ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಕೋಟ್ಯಾಂತರ ರೂಪಾಯಿ ತೆರಿಗೆ ವಂಚನೆ ಪ್ರಕರಣದ ಕುರಿತು ಲೋಕಾಯುಕ್ತರು ತನಿಖೆ ನಡೆಸಲಿದ್ದಾರೆ. ಪ್ರಕರಣದ ಕುರಿತು ಲೋಕಾಯುಕ್ತ ತನಿಖೆ ನಡೆಸಲು ಪಾಲಿಕೆಯ ಪರಿಷತ್ ಸಭೆಯಲ್ಲಿಯೇ ಚರ್ಚೆ ನಡೆದಿತ್ತು.
ಬೆಳಗಾವಿ ಹೊರವಲಯದಲ್ಲಿರುವ ವೆಗಾ ಕಂಪನಿಯಿಂದ ತೆರಿಗೆ ವಸೂಲಾತಿಯಲ್ಲಿ ಗೋಲ್ ಮಾಲ್ ಆಗಿದೆ ಎನ್ನುವ ಸುದ್ದಿ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಪರಿಷತ್ ಸಭೆಯಲ್ಲಿ ಕಾವೇರಿದ ಚರ್ಚೆ ನಡೆದಿತ್ತು. ಕೊನೆಗೆ ಈ ಪ್ರಕರಣವನ್ನು ಲೋಕಾಯುಕ್ತರಿಗೆ ಕೊಡುವ ರೂಲಿಂಗ್ ನೀಡಲಾಗಿತ್ತು.
ಈ ಕುರಿತಂತೆ ‘ಸಂಯುಕ್ತ ಕರ್ನಾಟಕ’ ಪತ್ರಿಕೆ ವರದಿ ಮಾಡಿತ್ತು. ಆರಂಭದಲ್ಲಿ ಮಾಧ್ಯಮಗಳ ಮೂಲಕ ಪ್ರಕರಣ ಹೊರ ಬಿದ್ದಾಗ ಪ್ರಾಥಮಿಕ ವಿಚಾರಣೆ ನಡೆಸಿದ್ದ ಆಯುಕ್ತರು ನಾಲ್ವರಿಗೆ ಕಾರಣ ಕೇಳಿ ನೋಟೀಸ್ ನೀಡಿದ್ದರು. ಅಷ್ಟೇ ಅಲ್ಲ ಅಂತರಿಕ ವಿಚಾರಣೆ ನಡೆಸಿದ ಸಂದರ್ಭದಲ್ಲಿ ತೆರಿಗೆ ವಂಚನೆ ನಡೆದಿದ್ದು ಬೆಳಕಿಗೆ ಬಂದಿತ್ತು.
ಅಚ್ಚರಿಯ ಸಂಗತಿ ಎಂದರೆ, ಈ ಪ್ರಕರಣದಲ್ಲಿ ತೆರಿಗೆ ವಸೂಲಾತಿಗೆ ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡಬೇಕಾದ ಸಂಬಂಧಿಸಿದ ಸ್ಥಾಯಿ ಸಮಿತಿಯ ಕುರಿತು ಈಗ ಲೋಕಾಯುಕ್ತರು ವಿಚಾರಣೆ ನಡೆಸುವ ಸಾಧ್ಯತೆಗಳಿವೆ.