ಹುಬ್ಬಳ್ಳಿ-ಬೆಳಗಾವಿ ನಡುವೆ ಡಿಫೆನ್ಸ್ ಕಾರಿಡಾರ್ ಬೇಕು

ಬೆಂಗಳೂರು: ಡಿಫೆನ್ಸ್ ಕಾರಿಡಾರ್ ನಮ್ಮ ಹಕ್ಕಾಗಿದ್ದು, ಕೋಲಾರ-ಚಿಕ್ಕಬಳ್ಳಾಪುರ ಮತ್ತು ಹುಬ್ಬಳ್ಳಿ-ಬೆಳಗಾವಿ ನಡುವೆ ನಮಗೆ ಎರಡು ಡಿಫೆನ್ಸ್ ಕಾರಿಡಾರ್ ಕೊಡಬೇಕು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.
ಡಿಫೆನ್ಸ್ ಕಾರಿಡಾರ್ ನಮ್ಮ ಹಕ್ಕು ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ರಕ್ಷಣೆ ಮತ್ತು ವೈಮಾಂತರಿಕ್ಷ ವಲಯದಲ್ಲಿ ನಾವು ದೇಶಕ್ಕೇ ಅಗ್ರಸ್ಥಾನದಲ್ಲಿದ್ದೇವೆ. ಹೀಗಾಗಿ ನಮಗೆ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಭಾಗದಲ್ಲಿ ಒಂದೊಂದು ಡಿಫೆನ್ಸ್ ಕಾರಿಡಾರ್ ಅಗತ್ಯವಾಗಿ ಬೇಕಾಗಿದೆ. ಬೆಳಗಾವಿಯಲ್ಲಿ ಈಗ ಏಕಸ್ ತರಹದ ದೈತ್ಯ ಕಂಪನಿಗಳಿವೆ. ಬೇರೆ ರಾಜ್ಯದವರಿಗೆ ಡಿಫೆನ್ಸ್ ಕಾರಿಡಾರ್ ಕೊಡುವುದರಲ್ಲಿ ತಪ್ಪಿಲ್ಲ. ಆದರೆ, ನಮಗೆ ಸಲ್ಲಬೇಕಾದ್ದು ಸಲ್ಲಲೇಬೇಕು ಹಿಂದೆ ಮಾಡಿದ ತಪ್ಪು ಕೇಂದ್ರ ಸರ್ಕಾರಕ್ಕೆ ಅರಿವಾಗಿದೆ. ನಮ್ಮ ಹಿಂದಿನ ಭೇಟಿಗಳಲ್ಲಿ ರಾಜನಾಥ್ ಸಿಂಗ್ ಅವರೇ ಇದನ್ನು ಒಪ್ಪಿಕೊಂಡಿದ್ದರು. ಫೆಬ್ರವರಿಯಲ್ಲಿ ಅವರು ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಬಂದಿದ್ದಾಗಲೂ ಈ ಸಂಗತಿಯನ್ನು ಪ್ರಸ್ತಾಪಿಸಲಾಗಿತ್ತು ಎಂದರು.
ಏರೋಸ್ಪೇಸ್ ಮತ್ತು ಡಿಫೆನ್ಸ್ ವಲಯದಲ್ಲಿ ರಾಷ್ಟ್ರಕ್ಕೆ ನಮ್ಮ ರಾಜ್ಯದ ಕೊಡುಗೆ ಶೇ. 65 ರಷ್ಟಿದ್ದರೂ ಡಿಫೆನ್ಸ್ ಕಾರಿಡಾರ್ ದೊರೆತಿಲ್ಲ. ನಮಗಿಂತಲೂ ಕಡಿಮೆ ಕೊಡುಗೆ ನೀಡುತ್ತಿರುವ ತಮಿಳುನಾಡು ಮತ್ತು ಉತ್ತರಪ್ರದೇಶಕ್ಕೆ ಡಿಫೆನ್ಸ್ ಕಾರಿಡಾರ್ ನೀಡಲಾಗಿದೆ. ಈ ಲೋಪವನ್ನು ಹಿಂದೆಯೇ ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದೇನೆ. ಡಿಫೆನ್ಸ್ ಕಾರಿಡಾರ್ ನಮ್ಮ ಹಕ್ಕಾಗಿದ್ದು, ಕೋಲಾರ-ಚಿಕ್ಕಬಳ್ಳಾಪುರ ಮತ್ತು ಹುಬ್ಬಳ್ಳಿ-ಬೆಳಗಾವಿ ನಡುವೆ ನಮಗೆ ಎರಡು ಡಿಫೆನ್ಸ್ ಕಾರಿಡಾರ್ ಕೊಡಬೇಕು. ಇದನ್ನು ಮನದಟ್ಟು ಮಾಡಿಕೊಡಲೆಂದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ದೆಹಲಿಯಲ್ಲಿ ಭೇಟಿಮಾಡಿ, ನಮ್ಮ ಹಕ್ಕನ್ನು ಪ್ರತಿಪಾದಿಸಲಿದ್ದೇವೆ ಎಂದಿದ್ದಾರೆ.