ಈಗ `ಕೌನ್ ಬನೇಗಾ (ಕ) ರೋಡ್’ಪತಿ ಸದ್ದು, ವೈರಲ್ ಆದ ರಸ್ತೆ ಗುಂಡಿಗಳು!

ಬಿ. ಅರವಿಂದ
ಹುಬ್ಬಳ್ಳಿ:
ಈಗ ಕೌನ್ ಬನೇಗಾ ಕರೋಡ್‌ಪತಿ' ಮಾತ್ರವಲ್ಲ... ಕೌನ್ ಬನೇಗಾ (ಕ) ``ರೋಡ್'' ಪತಿ ಕೂಡ ಫೇಮಸ್! ಇದು ಅಚ್ಚರಿಯಾದರೂ ಸತ್ಯ. ಕಳೆದೆರಡು ದಿನಗಳಿಂದ ಈರೋಡ್’ ಪತಿ ಯೂ ಟ್ಯೂಬ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ಅಮಿತಾಬ್ ಬಚ್ಚನ್ ಕರೋಡ್‌ಪತಿ ದೇಶದ ವಿದ್ಯಾವಂತರನ್ನು ಪರಿಚಯಿಸಿದರೆ, ಉತ್ತರ ಕನ್ನಡ ಜಿಲ್ಲೆಯ ಯೂ ಟ್ಯೂಬರ್ ಬಾಳೇಸರ ವಿನಾಯಕ ಅವರ `ಕೌನ್ ಬನೇಗಾ (ಕ)ರೋಡ್’ ಪತಿ” ರಾಜ್ಯದ ಪ್ರಸಕ್ತ ಕುರೂಪ ಸ್ಥಿತಿಯನ್ನು ತೆರೆದಿಡುತ್ತದೆ.
ಎರಡು ದಿನಗಳ ಹಿಂದೆ ತಮ್ಮ ವಿನು' ಚಾನೆಲ್‌ನಲ್ಲಿ ಈಬಾಳೇಸರ ಭಾವ’ನ ವಿಡಂಬನಾತ್ಮಕ ರೋಡ್' ಪತಿ ಅಪ್‌ಲೋಡ್ ಆಗಿದ್ದು ಈಗಾಗಲೇ ದೇಶದ ಇತರ ರಾಜ್ಯಗಳು ಹಾಗೂ ವಿದೇಶಗಳೆಲ್ಲಡೆ ಸೇರಿ ಸಹಸ್ರಾರು ಮಂದಿಯನ್ನು ತಲುಪಿಸಿದೆ. ತನ್ಮೂಲಕ ರಾಜ್ಯದ ದುಸ್ಥಿತಿಯ ಅನಾವರಣವೀಗ ವೈರಲ್ ಆಗಿ ಆಳುವವರ ಮುಖಕ್ಕೆ ಚಂದನೆಯ ಮಂಗಳಾರತಿಯನ್ನು ಬೆಳಗಿದೆ!! ಇದು ಶಿರಸಿ ಮಾತ್ರವಲ್ಲ, ಬಹಳಷ್ಟು ಕಡೆ ಇದೇ ಗ್ರಹಚಾರ’ ಎಂಬ ಟ್ಯಾಗ್ ಲೈನ್‌ನೊಂದಿಗೆ ಆರಂಭವಾಗುವ ಕಥಾನಕ, ಮೂಲ ಕರೋಡ್‌ಪತಿ'ಯ ಅಮಿತಾಬ್ ಬಚ್ಚನ್ ಆಗಮನದೊಂದಿಗೆ ತೆರದುಕೊಳ್ಳುತ್ತದೆ. ಹಾಟ್‌ಸೀಟ್‌ನಲ್ಲಿ ಖ್ಯಾತ ನಟ ಅಕ್ಷಯ್‌ಕುಮಾರ್ ಮತ್ತು ಅವರ ಸಹ ಸ್ಪರ್ಧಿಯಾಗಿ ನಿವೃತ್ತ ಪೊಲೀಸ್ ಅಧಿಕಾರಿ ಪ್ರಕಾಶ್ ಸಿಂಗ್ ಇರುತ್ತಾರೆ. ಒಂದು ಕೋಟಿಯ ಕೊನೇ ಪ್ರಶ್ನೆಯಾಗಿ ಚಿತ್ರ ನೋಡಿ ಉತ್ತರ ಹೇಳಿ ಎನ್ನುವ ಮೂಲಕ ಅಮಿತಾಬ್ ಶಿರಸಿ ನಿಲೇಕಣಿಯ ಗುಂಡಿಗಳು ಬಿದ್ದ ರಸ್ತೆಯನ್ನು ತೋರಿಸುತ್ತಾರೆ. ನಿಲೇಕಣಿ ರೋಡ್ ಶಿರಸಿ, ಹುಬ್ಬಳ್ಳಿ ರೋಡ್ ಶಿರಸಿ, ಉಲ್ಲಾಳ ಮೇನ್ ರೋಡ್ ಬೆಂಗಳೂರು ಹಾಗೂ ಚಂದ್ರಲೋಕ ಎಂಬ ಆಪ್ಷನ್‌ಗಳನ್ನು ಸ್ಪರ್ಧಿಗಳ ಮುಂದೆ ಅಮಿತಾಬ್ ಇಡುತ್ತಾರೆ. ಪರಸ್ಪರ ಚರ್ಚಿಸುವ ಸ್ಪರ್ಧಿಗಳು ಎಲ್ಲೋ ನೋಡಿದಂತಿದೆ ಎನ್ನುತ್ತಲೇ ಸ್ಪಷ್ಟತೆಗೆ ಬರುವಲ್ಲಿ ವಿಫಲರಾಗುತ್ತಾರೆ. ಕೊನೆಗೆ ಕರೋಡ್‌ಪತಿ ನಿಯಮದಂತೆಫೋನ್ ಅ ಫ್ರೆಂಡ್’ ಲೈಫ್ ಲೈನ್‌ಗೆ ಸಿದ್ಧರಾಗುತ್ತಾರೆ.
ಬಾಳೇಸರ ಭಾವಂಗೆ ಫೋನ್ ಮಾಡುವ, ನೋಡುವ...' ಎಂದು ತೀರ್ಮಾನಕ್ಕೆ ಬಂದಾಗ ಅಮಿತಾಬ್ ಬಾಳೇಸರ್ ಭಾವಂಗೆ ಫೋನ್ ಮಾಡಿಕೊಡುತ್ತಾರೆ. ಆಪ್ಷನ್‌ಗಳನ್ನು ಕೇಳಿದ ಭಾವ,ಇದು ಪಕ್ಕಾ ನಿಲೇಕಣಿ ರೋಡ್ ಶಿರಸಿ’ ಎಂದು ಉತ್ತರಿಸುತ್ತಾರೆ. ಕೊನೆಯಲ್ಲಿ ಎಂದಿನ ಡ್ರಾಮಾಬಾಜಿಯೊಂದಿಗೆ, `ಉತ್ತರ ಸರಿ’ ಎಂಬ ಘೋಷಣೆಯಾಗಿ ಈ ವಿಡಂಬನಾತ್ಮಕ ಕೋಟಿ ರೂಪಾಯಿಗಳನ್ನು ಸ್ಪರ್ಧಿಗಳು ಗೆಲ್ಲುತ್ತಾರೆ !!
ಇದು ಮೇಲ್ನೋಟದ ಕಥಾನಕ. ಆದರೆ ಅಂತರ್ಯದಲ್ಲಿ ಇದು ಈಗಿನ ರಾಜ್ಯದೆಲ್ಲ ರಸ್ತೆಗಳ ಅರ್ಥಪೂರ್ಣ ಚಿತ್ರಣ. ಹಾಗಾಗಿಯೇ ಆಪ್ಷನ್‌ಗಳನ್ನು ಕೊಟ್ಟಾಗ ಸ್ಪರ್ಧಿಗಳು ಅದೂ ಇರಬಹುದು, ಇದೂ ಇರಬಹುದು ಎನ್ನುವ ಗೊಂದಲಕ್ಕೆ ಬಿದ್ದು ಲೈಫ್ ಲೈನ್ ಬಳಸುವ ತೀರ್ಮಾನಕ್ಕೆ ಬರುತ್ತಾರೆ. ಬಾಳೇಸರ ವಿನಾಯಕ ಅವರ ಪರಿಕಲ್ಪನೆಗೆ ಈ ಕಾರಣಕ್ಕಾಗಿಯೇ ಅರ್ಥ ಬಂದಿದೆ. ಅಲ್ಲದೇ, ಅಮಿತಾಬ್ ಧ್ವನಿ ಮತ್ತು ಅಕ್ಷಯ್ ಕುಮಾರ್ ಧ್ವನಿಗಳನ್ನು ಸಮರ್ಥವಾಗಿ ಮಿಮಿಕ್ರಿ ಮಾಡಿದ್ದಾರೆ.
ಎಲ್ಲೂ ಬೋರ್ ಹೊಡೆಸದಂತೆ ೬ ನಿಮಿಷಗಳ ಒಳಗೆ ಮುಗಿಯುವ (ಕ) ರೋಡ್ ಪತಿ, ಯಾರನ್ನೂ ತೆಗಳದೇ, ಯಾವ ವಿಮರ್ಶೆಗೂ ಇಳಿಯದೇ, ಕರ್ನಾಟಕದ ಆಡಳಿತಕ್ಕೆ ಕನ್ನಡಿ ಹಿಡಿದಿದೆ.

ಇದೊಂದೇ ಉಳಿದ ದಾರಿ…
ಯೂ ಟ್ಯೂಬ್ ಮತ್ತಿತರ ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಸರ್ಕಾರಗಳ ಅಸಡ್ಡೆಗೆ ಚಾಟಿ ಬೀಸುವ ದಿನಗಳಿವು. ರಾಜ್ಯದ ರಸ್ತೆಗಳ ದುರ್ಗತಿ ಕುರಿತು ಕರ್ನಾಟಕದಿಂದ ಸಮರ್ಥವಾದ ಒಂದೇ ಒಂದು ಯೂ ಟ್ಯೂಬ್ ಕಾರ್ಯಕ್ರಮ ಈತನಕ ಬಂದಿರಲಿಲ್ಲ. (ಕ) ರೋಡ್' ಪತಿಯಿಂದಾಗಿ ಆಡಳಿತ ಯಂತ್ರಕ್ಕೆ ಸಹಜವಾಗಿ ಬಿಸಿ ಮುಟ್ಟಲಿದೆ. ಅಲ್ಲದೇ, ವ್ಯಾಪಕವಾಗಿ ಶೇರ್ ಆಗಿರುವ ಈ ಕಾರ್ಯಕ್ರಮವನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷಿಕ ಯೂ ಟ್ಯೂಬರ್‌ಗಳೂ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಏಕೆಂದರೆಗ್ಯಾರಂಟಿ’ ರಾಜ್ಯವೊಂದರ ದುಸ್ಥಿತಿಯ ಅತ್ಯಂತ ಪರಿಣಾಮಕಾರಿ ವಿಡಂಬನೆ ಇದಾಗಿದೆ. ಇದೇನು ಖುಷಿಯ ವಿಷಯಲ್ಲ ನಿಜ. ಆದರೆ ಕೊನೇ ಪಕ್ಷ ಮಳೆ ನಿಂತ ನಂತರವಾದರೂ ಸರ್ಕಾರ ರಸ್ತೆಗಳ ಕಡೆಗೆ ಗಮನ ಕೊಡಲು ಪೂರಕವಾದೀತು ಎಂಬುದಷ್ಟೇ ಸಾರ್ವತ್ರಿಕ ಆಶಯವಾಗಿದೆ.