಯಾ ಅವರ ಗಲ್ಲು ಶಿಕ್ಷೆಯನ್ನು ಮುಂದೂಡಿಕೆ ಮಾಡಿದ್ದಾರೆ. ನಿಮಿಷಾ ಪ್ರಿಯಾ ಅವರನ್ನು ಉಳಿಸಲು ಭಾರತದ ಅಧಿಕಾರಿಗಳು ಪ್ರಯತ್ನ ನಡೆಸಬೇಕು ಎಂದು ಒತ್ತಡ ಹೇರಲಾಗಿತ್ತು.
ನಿಮಿಷಾ ಪ್ರಿಯಾ ಅವರು ಯೆಮೆನ್ ದೇಶದ ಪ್ರಜೆ ತಲಾಲ್ ಅಬ್ದು ಮಹ್ದಿ ಎಂಬುವವರ ಹತ್ಯೆ ಪ್ರಕರಣದಲ್ಲಿ ಅಪರಾಧಿ. ಯೆಮೆನ್ ವಿಚಾರಣಾ ನ್ಯಾಯಾಲಯ 2020ರಲ್ಲಿ ನಿಮಿಷಾ ಪ್ರಿಯಾ ಅವರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಯೆಮೆನ್ ಸುಪ್ರೀಂಕೋರ್ಟ್ 2023ರ ನವೆಂಬರ್‌ನಲ್ಲಿ ಈ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು.
ಕೆಲವು ದಿನಗಳ ಹಿಂದೆ ನಿಮಿಷಾ ಪ್ರಿಯಾ ಅವರನ್ನು ಜುಲೈ 16ರಂದು ಮರಣದಂಡನೆಗೆ ಗುರಿಪಡಿಸಲಾಗುತ್ತದೆ ಎಂದು ವರದಿಗಳು ಬಂದಿದ್ದವು. ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿರುವ ನಿಮಿಷಾ ಪ್ರಿಯಾ ಅವರ ಕುಟುಂಬದವರಿಗೂ ಈ ಕುರಿತು ಮಾಹಿತಿ ನೀಡಲಾಗಿತ್ತು.
ನಿಮಿಷಾ ಪ್ರಿಯಾ ನರ್ಸ್ ಆಗಿ ಯೆಮೆನ್‌ಗೆ ತೆರಳಿದ್ದರು. ಅವರು ಅಲ್ಲಿ ಯೆಮೆನ್ ಪ್ರಜೆ ತಲಾಲ್ ಅಬ್ದು ಮಹ್ದಿ ಜೊತೆ ಸೇರಿ ಕ್ಲಿನಿಕ್ ತೆರೆದಿದ್ದರು. ಆದರೆ ಈ ವ್ಯವಹಾರದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಆಗ ತಲಾಲ್ ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ನಿಮಿಷಾ ಪೊಲೀಸರ ಮೊರೆ ಹೋಗಿದ್ದರು.
ನಿಮಿಷಾ ಪ್ರಿಯಾ ದೇಶ ಬಿಟ್ಟು ಹೋಗದಂತೆ ತಲಾಲ್ ಪಾಸ್‌ಪೋರ್ಟ್ ಇಟ್ಟುಕೊಂಡಿದ್ದರು. ಅದನ್ನು ವಾಪಸ್ ಪಡೆಯಲು ತಲಾಲ್‌ಗೆ ಮಾದಕ ವಸ್ತುವಿನ ಇಂಜೆಕ್ಷನ್ ನೀಡಿ ಅವರನ್ನು ಹತ್ಯೆ ಮಾಡಲಾಗಿದೆ ಎಂಬುದು ಆರೋಪವಾಗಿತ್ತು. ಬಳಿಕ ಇದು ಸಾಬೀತಾಗಿದ್ದು, ಈ ಅಪರಾಧದಲ್ಲಿ ನಿಮಿಷಾ ಪ್ರಿಯಾ ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.
ಕೇರಳ ರಾಜ್ಯ, ಭಾರತದಲ್ಲಿ ನಿಮಿಷಾ ಪ್ರಿಯಾ ಅವರನ್ನು ರಕ್ಷಣೆ ಮಾಡಲು ಹಲವಾರು ಪ್ರಯತ್ನಗಳು ನಡೆಯುತ್ತಿವೆ. ಕೇರಳದ ಸುನ್ನಿ ಮುಸ್ಲಿಂ ಧಾರ್ಮಿಕ ಗುರು ಕಾಂತಪುರಂ ಎ. ಪಿ. ಅಬೂಬಕ್ಕರ್ ಮುಸ್ಲಿಯಾರ್ ಮಧ್ಯ ಪ್ರವೇಶಿಸಿದ್ದಾರೆ.
ಯೆಮೆನ್‌ನಲ್ಲಿರುವ ಧಾರ್ಮಿಕ ಮುಖಂಡ ಶೇಖ್ ಹಬೀರ್ ಉಮರ್ ನೇತೃತ್ವದಲ್ಲಿ ಸಭೆಯನ್ನು ನಡೆಸಿದ್ದಾರೆ. ನಿಮಿಷಾ ಮಾಡಿದ ತಪ್ಪನ್ನು ಕ್ಷಮಿಸಲು ಸಂತ್ರಸ್ತರು ಮತ್ತು ಅವರ ಕುಟುಂಬಕ್ಕೆ ಪರಿಹಾರ ರೂಪದಲ್ಲಿ ‘ಬ್ಲಡ್ ಮನಿ’ ನೀಡುವ ಕುರಿತು ಮಾತುಕತೆಗಳು ನಡೆಯುತ್ತಿವೆ.
ಈ ಹಿಂದೆಯೂ ನಿಮಿಷಾ ಉಳಿಸಲು ಭಾರತ ಪ್ರಯತ್ನ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಆಗ ಅವರನ್ನು ರಕ್ಷಿಸುವುದಕ್ಕೆ ಸಾಧ್ಯವಾದದ್ದನ್ನು ಮಾಡಲಾಗುತ್ತಿದೆ. ಆದರೆ ಅಲ್ಲಿನ ಪರಿಸ್ಥಿತಿ ಸರಿ ಇಲ್ಲದ ಕಾರಣ ಏನೂ ಮಾಡಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಹೇಳಿತ್ತು.
ಭಾರತದ ಸುಪ್ರೀಂಕೋರ್ಟ್‌ಗೆ ಸೇವ್ ನಿಮಿಷ ಪ್ರಿಯಾ ಇಂಟರ್ ನ್ಯಾಷನಲ್ ಆಕ್ಷನ್ ಕೌನ್ಸಿಲ್ ಅರ್ಜಿಯೊಂದನ್ನು ಸಲ್ಲಿಕೆ ಮಾಡಿತ್ತು. ನಿಮಿಷಾ ಅವರನ್ನು ರಕ್ಷಣೆ ಮಾಡಲು ರಾಜತಾಂತ್ರಿಕ ಮಾರ್ಗವನ್ನು ಅನುಸರಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.